Asianet Suvarna News Asianet Suvarna News

'ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಗಣನೀಯ ಇಳಿಕೆ'

  •  ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ
  • ಕೋವಿಡ್‌ ಸೋಂಕು ತಡೆಗೆ ಸೂಕ್ತ ಕ್ರಮ
  • ವರದಿಯನ್ನು ಪರಾಮರ್ಶೆ ನಡೆಸಿದ ಬಳಿಕವಷ್ಟೇ ಲಾಕ್‌ಡೌನ್‌ ಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರ
Positivity rate decrease In Karnataka Many Districts says Minister Sudhakar sir
Author
Bengaluru, First Published Jun 1, 2021, 7:39 AM IST

 ಚಿಕ್ಕಬಳ್ಳಾಪುರ (ಜೂ.01):  ಕೋವಿಡ್‌ ಸೋಂಕು ತಡೆಗೆ ಮುಂದಿನ ಒಂದು ತಿಂಗಳ ಅವಧಿಗೆ ಹಿನ್ನೆಯಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ತಜ್ಞರು ವರದಿ ನೀಡಿದ್ದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯುವ ಸಭೆಯಲ್ಲಿ ಆ ಕುರಿತು ಚರ್ಚಿಸಲಾಗುವುದು. ಇದೇ ವರದಿಯನ್ನು ಪರಾಮರ್ಶೆ ನಡೆಸಿದ ಬಳಿಕವಷ್ಟೇ ಲಾಕ್‌ಡೌನ್‌ ಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಚೇತರಿಕೆ ಹಾದಿಗೆ ಕರ್ನಾಟಕ, 44473 ಡಿಸ್ಚಾರ್ಜ್, ಪಾಸಿಟಿವಿಟಿ ದರ ಶೇ. 13.5ಕ್ಕೆ ಇಳಿಕೆ

ಕೋವಿಡ್‌ ಎರಡನೇ ಅಲೆಗೆ ಸಂಬಂಧಿಸಿದಂತೆ ವೈಜ್ಞಾನಿಕ ಅಂಶಗಳ ತಳಹದಿಯ ಮೇಲೆ ಅಧ್ಯಯನ ನಡೆಸಿರುವ ಸಮಿತಿಯು ಮುಂದಿನ ಹದಿನೈದರಿಂದ ಒಂದು ತಿಂಗಳ ಅವಧಿಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ವರದಿಯಲ್ಲಿ ತಿಳಿಸಿದೆ. ಅದನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದೇವೆ. ಸಚಿವ ಸಂಪುಟದ ಹಿರಿಯ ಸದಸ್ಯರ ಜತೆ ನಡೆಯುವ ಸಭೆಯಲ್ಲಿ ಸಿಎಂ ಅವರು ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ತಜ್ಞರು ನೀಡುವ ಸಲಹೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅವರು ತಿಳಿಸಿದರು.

ಲಾಕ್‌ಡೌನ್‌ನಿಂದ ಉಪಕಾರ: ಲಾಕ್‌ಡೌನ್‌ ಪರಿಣಾಮ ರಾಜ್ಯದಲ್ಲಿ ಕರೋನಾ ಸೋಂಕು ಕಡಿಮೆ ಆಗಿದೆ. ಶೇ.50ರಷ್ಟುಇದ್ದ ಪಾಸಿಟಿವಿಟಿ ಧರ ಈಗ ಶೇ.14ರಿಂದ 15ಕ್ಕೆ ಇಳಿದಿದೆ. ರಾಜ್ಯದಲ್ಲಿ 7ರಿಂದ 8 ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲೆಡೆ ಕೊರೋನಾ ಪಾಸಿಟಿವಿಟಿ ದರ ಶೇ.10ರಿಂದ 12ಕ್ಕೆ ಇಳಿದಿದೆ ಎಂದರು. ಹೀಗಾಗಿ ಲಾಕ್‌ಡೌನ್‌ನಿಂದ ಸಾಕಷ್ಟುಉಪಕಾರ ಆಗಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲಿಯವರೆಗೂ ನಾವು ಎರಡು ಡೋಸ್‌ ಲಸಿಕೆ ಪಡೆಯುತ್ತೇವೆ. ಅಲ್ಲಿಯವರೆಗೂ ಜನ ಬಹಳ ಮುನ್ನೆಚ್ಚರಿಕೆ ವಹಿಸಬೇಕು, ಲಾಕ್‌ಡೌನ್‌ ತೆಗೆದು ಕೊಡಲೇ ವೈರಸ್‌ ಹೋಗುವುದಿಲ್ಲ. ನಾವು ನಮ್ಮ ಮುನ್ನೆಚ್ಚರಿಕೆ ಕ್ರಮಗಳನ್ನು ಮೀರಿ ವರ್ತಿಸಿದರೆ ಎರಡನೇ ಅಲೆ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ವೈದ್ಯರ ನಡೆ ಹಳ್ಳಿ ಕಡೆ ಉತ್ತಮ ಕಾರ್ಯಕ್ರಮ:

ಸಂಜೆ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಸಚಿವ ಸುಧಾಕರ್‌ ಅವರು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಜನರ ಬಳಿಗೇ ತೆರಳಿ ಸರ್ಕಾರದ ಸವಲತ್ತುಗಳನ್ನುಒದಗಿಸುವುದು ಎಂದಿಗೂ ಉತ್ತಮ ಕೆಲಸ. ಇಂಥ ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ವೈದ್ಯರೇ ಗ್ರಾಮಗಳಿಗೆ ತೆರಳಿ ತಪಾಸಣೆ ಮಾಡುವುದು ನಿಜಕ್ಕೂ ಉತ್ತಮ ಕಾರ್ಯಕ್ರಮವಾಗಿದೆ ಎಂದೂ ಸಚಿವ ಸುಧಾಕರ್‌ ಹೇಳಿದರು.

ಬ್ಲ್ಯಾಕ್‌ ಫಂಗಸ್‌ಗೆ ಕಾರಣ ಪತ್ತೆಗೆ ತಜ್ಞರ ಸಮಿತಿ ರಚನೆ

ರಾಜ್ಯದಲ್ಲಿ ಒಟ್ಟು 1250 ಮಂದಿಗೆ ಬ್ಲಾಕ್‌ ಫಂಗಸ್‌ ಸೋಂಕು ಕಾಣಿಸಿಕೊಂಡಿದೆ. ಚಿಕಿತ್ಸೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ಔಷಧ ಸಿಗುತ್ತಿಲ್ಲ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಸಾಧ್ಯವಾದಷ್ಟುಔಷಧ ತರಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ದಿನ ಎಂಟರಿಂದ ಹತ್ತು ಸಾವಿರ ವಯಲ್ಸ್‌ ಬೇಕಾಗಿದೆ ಎಂದು ಮನವಿ ಮಾಡಲಾಗಿದೆ. ಸದ್ಯ ರಾಜ್ಯಾದ್ಯಂತ ಆಕ್ಸಿಜನ್‌ ಬಳಕೆ ಕಡಿಮೆಯಾಗಿದೆ ಎಂದೂ ಸಚಿವರು ತಿಳಿಸಿದರು.ಬ್ಲಾಕ್‌ಫಂಗಸ್‌ ಸೋಂಕಿಗೆ ಕಾರಣಗಳನ್ನು ಪತ್ತೆ ಹಚ್ಚಲು ತಜ್ಞರ ಸಮಿತಿ ರಚಿಸಲಾಗಿದೆ. ಈಗಾಗಲೇ ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಸಕ್ಕರೆ ಕಾಯಿಲೆ ಇದ್ದು ನಿಯಂತ್ರಣದಲ್ಲಿ ಇಲ್ಲದವರಿಗೆ ಕೋವಿಡ್‌ ರಿಂದ ಗುಣಮಖರಾದ ಬಳಿಕ, ಅತಿ ಹೆಚ್ಚು ಆಕ್ಸಿಜನ್‌ ಬಳಕೆ ಮಾಡಿದ್ದವರಿಗೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸ್ಟಿರಾಯ್ಡ್‌ ಬಳಕೆ ಮಾಡಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಂತಿಮ ವರದಿ ಇನ್ನೂ ಬರಬೇಕಿದೆ ಎಂದು ಸಚಿವ ಡಾ.ಸುಧಾಕರ್‌ ಸ್ಪಷ್ಟಪಡಿಸಿದರು.

ಈಶಾ ಪ್ರತಿಷ್ಠಾನದಿಂದ ಕಿಟ್‌ ವಿತರಣೆ

ಚಿಕ್ಕಬಳ್ಳಾಪುರ: ಕೊರೋನಾ ಸೋಂಕು ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ, ದಾದಿಯರಿಗೆ ಈಶಾ ಪ್ರತಿಷ್ಠಾನ ಸಾಕಷ್ಟುನೆರವು ನೀಡುವುದರ ಜೊತೆಗೆ ಪ್ರತಿಷ್ಠಾನದ ಸದ್ಗುರು ಅವರು ಸರ್ಕಾರದೊಂದಿಗೂ ಕೂಡ ಕೈ ಜೋಡಿಸಿ ಸೋಂಕು ತಡೆಗೆ ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ತಾಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿರುವ ಸೋಮವಾರ ಅಲೆಮಾರಿ ಹಾಗೂ ಅರೆ ಅಲೆಮಾರಿ ನಿವಾಸಿಗಳಿಗೆ ಜಿಲ್ಲಾಡಳಿತ ಮತ್ತು ಈಶಾ ಪ್ರತಿಷ್ಠಾನ ವತಿಯಿಂದ ನೀಡಿದ ಉಚಿತ ದಿನಸಿ ಕಿಟ್‌ಗಳನ್ನು ಬಡ ಕುಟುಂಬಗಳಿಗೆ ವಿತರಿಸಿದರು.

ಅಧ್ಯಾತ್ಮ ಚಿಂತಕ ಸದ್ಗುರು ಅವರು ತಮ್ಮ ಅನುಯಾಯಿಗಳಾದ ರಾಘವೇಂದ್ರ ಶಾಸ್ತ್ರಿ ಹಾಗೂ ಪ್ರಭಾಕರ್‌ ಅವರ ಮೂಲಕ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಸಚಿವರು ಕೃತಜ್ಞತೆ ಸಲ್ಲಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios