ದತ್ತಮಾಲೆ ಧಾರಣೆಯಿಂದ ಅಂತರ ಕಾಯ್ದುಕೊಂಡರೇ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ!
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ದತ್ತಮಾಲೆ ಧರಿಸುವುದಾಗಿ ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿದಂತೆ ಕಾಣುತ್ತಿದೆ.
ಚಿಕ್ಕಮಗಳೂರು (ಡಿ.25): ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಖಚಿತವಾದ ಬೆನ್ನಲ್ಲಿಯೇ ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ, ದತ್ತಮಾಲೆ ಧರಿಸಲು ನಾಳೆ ಕೊನೆಯ ದಿನವಿದ್ದು, ಈವರೆಗೂ ಕುಮಾರಸ್ವಾಮಿ ಮಾತ್ರ ಆಗಮಿಸಿಲ್ಲ. ಇನ್ನು ದತ್ತಮಾಲೆ ಧರಿಸುವ ನಿರ್ಧಾರವನ್ನು ಕೈಬಿಟ್ಟಿದ್ದಾರಾ? ಎಂಬ ಪ್ರಶ್ನೆ ಶುರುವಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿದ್ದ ಅವಧಿಯಲ್ಲಿ ದತ್ತ ಜಯಂತಿ ಹಾಗೂ ದತ್ತಪೀಠದ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ವರ್ಷದಲ್ಲಿಯೇ ಪತನಗೊಂಡು ಆಪರೇಷನ್ ಕಮಲ ಮಾಡಿದ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇನ್ನು ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವನ್ನು ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಖಚಿತಗೊಂಡ ಬೆನ್ನಲ್ಲಿಯೇ ಮಾಜಿ ಸಿಎಂ ಕುಮಾರಸ್ವಾಮಿ ದತ್ತಪೀಠಕ್ಕೆ ಭೇಟಿ ನೀಡಿದಾಗ ತಾವು ದತ್ತಮಾಲೆ ಧರಿಸುವುದಾಗಿ ಬಹಿರಂಗ ಘೋಷಣೆ ಮಾಡಿದ್ದರು. ಆದರೆ, ಈಗ ದತ್ತಜಯಂತಿ ಅಂಗವಾಗಿ ದತ್ತಮಾಲೆ ಧರಿಸಲು ನಾಳೆ ಕೊನೆಯ ದಿನವಿದ್ದರೂ ಕುಮಾರಸ್ವಾಮಿ ಮಾತ್ರ ಇತ್ತ ಹೆಜ್ಜೆಯನ್ನೂ ಇಟ್ಟಿಲ್ಲ. ಆದ್ದರಿಂದ ತಮ್ಮ ದತ್ತಮಾಲೆ ಧರಿಸುವ ನಿರ್ಧಾರವನ್ನೇದಾದರೂ ಬದಲಾಯಿಸಿಕೊಂಡಿದ್ದಾರೆಯೇ ಎಂಬ ಗುಮಾನಿ ಎದುರಾಗಿದೆ.
ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ; ಎಚ್‌ಡಿಕೆ ಹೇಳಿಕೆಗೆ ಬಜರಂಗದಳ ವಿಶ್ವಹಿಂದು ಪರಿಷತ್ ಸ್ವಾಗತ!
ಇನ್ನು ರಾಜಕೀಯ ಮೂಲಗಳ ಮಾಹಿತಿ ನೋಡಿದಾಗ ದತ್ತಪೀಠಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೋಗೋದು ಡೌಟ್? ಎಂದು ಹೇಳಲಾಗುತ್ತಿದೆ. ನಾಳೆಯೇ ದತ್ತಮಾಲೆ ಕೊನೆ ದಿನವಾಗಿದೆ. ಈವರೆಗೆ ದತ್ತಮಾಲೆ ಧರಿಸಲು ಇಚ್ಛೆ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ದತ್ತಪೀಠಕ್ಕೆ ಹೋಗದೇ ಇರಲು ನಿರ್ಧಾರ ಕೈಗೊಂಡಿದ್ದಾರಂತೆ. ಹೀಗಾಗಿ, ದತ್ತ ಜಯಂತಿ ಅಂಗವಾಗಿ ಮಾಲೆ ಧರಿಸದೇ ದತ್ತಪೀಠಕ್ಕೆ ಹೋಗೋ ಬಗ್ಗೆ ಚಿಂತನೆ ಮಾಡಿದ್ದಾರೆನ್ನಲಾಗುತ್ತಿದೆ. ಆದ್ದರಿಂದ ಈಗ ಸದ್ಯಕ್ಕೆ ದತ್ತಪೀಠಕ್ಕೆ ಹೋಗದಿರಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದತ್ತಮಾಲೆ ಧರಿಸುವ ಬಗ್ಗೆ ಕುಮಾರಸ್ವಾಮಿ ಹೇಳಿದ ಮಾತು ಇಲ್ಲಿದೆ ನೋಡಿ:
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರು, 'ದತ್ತ ಮಾಲಾ ಧಾರಣೆ ದೇವರ ಕಾರ್ಯಕ್ರಮ. ಹಾಕೋ ಸಮಯ ಬಂದ್ರೆ ದತ್ತ ಮಾಲೆ ಹಾಕ್ತೀನಿ, ದತ್ತಮಾಲೆ ಏಕೆ ಹಾಕಬಾರದು? ಕಾನೂನು ಬಾಹಿರವಾಗಿ ಅಲ್ಲ, ಆ ರೀತಿಯಲ್ಲಿ ಯಾವುದನ್ನೂ ಮಾಡಲ್ಲ, ನಮ್ಮ ಸಂಸ್ಕೃತಿ ಉಳಿಸಲು ಕಾನೂನಾತ್ಮಕವಾಗಿ ಏನು ಬೇಕಾದರೂ ಮಾಡುತ್ತೇನೆ. ಜಾತ್ಯತೀತತೆ ಅಂದ್ರೆ ಏನು? ಅಲ್ಲೆಲ್ಲೋ ಹೋಗಿ ನಿಮ್ಮ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿಯಬೇಕು ಅಂತ, ಇದು ಜಾತ್ಯಾತೀತತೇನಾ? ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ಯೋಗ್ಯತೆ ಇದೆಯೇ' ಎಂದು ಪ್ರಶ್ನಿಸಿದ್ದರು.
ಮೊಟ್ಟ ಮೊದಲ ಬಾರಿಗೆ ದತ್ತಮಾಲೆ ಧರಿಸಿದ ವಿಪಕ್ಷ ನಾಯಕ ಆರ್. ಅಶೋಕ್: ಭರ್ಜರಿ ಸ್ಟೆಪ್ಸ್ ಹಾಕಿದ ಶೋಭಾ ಕರಂದ್ಲಾಜೆ!
ಇನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಮಯ ಬಂದ್ರೆ ದತ್ತಮಾಲೆ ಹಾಕುತ್ತೇನೆ ಎಂಬ ಹೇಳಿಕೆಯನ್ನು ಬಜರಂಗದಳ, ವಿಶ್ವಹಿಂದು ಪರಿಷತ್ ಸ್ವಾಗತಿಸಿತ್ತು. ಬಜರಂಗದಳ, ವಿಶ್ವಹಿಂದು ಪರಿಷತ್‌ನಿಂದ ಎಚ್ಡಿಕೆಗೆ ಆಹ್ವಾನವನ್ನೂ ನೀಡಿತ್ತು ಎನ್ನಲಾಗುತ್ತಿದೆ. ವಿಶ್ವಹಿಂದು ಪರಿಷತ್ ಬಜರಂಗದಳದ ನೇತೃತ್ವದಲ್ಲಿ ಡಿಸೆಂಬರ್ 17 ರಿಂದ 26 ರವರೆಗೂ ನಡೆಯುಲಿರುವ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ನಾಳೆ ದತ್ತಮಾಲಾಧಾರಣೆಗೆ ಕೊನೆಯ ದಿನವಾಗಿದೆ.