ಗೋವು ದತ್ತು ಸ್ಕೀಂಗೆ ಸರ್ಕಾರಿ ನೌಕರರಿಂದ 100 ಕೋಟಿ : ‘ಪುಣ್ಯಕೋಟಿ ದತ್ತು ಯೋಜನೆ’ಗೆ ಬಲ
ಗೋವುಗಳನ್ನು ದತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಸರ್ಕಾರಿ ನೌಕರರು ದೇಣಿಗೆ ನೀಡಲು ಮುಂದಾಗಿದ್ದಾರೆ.
ಬೆಂಗಳೂರು (ಅ.15): ಗೋವುಗಳನ್ನು ದತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಸರ್ಕಾರಿ ನೌಕರರು ದೇಣಿಗೆ ನೀಡಲು ಮುಂದಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್.ಷಡಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ದೇಣಿಗೆ ನೀಡುವ ಸಮ್ಮತಿ ಪತ್ರವನ್ನು ಹಸ್ತಾಂತರಿಸಿದ್ದು, ಸುಮಾರು 80ರಿಂದ 100 ಕೋಟಿ ರು. ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಇತ್ತೀಚೆಗೆ ನೌಕರರಲ್ಲಿ ಪುಣ್ಯಕೋಟಿ ದತ್ತು ಯೋಜನೆಗೆ ನೆರವಾಗಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವ ಪತ್ರವನ್ನು ನೀಡಿತು.
ಸಂಭಾವನೆ ಪಡೆಯದೇ ಪುಣ್ಯಕೋಟಿ ರಾಯಭಾರಿ ಆದ Kichcha Sudeep: ಪ್ರಭು ಚವ್ಹಾಣ್
ಗ್ರೂಪ್ ಎ ಅಧಿಕಾರಿಗಳು 11 ಸಾವಿರ ರು., ಗ್ರೂಪ್ ಬಿ ಅಧಿಕಾರಿಗಳು 4 ಸಾವಿರ ರು. ಮತ್ತು ಸಿ ವೃಂದದ ನೌಕರರು 400 ರು. ದೇಣಿಗೆಯನ್ನು ಒಂದು ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಇದನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸುವಂತೆ ಕೋರಲಾಗಿದೆ. ಈ ವೇಳೆ ನೌಕರರ ಸಂಘದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ-ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈ ಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದರು.
ಬರ, ಪ್ರವಾಹ, ಕೋವಿಡ್ ಮುಂತಾದ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರಿ ನೌಕರರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಹಿಂದೆ ಭರವಸೆ ನೀಡಿದಂತೆ ಈ ತಿಂಗಳಲ್ಲಿಯೇ ವೇತನ ಆಯೋಗ ರಚಿಸಲಾಗುವುದು. ನೌಕರರಿಗೆ ವೇತನ, ಭತ್ಯೆಗಳೊಂದಿಗೆ ಅತ್ಯುತ್ತಮ ಕಾರ್ಯನಿರ್ವಹಣೆಗೆ ಪ್ರೋತ್ಸಾಹಕಗಳನ್ನು ನೀಡುವುದು, ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮೊದಲಾದ ಅಂಶಗಳ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.
ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ, ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆಗೆ ಸಹಕಾರ ಕೋರಿದ್ದು, ಸುಮಾರು 60-70 ಸಾವಿರ ಹಸುಗಳಿವೆ. ಎಲ್ಲಾ ನೌಕರರ ಸಂಘದ ಅಧಿಕಾರಿಗಳು ಸೇರಿ ಚರ್ಚೆ ಮಾಡಿ ಬೆಂಬಲ ವ್ಯಕ್ತಪಡಿಸಿದ್ದೇವೆ. 80-100 ಕೋಟಿ ರು. ಹಣವನ್ನು ಹಸುಗಳ ಸಂರಕ್ಷಣೆಗೆ ನೀಡಿದ್ದೇವೆ. ಈ ಹಿಂದೆ ಭೂಕಂಪ, ಕೋವಿಡ್ ವೇಳೆಯಲ್ಲಿಯೂ ನೌಕರರು ಸಹಾಯ ಮಾಡಿದ್ದೇವೆ ಎಂದು ತಿಳಿಸಿದರು. ಈ ವೇಳೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ.ಜಾಫರ್ ಇತರರು ಉಪಸ್ಥಿತರಿದ್ದರು.
ಪುಣ್ಯಕೋಟಿ ದತ್ತು ಯೋಜನೆ ಯಶಸ್ಸಿಗೆ ಸಚಿವ ಚವ್ಹಾಣ್ ಕರೆ
ಏನಿದು ಪುಣ್ಯಕೋಟಿ ಯೋಜನೆ?: ಗೋ ಸಂಪತ್ತನ್ನು ಉಳಿಸುವ ಪ್ರಯತ್ನದ ಹಂತವಾಗಿ ರಾಜ್ಯ ಸರ್ಕಾರ ಗೋವುಗಳನ್ನು ದತ್ತು ನೀಡುವ ಉದ್ದೇಶದಿಂದ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದಿದೆ. ಸರ್ಕಾರವು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 (ಗೋ ಹತ್ಯೆ ತಡೆ ಕಾಯ್ದೆ) ಅನ್ನು ಅನುಷ್ಠಾನಗೊಳಿಸಿದೆ. ಗೋವುಗಳ ಸಂರಕ್ಷಣೆ ಮತ್ತು ಸಂವರ್ಧನೆಗೆ ಸದಾ ಒತ್ತು ನೀಡುವ ಸಲುವಾಗಿ ರಾಜ್ಯದಲ್ಲಿ 200ಕ್ಕೂ ಹೆಚ್ಚು ಖಾಸಗಿ ಗೋಶಾಲೆಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸುತ್ತಿದೆ. ನಿರ್ಗತಿಕ, ಪರಿತ್ಯಕ್ತ, ಅನಾರೋಗ್ಯ, ಅಶಕ್ತ, ವಯಸ್ಸಾದ ಜಾನುವಾರುಗಳನ್ನು ಹಾಗೂ ರೈತರು ಸಾಕಲಾಗದ ಹಸು-ಕರುಗಳನ್ನು ಪೋಷಿಸಲು ಹಾಗೂ ರಾಜ್ಯದ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.