ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರನ್ನು ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹೇಳಿದರು.
ಬೆಂಗಳೂರು (ಜೂ.19): ರಾಜ್ಯ ಕಾಂಗ್ರೆಸ್ ಸರ್ಕಾರ ಗುತ್ತಿಗೆ ಮೀಸಲು ಬಳಿಕ ವಸತಿ ಯೋಜನೆಯಲ್ಲಿಯೂ ಮುಸ್ಲಿಂ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದೆ. ಇಂದಿನ ಕ್ಯಾಬಿನೆಟ್‌ನಲ್ಲಿ ಈ ವಿಚಾರ ಚರ್ಚೆಯಾಗಿ ಒಪ್ಪಿಗೆ ಸಿಕ್ಕಿದೆ. ವಸತಿ ಇಲಾಖೆ ಸಚಿವರಾಗಿರುವ ಜಮೀರ್ ಅಹಮದ್, ತಮ್ಮ ಸಮುದಾಯಕ್ಕೆ ವಸತಿ ಯೋಜನೆಯಲ್ಲೂ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದ್ದಾರೆ.
ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ವಸತಿ ಯೋಜನೆಯಲ್ಲಿ ನಿಗದಿಪಡಿಸುವ ಗುರಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 10 ನಿಗದಿಯಾಗಿದೆ. ಶೇ. 10 ಮೀಸಲಾತಿಯನ್ನು ಶೇ. 15ಕ್ಕೆ ಹೆಚ್ಚಿಸುವ ಬಗ್ಗೆ ವಿಷಯ ತರಲಾಗಿದೆ. ಇಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದೆ. ವಸತಿ ಹಂಚಿಕೆಯಲ್ಲಿ ಶೇ.10 ರಿಂದ ಶೇ.15 ಕ್ಕೆ ಮುಸ್ಲಿಂ ಮೀಸಲಾತಿ ಹೆಚ್ಚಳಕ್ಕೆ ಕ್ಯಾಬಿನೆಟ್ ಕೂಡ ಅಸ್ತು ಎಂದಿದೆ.
ಈ ಬಗ್ಗೆ ಮಾತನಾಡಿರುವ ಸಚಿವ ಎಚ್.ಕೆ ಪಾಟೀಲ್, ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.10 ರಷ್ಡು ಇದ್ದ ಮೀಸಲಾತಿಯನ್ನ ಶೇ. 15 ರಷ್ಟು ಏರಿಕೆ ಮಾಡಲಾಗಿದೆ. ಸಾಚಾರ್ ಕಮಿಟಿ ವರದಿಯನ್ನೂ ಕೂಡ ಈಗ ಕೇಂದ್ರ ಪರಿಗಣಿಸುತ್ತಿದೆ. ಕೇಂದ್ರದ ಸೂಚನೆಗಳನ್ನು ಗಮನಿಸಿ ಸಾಮಾಜಿಕ ನ್ಯಾಯದ ಪಾಲನೆ ಮಾಡುತ್ತಿದ್ದೇವೆ. ನಿಯಮಗಳಿಗೆ ಕ್ಯಾಬಿನೆಟ್ ಅನುಮೋದನೆ ಸಾಕು. ಇದು ಎಲ್ಲಾ ಅಲ್ಪಸಂಖ್ಯಾತರಿಗೂ ಅನ್ವಯ. ಮುಸ್ಲಿಂ, ಜೈನರು, ಕ್ರಿಶ್ಚಿಯನ್ ಎಲ್ಲರೂ ಕೂಡ ಇದರಲ್ಲಿ ಒಳಗೊಳ್ಳುತ್ತಾರೆ. ಇದಕ್ಕೆ ಬೇಕಾದ ಹಲವು ಅಧ್ಯಯನ ವರದಿಗಳೂ ಕೂಡ ಇವೆ. ಬಡವರಿಗೆ ಮನೆ ಮಾಡಿಕೊಡುವುದರಲ್ಲಿ ರಾಜಕೀಯ ವಾಸನೆ ಹುಡುಕುವವರಿಗೆ ನಾವು ಉತ್ತರ ಕೊಡಲ್ಲ. ವಸತಿ ಹೀನರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಡಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಹೇಳಿದ್ದಾರೆ.
ವಸತಿ ಯೋಜನೆಗಳಲ್ಲಿನ ಕೋಟಾದಲ್ಲಿನ ಹೆಚ್ಚಳವು ಗುತ್ತಿಗೆ ಹಂಚಿಕೆಗಳಲ್ಲಿ ಮುಸ್ಲಿಮರಿಗೆ ಕೋಟಾ ಪ್ರಯೋಜನಗಳನ್ನು ವಿಸ್ತರಿಸುವ ಸರ್ಕಾರದ ಪ್ರಸ್ತಾಪವನ್ನು ಅನುಸರಿಸುತ್ತದೆ, ಇದು ಸಮುದಾಯ-ನಿರ್ದಿಷ್ಟ ಕಲ್ಯಾಣ ಉಪಕ್ರಮಗಳನ್ನು ಹೆಚ್ಚಿಸಲು ವಿಶಾಲವಾದ ಕಾರ್ಯಕ್ರಮದ ಭಾಗವಾಗಿದೆ.
ರಾಜ್ಯದಲ್ಲಿ ಈವರೆಗಿನ ವಸತಿ ಹಾಗೂ ಆಶ್ರಯ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಮೀಸಲು ಇತ್ತು. ಈಗ ಇದರ ಪ್ರಮಾಣವನ್ನು ಶೇ. 15ಕ್ಕೆ ಏರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

