6 ತಿಂಗಳ ಪಾಲಿಕೆ ಟೆಂಡರ್ ವಿವರ ಕೇಳಿದ ಸರ್ಕಾರ: ಬಿಬಿಎಂಪಿಗೆ ಸಿಎಂರಿಂದಲೇ ಟಿಪ್ಪಣಿ!
ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕೈಗೊಳ್ಳಲಾದ ಕಾಮಗಾರಿ ಮತ್ತು ನೀಡಲಾದ ಅನುದಾನದ ಬಗ್ಗೆ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಕಳೆದ ಆರು ತಿಂಗಳಲ್ಲಿ ನಡೆಸಲಾದ ಟೆಂಡರ್, ನೀಡಲಾದ ಕಾರ್ಯಾದೇಶದ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜೂ.5) : ಹಿಂದಿನ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕೈಗೊಳ್ಳಲಾದ ಕಾಮಗಾರಿ ಮತ್ತು ನೀಡಲಾದ ಅನುದಾನದ ಬಗ್ಗೆ ಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಕಳೆದ ಆರು ತಿಂಗಳಲ್ಲಿ ನಡೆಸಲಾದ ಟೆಂಡರ್, ನೀಡಲಾದ ಕಾರ್ಯಾದೇಶದ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಟಿಪ್ಪಣಿ ನೀಡಿದ್ದು, ಈ ಹಿಂದಿನ ಸರ್ಕಾರದ ಕಳೆದ ಆರು ತಿಂಗಳ ಅವಧಿಯಲ್ಲಿ ಬಿಬಿಎಂಪಿ(BBMP)ಯಿಂದ ಆಹ್ವಾನಿಸಲಾದ ಟೆಂಡರ್, ಮೀಸಲಿಟ್ಟಅನುದಾನ ಮೊತ್ತ, ಬಿಡುಗಡೆ ಮಾಡಲಾದ ಹಣ ಹಾಗೂ ವೆಚ್ಚ ಮಾಡುವುದಕ್ಕೆ ತೀರ್ಮಾನಿಸಲಾದ ಅನುದಾನ ಮತ್ತು ಕಾಮಗಾರಿಯ ವಿವರ ಎಲ್ಲವನ್ನೂ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ವರ್ಷಾಂತ್ಯಕ್ಕೆ ಬಿಬಿಎಂಪಿಗೆ ಚುನಾವಣೆ?
ಬಿಬಿಎಂಪಿಯಿಂದ ಸಲ್ಲಿಕೆ ಆಗುವ ಮಾಹಿತಿಯನ್ನು ಸಂಬಂಧಪಟ್ಟಇಲಾಖೆಯ ಕಾರ್ಯದರ್ಶಿಗಳು ಪರಾಮರ್ಶಿಸಿ, ಪರಿಶೀಲಿಸಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಸಲ್ಲಿಸಬೇಕು. .1 ಕೋಟಿ ಅಂದಾಜು ವೆಚ್ಚ ಮೀರಿದ ಕಾಮಗಾರಿಗಳನ್ನು ಮಾತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಸಂಪೂರ್ಣ ವಿವರ ಸಲ್ಲಿಕೆಗೆ ಸೂಚನೆ:
ಕೈಗೊಳ್ಳಲಾದ ಕಾಮಗಾರಿಯ ಸಂಪೂರ್ಣ ವಿವರ, ಕಾಮಗಾರಿಯ ಅಂದಾಜು ಮೊತ್ತ, ಆಡಳಿತಾತ್ಮಕ ಅನುಮೋದನೆ ನೀಡಿದ ದಿನಾಂಕ, ಟೆಂಡರ್ ಆಹ್ವಾನಿಸಿದ ದಿನಾಂಕ ಹಾಗೂ ಸದ್ಯ ಕಾಮಗಾರಿ ಯಾವ ಹಂತದಲ್ಲಿ ಇದೆ ಎಂಬ ಎಲ್ಲಾ ವಿವರಗಳನ್ನು ನಿರ್ದಿಷ್ಟನಮೂನೆಯಲ್ಲಿ ಸಲ್ಲಿಕೆ ಮಾಡಬೇಕೆಂದು ಮುಖ್ಯಮಂತ್ರಿಯವರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
5 ವರ್ಷದ ವರದಿಗೆ ಡಿಸಿಎಂ ಸೂಚನೆ:
ಇನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಬರೋಬ್ಬರಿ ಕಳೆದ ಐದು ವರ್ಷದಲ್ಲಿ ಬಿಬಿಎಂಪಿಯಿಂದ ಕೈಗೊಳ್ಳಲಾದ ರಸ್ತೆ ದುರಸ್ತಿ, ಪಾದಚಾರಿ ಮಾರ್ಗ, ಕೆರೆ ಅಭಿವೃದ್ಧಿ, ರಾಜಕಾಲುವೆ ನಿರ್ಮಾಣ ಸೇರಿದಂತೆ ಎಲ್ಲಾ ಕಾಮಗಾರಿಗಳ ಪಟ್ಟಿನೀಡಬೇಕು. ಜತೆಗೆ, ಕಾಮಗಾರಿ ಆರಂಭಕ್ಕೂ ಮೊದಲ ಮತ್ತು ಕಾಮಗಾರಿ ಪೂರ್ಣಗೊಂಡ ಬಳಿಕದ ಛಾಯಾಚಿತ್ರ, ವಿಡಿಯೋಗಳನ್ನು ಸಲ್ಲಿಕೆ ಮಾಡುವುದಕ್ಕೆ ನಿರ್ದೇಶಿಸಿದ್ದಾರೆ.
ಅಧಿಕಾರಿಗಳಿಂದ ಅಂಕಿ ಅಂಶ ಸಂಗ್ರಹ
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಸೂಚನೆಯಂತೆ ಕಾಮಗಾರಿಗಳ ಕುರಿತು ಮಾಹಿತಿ ಸಲ್ಲಿಕೆ ಮಾಡುವುದಕ್ಕೆ ಬಿಬಿಎಂಪಿಯ ವಿಭಾಗದ ಮುಖ್ಯಸ್ಥರು ಅಧಿಕಾರಿಗಳಿಂದ ದಾಖಲೆಗಳನ್ನು ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ.
ಎಲ್ಲಾ ಇಲಾಖೆಗೂ ಸೂಚನೆ
ಕಳೆದ ಆರು ತಿಂಗಳಲ್ಲಿ ಒಂದು ಕೋಟಿ ರು. ಅಂದಾಜು ವೆಚ್ಚ ಮೀರಿದ ಕಾಮಗಾರಿಗಳನ್ನು ಮಾತ್ರ ಸಲ್ಲಿಕೆ ಮಾಡುವುದಕ್ಕೆ ಸೂಚಿಸಲಾಗಿದೆ. ಬಿಬಿಎಂಪಿಗೆ ಮಾತ್ರವಲ್ಲದೇ, ಸರ್ಕಾರದ ಎಲ್ಲಾ ಇಲಾಖೆಗಳು, ಅಭಿವೃದ್ಧಿ ಮಂಡಳಿ, ನಿಗಮಗಳಿಗೂ ಸೂಚನೆ ನೀಡಲಾಗಿದೆ. ಮಾಹಿತಿ ಸಲ್ಲಿಕೆ ಮಾಡುವುದಕ್ಕೆ ಗಡುವು ನಿಗದಿ ಪಡಿಸಿಲ್ಲ. ಶೀಘ್ರದಲ್ಲಿ ಸಲ್ಲಿಕೆ ಮಾಡುವುದಕ್ಕೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
Bengaluru- ಬಿಬಿಎಂಪಿ ರಾಜಕಾಲುವೆಗೆ ಬಿದ್ದ ಪೌರಕಾರ್ಮಿಕ ಮಹಿಳೆ: ಬೆನ್ನು ಮೂಳೆ ಪುಡಿ, ಪುಡಿ
ಸರ್ಕಾರದಿಂದ ಕಳೆದ ಆರು ತಿಂಗಳಲ್ಲಿ ಟೆಂಡರ್, ಕಾಮಗಾರಿ ವಿವರ ನೀಡುವಂತೆ ಸೂಚಿಸಲಾಗಿದೆ. ಇನ್ನು ಉಪ ಮುಖ್ಯಮಂತ್ರಿಗಳ ಬಿಬಿಎಂಪಿಯಲ್ಲಿ ಕಳೆದ ಐದು ವರ್ಷದ ಕಾಮಗಾರಿ ಪಟ್ಟಿನೀಡುವಂತೆ ತಿಳಿಸಿದ್ದಾರೆ. ಆ ಎರಡು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲಿ ಪ್ರತ್ಯೇಕವಾಗಿ ಸರ್ಕಾರಕ್ಕೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ