ದೇವರಾಜು ಕಪ್ಪಸೋಗೆ

ಚಾಮರಾಜನಗರ(ಮಾ.07): ಸಬ್‌ ಇನ್ಸ್‌​ಪೆ​ಕ್ಟರ್‌ ಗ್ರೇಡ್‌ನ ಹುದ್ದೆ​ಯಾ​ದರೂ ಕಾನ್ಸ್‌​ಟೇ​ಬ​ಲ್‌ಗಳಿಗೆ ಸಮ​ನಾದ ವೇತ​ನÜ, ಕಾನ್ಸ್‌​ಟೇ​ಬ​ಲ್‌​ಗ​ಳಿ​ಗಾ​ದರೂ ಪಿಯುಸಿ ಪಾಸಾ​ದರೆ ಸಾಕು, ಇವ​ರಿಗೆ ಮಾತ್ರ ಬಿಎಸ್ಸಿ ಪದವಿ ಕಡ್ಡಾ​ಯ!

ಇದು ಹಗಲಿ​ರುಳೆನ್ನದೆ ರಾಜ್ಯದ ಅರಣ್ಯ ಸಂಪತ್ತನ್ನು ಕಾಪಾಡುವ ಉಪ ವಲಯ ಅರಣ್ಯಾಧಿಕಾರಿಗಳ (ಡಿ​ಆ​ರ್‌​ಎ​ಫ್‌​ಒ​) ದಯ​ನೀಯ ಪರಿಸ್ಥಿತಿ. ಸಬ್‌ ಇನ್ಸ್‌​ಪೆ​ಕ್ಟ​ರ್‌ಗೆ ಸಮ​ನಾದ ಹುದ್ದೆ​ಯಾ​ದರೂ ಅವ​ರ ಅರ್ಧ​ದಷ್ಟುವೇತ​ನಕ್ಕೆ ರಾಜ್ಯಾ​ದ್ಯಂತ 2500ಕ್ಕೂ ಹೆಚ್ಚು ಡಿಆ​ರ್‌​ಎ​ಫ್‌​ಒ​ಗ​ಳು ಕರ್ತವ್ಯ ನಿರ್ವ​ಹಿ​ಸು​ತ್ತಿ​ದ್ದಾ​ರೆ. 20 ವರ್ಷ​ಗ​ಳಿಂದ ಇವರ ವೇತನ ಪರಿಷ್ಕರಣೆಯೇ ಆಗಿ​ಲ್ಲ. ಈ ಸಂಬಂಧ ಹಲವು ಬಾರಿ ಸರ್ಕಾ​ರಕ್ಕೆ ಮನವಿ ಸಲ್ಲಿ​ಸಿ​ದರೂ ಇವರ ಬೇಡಿಕೆ ಮಾತ್ರ ಈವ​ರೆಗೂ ಅರ​ಣ್ಯ​ರೋ​ದ​ನ​ವಾ​ಗಿಯೇ ಉಳಿ​ದಿ​ದೆ.

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಮ್ಮಿಕೊಂಡಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಬೂದಿಪಡಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗಿನ ಸಂವಾದ ವೇಳೆ ಪ್ರಸ್ತಾಪವಾದ ಅತ್ಯಂತ ಗಂಭೀರವಾದ ಸಮಸ್ಯೆ ಇದು. ಈ ತಾರತಮ್ಯವನ್ನು ಹೋಗಲಾಡಿಸಬೇಕು. ತಮ್ಮ ಶ್ರಮ, ಕರ್ತವ್ಯಕ್ಕೆ ತಕ್ಕ ವೇತನ ನೀಡಬೇಕು ಎಂಬುದು ರಾಜ್ಯದ ಸಮಸ್ತ ಡಿಆರ್‌ಎಫ್‌ಒಗಳ ಪರ ಕೇಳಿ ಬಂದ ಹಕ್ಕೊತ್ತಾಯವಿದು.

ಶ್ರಮದ ಕೆಲಸ:

ಡಿಆರ್‌ಎಫ್‌ಒಗಳು ರಾಜ್ಯದ 20ರಿಂದ 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ರಕ್ಷಿ​ಸುವ ಕಾರ್ಯ​ದಲ್ಲಿ ನಿರ​ತ​ರಾ​ಗಿ​ದ್ದಾರೆ. ವನ್ಯಜೀವಿ ಪ್ರದೇಶಗಳಲ್ಲಿ ಬಿಸಿಲು, ಮಳೆ, ಬೆಂಕಿ, ನಿಸರ್ಗದ ವೈಪರೀತ್ಯಗಳನ್ನು, ವನ್ಯಜೀವಿಗಳ ದಾಳಿಯನ್ನು ಮತ್ತು ಕಳ್ಳಕಾಕರಿಂದ ಎದು​ರಾ​ಗುವ ಅಪಾ​ಯ​ವನ್ನು ಲೆಕ್ಕಿಸದೆ ದುಡಿ​ಯು​ತ್ತಾ​ರೆ.

ಡಿಆರ್‌ಎಫ್‌ ಹುದ್ದೆ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌, ಸಹಾಯಕ ತೋಟಗಾರಿಕೆ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗೆ ಸಮನಾಂತರ ಹುದ್ದೆಯಾಗಿದೆ. ಪಿಎಸ್‌ಐ ಹುದ್ದೆಯ ವೇತನ ಶ್ರೇಣಿ .37,900ರಿಂದ ಪ್ರಾರಂಭವಾಗುತ್ತದೆ. ಆದರೆ, ಡಿಆರ್‌ಎಫ್‌ಒ ವೇತನ ಶ್ರೇಣಿ ಆರಂಭ​ವಾ​ಗು​ವುದೇ .23,400ರಿಂದ. ಈ ತಾರತಮ್ಯ ‘ಸಮಾನ ಕೆಲಸಕ್ಕೆ ಸಮಾನ ವೇತನ’ ನಿಯಮಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಸದಸ್ಯರ ಆರೋ​ಪ.

ಗಾರ್ಡ್‌ಗಿಂತ .2 ಸಾವಿರ ಹೆಚ್ಚು:

ಫಾರೆಸ್ಟ್‌ ಗಾರ್ಡ್‌ ವಿದ್ಯಾರ್ಹತೆ ದ್ವಿತೀಯ ಪಿಯುಸಿ. ಡಿಆರ್‌ಎಫ್‌ಒ ವಿದ್ಯಾರ್ಹತೆ ಮಾತ್ರ ಬಿಎಸ್ಸಿ. ಆದರೆ, ಇವೆರಡು ಹುದ್ದೆಗಳ ಸಂಬಳ ಮಾತ್ರ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿದೆ. ಅಂದರೆ ಡಿ ಗ್ರೂಪ್‌ ನೌಕ​ರರಿಗೆ ಸಮ​ನಾದ ವೇತನ ಪಡೆ​ಯು​ತ್ತಿ​ದ್ದಾರೆ. ಮಾಮೂಲಿ ಗಾರ್ಡ್‌ಗಿಂತ ಡಿಆ​ರ್‌​ಎ​ಫ್‌​ಒ​ಗಳು 2 ಸಾವಿರ ಹೆಚ್ಚು ವೇತನ ಪಡೆ​ಯು​ತ್ತಾರೆ ಅಷ್ಟೆ.

ವಿದ್ಯಾರ್ಹತೆ ಹೆಚ್ಚಳ:

ಡಿಆರ್‌ಎಫ್‌ಒ ನೇಮಕಾತಿಗೆ ಹಿಂದೆ ಇದ್ದ ಪಿಯುಸಿ ವಿದ್ಯಾರ್ಹತೆಯನ್ನು 2012ರಲ್ಲಿ ವಿಜ್ಞಾನ ಪದವಿಗೆ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ತಕ್ಕಂತೆ ವೇತನ ಶ್ರೇಣಿ ಹೆಚ್ಚಿಸಿ ಎಂದು 20 ವರ್ಷಗಳಿಂದ ಮಾಡುತ್ತಿರುವ ಮನವಿ ಫಲ ನೀಡಿಲ್ಲ ಎನ್ನುತ್ತಾರೆ ಅವರು.

ಉಪ ವಲಯ ಅರಣ್ಯಾಧಿಕಾರಿಗಳ ವೇತನ ಪರಿಷ್ಕರಣೆ ವಿಚಾರ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಡಿಆರ್‌ಎಫ್‌ಓ ಹುದ್ದೆಗೂ ಎಸ್‌ಐ ಹುದ್ದೆಗೂ .13 ಸಾವಿರದಷ್ಟುವ್ಯತ್ಯಾಸ ಇದೆ. ವಿದ್ಯಾರ್ಹತೆಗೆ ತಕ್ಕ ಸಂಬಳ ನಿಗದಿ ಮಾಡುವಂತೆ ಐಎಫ್‌ಎಸ್‌ ಸಂಘದ ಮೂಲಕವೂ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

- ಮನೋಜ್‌ ಕುಮಾರ್‌, ಚಾಮರಾಜನಗರ ಸಿಸಿಎಫ್‌

ವಿಜ್ಞಾನ ಪದವಿ ವಿದ್ಯಾರ್ಹತೆ ಮೇಲೆ ಆಯ್ಕೆಯಾದ ಉಪ ವಲಯ ಸಂರಕ್ಷಣಾಧಿಕಾರಿ(ಡಿಆರ್‌ಎಫ್‌ಓ)ಗಳು ಡಿ ಗ್ರೂಪ್‌ ನೌಕರರ ವೇತನ ಪಡೆಯುತ್ತಿದ್ದಾರೆ. ಈ ಬಗ್ಗೆ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಈ ಬಜೆಟ್‌ನಲ್ಲಿ ವೇತನ ತಾರತಮ್ಯ ನಿವಾರಿಸಲು ಸರ್ಕಾರ ಮುಂದಾಗಬೇಕು.

- ಮಲ್ಲೇಶಪ್ಪ, ವನ್ಯಜೀವಿ ಮಂಡಳಿ ಸದಸ್ಯ