ಪಣಜಿ[ನ.20]: ಕರ್ನಾಟಕಕ್ಕೆ ಕಳಸಾ-ಬಂಡೂರಿ (ಮಹದಾಯಿ) ಯೋಜನೆ ಕೈಗೆತ್ತಿಕೊಳ್ಳಲು ಇತ್ತೀಚೆಗೆ ತಾನೇ ನೀಡಿದ್ದ ಅನುಮೋದನೆಯ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಗೋವಾ ಮುಖ್ಯಮಂತ್ರಿಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಪತ್ರ ಬರೆದಿದ್ದಾರೆ.

‘ಕಳಸಾ-ಬಂಡೂರಿ ಯೋಜನೆಗೆ ಪರಿಸರ ಅನುಮೋದನೆ ನೀಡಿದ ನಿರ್ಧಾರವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ಜಾವಡೇಕರ್‌ ಭರವಸೆ ನೀಡಿದ್ದಾರೆ.

ಗೋವಾದಿಂದ ಮಹದಾಯಿ ಖ್ಯಾತೆ : ಕೇಂದ್ರದ ವಿರುದ್ಧ ಸಮರ

‘ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಯೋಜನೆ ಕೈಗೆತ್ತಿಕೊಳ್ಳಲು ಅಡ್ಡಿಯಿಲ್ಲ’ ಎಂದು ಕಳೆದ ತಿಂಗಳು ಕೇಂದ್ರ ಪರಿಸರ ಸಚಿವಾಲಯವು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರ ಬರೆದಿತ್ತು ಹಾಗೂ ಯೋಜನೆ ಅನುಷ್ಠಾನಕ್ಕೆ ಕೆಲವು ಷರತ್ತು ವಿಧಿಸಿತ್ತು. ಆದರೆ ಇದನ್ನು ವಿರೋಧಿಸಿದ್ದ ಗೋವಾ ಸರ್ಕಾರವು, ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು, ಅನುಮೋದನೆ ರದ್ದುಗೊಳಿಸಬೇಕು ಎಂದು ಜಾವಡೇಕರ್‌ ಅವರಿಗೆ ನವೆಂಬರ್‌ 4ರಂದು ಮನವಿ ಮಾಡಿತ್ತು. ಇದಕ್ಕೆ 10 ದಿನದಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಜಾವಡೇಕರ್‌ ಆಗ ಭರವಸೆ ನೀಡಿದ್ದರು.

ಆ ಪ್ರಕಾರ ನವೆಂಬರ್‌ 18ರಂದು ಗೋವಾ ಸಿಎಂಗೆ ಪತ್ರ ಬರೆದಿರುವ ಜಾವಡೇಕರ್‌, ‘ಕಳಸಾ-ಬಂಡೂರಿ ಎಂಬುದು ಕೇವಲ ಕುಡಿಯುವ ನೀರಿನ ಯೋಜನೆಯಲ್ಲ. ಹೀಗಾಗಿ ಪರಿಸರ ಸಚಿವಾಲಯವು ಹೆಚ್ಚಿನ ಮರುಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ನಿಮ್ಮ ಮನವಿಯಲ್ಲಿ ತಿಳಿಸಿದ್ದೀರಿ. ಹೀಗಾಗಿ ಈ ವಿಷಯವನ್ನು ಮರುಪರಿಶೀಲಿಸಲು ಸಮಿತಿ ರಚಿಸಲಾಗುವುದು’ ಎಂದು ಹೇಳಿದ್ದಾರೆ.

ಮಹ​ದಾಯಿ ರೈತರಿಗೆ ಡಿಸೆಂಬರಲ್ಲಿ ಶುಭ ಸುದ್ದಿ?

ಸಾವಂತ್‌ ಸ್ವಾಗತ:

ಜಾವಡೇಕರ್‌ ಬರೆದ ಪತ್ರವನ್ನು ಸಾವಂತ್‌ ಸ್ವಾಗತಿಸಿದ್ದಾರೆ. ‘ನಮ್ಮ ಮನವಿಯನ್ನು ಜಾವಡೇಕರ್‌ ಪರಿಗಣಿಸಿದ್ದಾರೆ. ಅವರು ರಚಿಸಲಿರುವ ಸಮಿತಿಯು ಗೋವಾ ಹಿತಾಸಕ್ತಿಯನ್ನು ಕಾಪಾಡುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋವಾ ಪ್ರತಿಪಕ್ಷಗಳ ವಿರೋಧ:

ಜಾವಡೇಕರ್‌ ಅವರ ಪತ್ರವನ್ನು ಗೋವಾ ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಗೋವಾ ಫಾರ್ವರ್ಡ್‌ ಪಾರ್ಟಿ ಖಂಡಿಸಿವೆ. ‘ಮಹದಾಯಿ ಯೋಜನೆಗೆ ನೀಡಿದ ಪರಿಸರ ಅನುಮತಿಯನ್ನು ಹಿಂಪಡೆಯಬೇಕು ಎಂಬುದು ನಮ್ಮ ವಾದ. ಈ ರೀತಿ ಸಮಿತಿ ರಚನೆ ಮಾಡುವುದು ಕೇವಲ ಕಣ್ಣೊರೆಸುವ ಹಾಗೂ ಕಾಲಹರಣದ ತಂತ್ರ’ ಎಂದು ಕಾಂಗ್ರೆಸ್‌ ಮುಖಂಡ ದಿಗಂಬರ್‌ ಕಾಮತ್‌ ಹಾಗೂ ಗೋವಾ ಫಾರ್ವರ್ಡ್‌ ಅಧ್ಯಕ್ಷ ವಿಜಯ್‌ ಸರ್‌ದೇಸಾಯಿ ಟೀಕಿಸಿದ್ದಾರೆ.