ಮಹದಾಯಿ ರೈತರಿಗೆ ಡಿಸೆಂಬರಲ್ಲಿ ಶುಭ ಸುದ್ದಿ?
ಮಹದಾಯಿ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಮೋಹನ ಕಾತರಕಿ ಶುಭ ಸುದ್ದಿ ನೀಡಿದ್ದಾರೆ.
ಧಾರವಾಡ [ಅ.21]: ನ್ಯಾಯಾಧಿಕರಣ ನೀಡಿದ ತೀರ್ಪುಗಳಿಗೆ ಗೆಜೆಟ್ ನೋಟಿಫಿಕೇಶನ್ ಇಲ್ಲದೆಯೇ ಕೂಡಲೇ ತೀರ್ಪು ಅನುಷ್ಠಾನಕ್ಕೆ ಬರುವಂಥ ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದು ಹೇಳುವ ಮೂಲಕ ಮಹದಾಯಿ ಪ್ರಕರಣದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಮೋಹನ ಕಾತರಕಿ ಶುಭ ಸುದ್ದಿ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಈ ವಿಧೇಯಕಕ್ಕೆ ಲೋಕಸಭೆಯ ಒಪ್ಪಿಗೆ ಸಿಕ್ಕಿದೆ. ರಾಜ್ಯಸಭೆಯಲ್ಲಿ ಡಿಸೆಂಬರ್‌ನಲ್ಲಿ ಚರ್ಚೆಗೆ ಬರಲಿದೆ. ಅಲ್ಲೂ ಒಪ್ಪಿಗೆ ಸಿಕ್ಕರೆ ನ್ಯಾಯಾಧಿಕರಣಗಳ ತೀರ್ಪಿಗೆ ಅಂದೇ ನೋಟಿಫಿಕೇಶನ್ ಹೊರಡಿಸಬಹುದು ಎಂದರು. ಆ ಬಳಿಕ ಮಹದಾಯಿ ವಿಷಯದಲ್ಲಿ ನ್ಯಾಯಾಧಿಕರಣ ಈಗಾಗಲೇ ನೀಡಿದ ತೀರ್ಪಿನಂತೆ ನೇರವಾಗಿ ನಾವು ನಮ್ಮ ಪಾಲಿನ ನೀರನ್ನು ಬಳಸಲು ಮುಂದಾಗಬಹುದು. ರಾಜ್ಯಸಭೆಯಲ್ಲೂ ಈ ಮಸೂದೆ ಪಾಸ್ ಮಾಡಿಸಲು ಈ ಭಾಗದ ಸಂಸದರು ಹಾಗೂ ಶಾಸಕರು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಬೇಕಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹದಾಯಿ ವಿಷಯದಲ್ಲಿ ನ್ಯಾಯಾಧಿಕರಣ ತೀರ್ಪು ನೀಡಿದ ಬಳಿಕ ಹೆಚ್ಚುವರಿ ನೀರಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಗೋವಾ ಸಹ ಮನವಿ ಸಲ್ಲಿಸಿದೆ. ನ್ಯಾಯಾಧಿಕರಣ ಎದುರೇ ಕೆಲ ಪ್ರಶ್ನೆಗಳು ಹಾಗೂ ಸ್ಪಷ್ಟೀಕರಣ ಕೇಳಲಾಗಿತ್ತು. ಈ ಮನವಿಗಳು ಇತ್ಯರ್ಥವಾಗಬೇಕಿದೆ. ಇವುಗಳು ಇತ್ಯರ್ಥವಾದ ಬಳಿಕವೇ ನೋಟಿಫಿಕೇಶನ್ ಹೊರಡಿಸಲು ಸಾಧ್ಯ. ಆದರೆ ಕೇಂದ್ರ ಸರ್ಕಾರದ ನೂತನ ಕಾಯಿದೆ ಜಾರಿಗೆ ಬಂದರೆ ಡಿಸೆಂಬರ್‌ನಲ್ಲೇ ಮಹದಾಯಿ ನೀರು ಪಡೆಯಬಹುದು ಎಂದು ಹೇಳಿದರು.