ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 'ಇ-ಪ್ರಸಾದ' ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯಡಿ, ಉಡುಪಿ ಕೊಲ್ಲೂರು ಮೂಕಾಂಬಿಕಾ ದೇವಾಲಯ, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ಸೇರಿದಂತೆ ರಾಜ್ಯದ 14 ಪ್ರಮುಖ ದೇವಾಲಯಗಳ ಪ್ರಸಾದವನ್ನು ಸಿಎಸ್‌ಸಿ ಇ-ಗವರ್ನೆನ್ಸ್ ಸಹಯೋಗದೊಂದಿಗೆ ಮನೆ ಬಾಗಿಲಿಗೆ ತಲುಪಿಸಲಾಗುವುದು. ಭಕ್ತರು ಕಲ್ಲುಸಕ್ಕರೆ, ಭಸ್ಮ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಪಡೆಯಬಹುದು.
ಬೆಂಗಳೂರು (ಮಾ.27): ರಾಜ್ಯದಲ್ಲಿರುವ ಪ್ರತಿಷ್ಠಿತ ದೇವಾಲಗಳ ಪ್ರಸಾದವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಹೊಸ ಯೋಜನೆ ಇ-ಪ್ರಸಾದ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ 14 ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ಪ್ರಸಾದ ಸೇವೆಗೆ ಚಾಲನೆ ನೀಡಿದ್ದಾರೆ. ಭಕ್ತರ ಮನೆ ಬಾಗಿಲಿಗೆ ಧಾರ್ಮಿಕ ದತ್ತಿ ಇಲಾಖೆಯ ಹಲವು ದೇವಾಲಯ ಪ್ರಸಾದವನ್ನು ಪೂರೈಕೆ ಮಾಡಲಾಗುತ್ತದೆ. ಇದರಲ್ಲಿ ಉಡುಪಿಯ ಕೊಲ್ಲೂರಿನ ಮೂಕಾಂಬಿಕಾ ದೇವಾಲಯ, ಬೆಂಗಳೂರಿನ ಗವಿಪುರಂ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ ಸೇರಿದಂತೆ 14 ದೇವಾಲಯಗಳ ಪ್ರಸಾದ ಸೇವೆ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಮುಜರಾಯಿ ಇಲಾಖೆಯ ಪ್ರಮುಖ ದೇವಾಲಯಗಳ ಪ್ರಸಾದವನ್ನು ಭಕ್ತಾದಿಗಳ ಮನೆ ಬಾಗಿಲಿಗೆ "CSC e-Governance Services India Limited ಸಹಯೋಗದೊಂದಿಗ ಅನುಷ್ಠಾನಗೊಳಿಸಿ ಜಾರಿಗೆ ತರಲಾಗುತ್ತಿದೆ.
ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಶಿಫಾರಸು ಬಗ್ಗೆ ಆಂಧ್ರ ಸಿಎಂ ಜತೆ ಚರ್ಚೆ: ಸಚಿವ ರಾಮಲಿಂಗಾರೆಡ್ಡಿ
ಯಾವೆಲ್ಲಾ ದೇವಸ್ಥಾನದ ಪ್ರಸಾದ ಮನೆಗೆ ತರಿಸಿಕೊಳ್ಳಬಹುದು?
1. ಶ್ರೀ ವಿನಾಯಕ ಸ್ವಾಮಿ ದೇವಾಲಯ ಜಯನಗರ ಬೆಂಗಳೂರು.
2. ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ಮಂಡ್ಯ ಜಿಲ್ಲೆ
3. ಶ್ರೀ ಶ್ರೀ ಕಂಠೇಶ್ವರ ಸ್ವಾಮಿ ದೇವಾಲಯ, ನಂಜನಗೂಡು, ಮೈಸೂರು,
4. ಶ್ರೀ ಪುಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು, ಕೋಲಾರ ಜಿಲ್ಲೆ.
5. ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ, ಹಲಸೂರು ಬೆಂಗಳೂರು,
6. ಶ್ರೀ ಮೂಕಾಂಬಿಕಾ ದೇವಾಲಯ, ಕೊಲ್ಲೂರು ಉಡುಪಿ ಜಿಲ್ಲೆ.
7. ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಗವೀಪುರಂ, ಬೆಂಗಳೂರು,
8. ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ ಬೀದರ್
9. ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಬೆಳಗಾವಿ
10. ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ
11. ಶ್ರೀ ಕನಕದುರ್ಗಮ್ಮ ದೇವಾಲಯ , ಬಳ್ಳಾರಿ
12. ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ, ವಿಜಯನಗರ ಜಿಲ್ಲೆ
13. ಶ್ರೀ ಹುಲಿಗಮ್ಮ ದೇವಾಲಯ, ಕೊಪ್ಪಳ
14. ಶ್ರೀ ಗುರುದತ್ತಾತ್ರೇಯ ಸ್ವಾಮಿ ದೇವಾಲಯ, ಗುಲ್ಬರ್ಗ
ಈ ಮೇಲ್ಕಂಡ ದೇವಾಲಯಗಳಲ್ಲಿ ಕಲ್ಲುಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ, ಕುಂಕುಮ, ಬಿಲ್ವಪತ್ರೆ, ಹೂವು, ತುಳಸಿ, ದೇವಾಲಯದ ಸ್ತೋತ್ರ ಗಳನ್ನು ತರಿಸಿ ಕೊಳ್ಳಬಹುದು.
