ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ವಕ್ಫ್ ಆಸ್ತಿ ಒತ್ತುವರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನಮಂಡಲದಲ್ಲಿ ಚರ್ಚಿಸಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ಶಿವಮೊಗ್ಗ (ಡಿ.17):ರಾಜ್ಯ ಸರ್ಕಾರ ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು. ವಕ್ಫ್ ಆಸ್ತಿಯನ್ನ ಕಾಂಗ್ರೆಸ್ ನಾಯಕರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಆರೋಪಿಸಿದರು.

ವಕ್ಫ್ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿಕೊಂಡರು ಅವರ ಮೇಲೆ ಕ್ರಮ ಕೈಗೊಳ್ಳಬೇಕು. ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡವರಲ್ಲಿ ಮಲ್ಲಿಕಾರ್ಜುನ್ ಖರ್ಗೆ, ರೆಹಮಾನ್ ಖಾನ್, ಖಮರುಲ್ ಇಸ್ಲಾಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದ್ದಾರೆ, ಬಿಜೆಪಿಯವರೂ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಾಂಗ್ಲಾದೇಶಿ 'ಮುಸ್ಲಿಮರು ಅನ್ನ ತಿಂದ ಮನೆಗೆ ಕನ್ನ ಹಾಕುವವರು'; ಕೆ.ಎಸ್. ಈಶ್ವರಪ್ಪ!

ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಜಯೇಂದ್ರ 150 ಕೋಟಿ ಆಫರ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೆಎಸ್ ಈಶ್ವರಪ್ಪ ಅವರು, ಈ ಬಗ್ಗೆ ಸಿಬಿಐ ತನಿಖೆಯಾಗಲಿ ಅಂತಾ ಸಿಎಂ ಹೇಳಿದ್ದಾರೆ. ಎಲ್ಲದಕ್ಕೂ ಎಸ್‌ಐಟಿ ಎನ್ನುತ್ತಿದ್ದ ಸಿದ್ದರಾಮಯ್ಯ, ಈ ವಿಚಾರದಲ್ಲಿ ಸಿಬಿಐ ಮೇಲೆ ವ್ಯಾಮೋಹ ಬಂದಿರುವುದು ಸಂತೋಷ. ಸರ್ಕಾರವೇ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಆಗ್ರಹಿಸಿದರು.

ಮಠ-ಮಂದಿರ ದೇವಸ್ಥಾನ, ರೈತರ ಭೂಮಿಯ ಪಹಣಿಯಲ್ಲಿ ವಕ್ಪ್ ಅಂತಾ ಇದ್ದರೂ ಸರಕಾರ ತೆಗೆಯುವ ಪ್ರಯತ್ನ ಮಾಡ್ತಿಲ್ಲ. ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸಿಎಂ ಅಧಿವೇಶನದಲ್ಲಿ ಏಕೆ ಮಂಡನೆ ಮಾಡಿಲ್ಲ? ಕನಿಷ್ಟಪಕ್ಷ ಅದರ ಚರ್ಚೆ ಕೂಡ ಮಾಡಲು ಬಿಟ್ಟಿಲ್ಲ. ವಕ್ಫ್ ಆಸ್ತಿ ಯಾರಾರು ಲೂಟಿ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಮಾಡಿಲ್ಲ. ಅನ್ವರ್ ಮಾಣಿಪ್ಪಾಡಿ ಒಂದೊಂದು ಬಾರಿ ಒಂದೊಂದು ರೀತಿ ಹೇಳಿದ್ದಾರೆ. ವಿಜಯೇಂದ್ರ‌ ಬಿಜೆಪಿ ‌ಕಚೇರಿಗೆ ಬಂದಿದ್ದರು. ಕಾಂಗ್ರೆಸ್ ನವರು ದುಡ್ಡು ಕೊಟ್ಟರೆ ತೆಗೆದುಕೊಳ್ಳಿ ಅಂತಾ ತಮಾಷೆಗೆ ಹೇಳಿದ್ದಾರೆ ಅಂತಾ ಮಾಧ್ಯಮದ ಮುಂದೆ ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಸತ್ಯ ಹೊರಬರಲು ಸಿಬಿಐ ತನಿಖೆ ಆಗಬೇಕು ಎಂದರು.

ಆರೆಸ್ಸೆಸ್ ರದ್ದು ಮಾಡಲು ಸ್ವರ್ಗದಲ್ಲಿರುವ ಇಂದಿರಾಗಾಂಧಿ, ನೆಹರುಗೇ ಆಗಲಿಲ್ಲ ನೀವು ಯಾವ ಲೆಕ್ಕ? ಖರ್ಗೆ ವಿರುದ್ಡ ಈಶ್ವರಪ್ಪ ಕಿಡಿ

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲೆಂದೇ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ ಆದರೆ ಅಧಿವೇಶನದುದ್ದಕ್ಕೂ ಏನು ಚರ್ಚೆ ಆಗಿದೆ? ಅಧಿವೇಶನದಲ್ಲಿ ಯಾವುದೇ ಚರ್ಚೆ ಸರಿಯಾಗಿ ನಡೆಯುತ್ತಿಲ್ಲ. ಉತ್ತರ ಕರ್ನಾಟಕ ಭಾಗಕ್ಕೆ ಅಧಿವೇಶನವೇ ದ್ರೋಹ ಅನ್ಯಾಯ ಮಾಡಿದಂತಾಗಿದೆ. ಈ ಭಾಗಕ್ಕೆ ಯಾವುದೇ ಅನುಕೂಲ ಇಲ್ಲ. ಸರ್ಕಾರ ಬದುಕಿದೆಯ, ಸತ್ತಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಗುಂಡಿ ಇದೆಯೋ, ಗುಂಡಿಯಲ್ಲಿ ರಸ್ತೆಯಿದೆಯೋ ಎಂಬಂಥ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದಲ್ಲಿದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಇಲ್ಲ. ಸಾಲದ್ದಕ್ಕೆ ಎಲ್ಲ ಇಲಾಖೆಯಿಂದ ಸರ್ಕಾರ ಹಣ ವಾಪಸ್ ಪಡೆಯುತ್ತಿರುವುದರಿಂದ ಅಭಿವೃದ್ಧಿಯೇ ನಿಂತು ಹೋಗಿದೆ ಎಂದು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.