- ಬೆಂಕಿ ಬಸಣ್ಣ,  ನ್ಯೂಯಾರ್ಕ್

ಬೆಂಗಳೂರು (ಜೂ.01):
 ಕೋರೋನಾ ಎರಡನೇ ಅಲೆಯಿಂದ ತತ್ತರಿಸಿರುವ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಸಹಾಯ ಮಾಡುವ ಉದ್ದೇಶದಿಂದ  ಅಮೆರಿಕೆಯಲ್ಲಿರುವ ನಾವಿಕ (ನಾವು ವಿಶ್ವ ಕನ್ನಡಿಗರು)  ಸಂಸ್ಥೆ   "ಕರುನಾಡಿಗೆ ಆಮ್ಲಜನಕ"   ಎಂಬ ಯೋಜನೆಯನ್ನು ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದೊಂದಿಗೆ ಆರಂಭಿಸಿದೆ.  

 ನಾವಿಕ ಸಂಸ್ಥೆಯು  ಕಳಿಸಿದ ಆಕ್ಸಿಜನ್  ಕಾನ್ಸನ್‌ಟ್ರೇಟರ್ಸ್ ಇಂದು ಬೆಂಗಳೂರನ್ನು  ತಲುಪಿವೆ.  ರೋಟರಿ ಕ್ಲಬ್ ಸಹಯೋಗದೊಂದಿಗೆ  ಕರ್ನಾಟಕದ ವಿವಿಧ ಜಿಲ್ಲೆಗಳ  ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುತ್ತದೆ  ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿ  ತಿಳಿಸಿದ್ದಾರೆ.  

 ಮುಂದಿನ ವಾರದಲ್ಲಿ  ನಾವಿಕ ಸಂಸ್ಥೆ ಕಳಿಸಿದ ನೂರಕ್ಕೂ ಹೆಚ್ಚು  ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್  ಎರಡನೇ ಬ್ಯಾಚ್ ಕರ್ನಾಟಕಕ್ಕೆ ತಲುಪಲಿದ್ದು, ಇವುಗಳನ್ನು ಕರ್ನಾಟಕದ ಅತಿ ಹಿಂದುಳಿದ  ಗ್ರಾಮೀಣ ಪ್ರದೇಶದ  ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುತ್ತದೆ.

ಕೋವಿಡ್ ಸೋಂಕಿತರ ತುರ್ತು ಸೇವೆಗೆ ಆಕ್ಸಿಜನ್ ಬಸ್‌ಗೆ ಸಚಿವ ಸೋಮಶೇಖರ್ ಚಾಲನೆ ..

ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ  ನಾವಿಕ ಸಂಸ್ಥೆ  ರೋಟರಿ ಕ್ಲಬ್ ಜೊತೆ ಕೈಜೋಡಿಸಿ ಜ್ಞಾನ ದೀವಿಗೆ ಅಭಿಯಾನದಲ್ಲಿ ಐದುನೂರಕ್ಕೂ ಹೆಚ್ಚು ಟ್ಯಾಬ್ ಗಳನ್ನು  ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಗ್ರಾಮೀಣ ಭಾಗದ ಎಸೆಸೆಲ್ಸಿ ಮಕ್ಕಳಿಗೆ ಹಂಚಿತ್ತು. ಹಾಗೆಯೇ ಈಗ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಕರ್ನಾಟಕದ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ಹಂಚುವ ಯೋಜನೆಯನ್ನು ನಾವಿಕ ಸಂಸ್ಥೆ ನಡೆಸುತ್ತಿದೆ.

ನಾವಿಕ ಸಂಸ್ಥೆಯು ಉಚಿತವಾಗಿ ನೀಡಿದ  ಈ ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್  ಕೊರೋನಾ ಮಹಾಮಾರಿಯಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ  ಗ್ರಾಮೀಣ ಪ್ರದೇಶದ ಬಡ ಜನರ  ಜೀವ ಉಳಿಸುವ ಸಂಜೀವಿನಿ ಆಗಲಿವೆ.

ಈ ಆಕ್ಸಿಜನ್ ಕನ್ಸೆಂತ್ರೇಟರ್ ಗಳನ್ನು ಮರುಬಳಕೆ ಮಾಡುವ ಉದ್ದೇಶದಿಂದ ರೋಟರಿ ಕ್ಲಬ್ ಸಹಾಯದೊಂದಿಗೆ   "ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್ ಬ್ಯಾಂಕ" ನ್ನು  ಆರಂಭಿಸುವ  ಬಗ್ಗೆಯೂ ಚಿಂತನೆ ನಡೆದಿದೆ. 

ಕರುನಾಡಿಗೆ ಆಮ್ಲಜನಕ ಅಭಿಯಾನದಲ್ಲಿ  ನಾವಿಕ ಸಂಸ್ಥೆಯ ಕಾರ್ಯಕಾರಣಿ ಮತ್ತು ಆಡಳಿತ  ಸಮಿತಿಯ ಜೊತೆಗೆ  ಸೇವಾ ಇಂಟರ್ ನ್ಯಾಷನಲ್ ಸಂಸ್ಥೆಯ  ಸ್ವದೇಶ್ ಮತ್ತು  ಶ್ರೀನಾಥ್,  B&H ಲಾಜೆಸ್ಟಿಕ್ ಕಂಪನಿ  ಮತ್ತು ಬೆಂಗಳೂರಿನ  ಶ್ರೀನಾಥ ವಶಿಷ್ಠ, ತೇಜಸ್, ರಾಜಪ್ಪ ಮತ್ತು ಶಿವಾನಂದ ಮುಂತಾದವರು  ಸಹಕಾರ ನೀಡಿದ್ದಾರೆ. 

"