ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರೂ ಈಗಾಗಲೇ ಪ್ರವಾಹಕ್ಕೆ ತುತ್ತಾಗಿರುವ ರೇನ್‌ಬೋ ಡ್ರೈವ್‌ ಲೇಔಟ್‌, ಮಾರತ್‌ಹಳ್ಳಿ, ಸರ್ಜಾಪುರ, ಯಮಲೂರು ಲೇಔಟ್‌ಗಳಲ್ಲಿ ತುಂಬಿಕೊಂಡಿರುವ ನೀರಿನ ಪ್ರಮಾಣ ಹಾಗೆಯೇ ಇದೆ. 

ಬೆಂಗಳೂರು (ಸೆ.08): ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದರೂ ಈಗಾಗಲೇ ಪ್ರವಾಹಕ್ಕೆ ತುತ್ತಾಗಿರುವ ರೇನ್‌ಬೋ ಡ್ರೈವ್‌ ಲೇಔಟ್‌, ಮಾರತ್‌ಹಳ್ಳಿ, ಸರ್ಜಾಪುರ, ಯಮಲೂರು ಲೇಔಟ್‌ಗಳಲ್ಲಿ ತುಂಬಿಕೊಂಡಿರುವ ನೀರಿನ ಪ್ರಮಾಣ ಹಾಗೆಯೇ ಇದೆ. ಹೀಗಾಗಿ ನಿವಾಸಿಗಳು, ವಾಹನ ಸವಾರರು ಪರದಾಡುವ ಸ್ಥಿತಿ ಮುಂದುವರೆದಿದೆ. ಈ ನಡುವೆ ಪರಿಹಾರ ಕಾರ್ಯವೂ ನಡೆಯುತ್ತಿದೆ.

ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಯಿಂದ ದೇವರಬೀಸನಹಳ್ಳಿ ರಸ್ತೆಗೆ ನುಗ್ಗಿದ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಸುಮಾರು ಎರಡೂವರೆ ಅಡಿಯಷ್ಟುನೀರು ನಿಂತಿದೆ. ಮಾರತ್‌ಹಳ್ಳಿ ವರ್ತುಲ ರಸ್ತೆ(ರಿಂಗ್‌ರಸ್ತೆ) ಇಕೋಸ್ಪೇಸ್‌ ಜಾಗದಲ್ಲಿ ಬಿಬಿಎಂಪಿ ಮತ್ತು ಎಸ್‌ಡಿಆರ್‌ಎಫ್‌ ತಂಡ ಪಂಪ್‌ಗಳನ್ನು ಬಳಸಿ ನೀರು ಹೊರ ಹಾಕುವುದರಲ್ಲಿ ನಿರತವಾಗಿದೆ. ಸರ್ಜಾಪುರ ರಸ್ತೆಯಲ್ಲಿ ಒಂದೂವರೆ ಅಡಿಯಷ್ಟುನೀರು ತುಂಬಿಕೊಂಡಿದ್ದು, ಎಸ್‌ಡಿಆರ್‌ಎಫ್‌, ಅಗ್ನಿಶಾಮಕದಳದ ಸಿಬ್ಬಂದಿ ಪರಿಹಾರ ಕಾರ್ಯ ಕೈಗೊಂಡಿದೆ.

ಬೆಂಗಳೂರಿನಲ್ಲಿ ಪ್ರವಾಹ ತಡೆಗೆ ಮಾಸ್ಟರ್‌ ಪ್ಲಾನ್‌: ಸಿಎಂ ಬೊಮ್ಮಾಯಿ

ಚನ್ನಸಂದ್ರದ ಕೆರೆಕೋಡಿ ಬಿದ್ದು ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಮೂರು ಅಡಿಗಳಷ್ಟುನೀರು ನಿಂತಿದೆ. ಈ ಪರಿಣಾಮ ವಾಹನ ಸವಾರರು ಸಂಚರಿಸಲು ಪರದಾಡುವ ಪರಿಸ್ಥಿತಿ ಇದೆ. ಹಾಗೆಯೇ ಬೆಳ್ಳಂದೂರಿನ ಲೇಕ್‌ ವೀವ್‌ ಅಪಾರ್ಟ್‌ಮೆಂಟ್‌ನ ನೆಲಮಹಡಿಗೂ ನೀರು ನುಗ್ಗಿದ್ದು ಪಂಪ್‌ಸೆಟ್‌ ಮೂಲಕ ಹೊರ ಹಾಕುವ ಪ್ರಯತ್ನ ನಡೆಯುತ್ತಿದೆ. ಮಹದೇವಪುರದಲ್ಲಿ ಎರಡು ರಸ್ತೆಗಳಲ್ಲಿ ಈಗಲೂ ನೀರು ತುಂಬಿಕೊಂಡಿದೆ. ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳು ಸೇರಿದಂತೆ ಹಲವು ಕಡೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಬಹುತೇಕ ಕಡೆಗಳಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಮಾರತ್ತಹಳ್ಳಿಯ ರಸ್ತೆಯಲ್ಲಿ ಮಳೆಯಿಂದ ದೊಡ್ಡ ಗುಂಡಿ ಬಿದ್ದಿದ್ದು ಸಂಚಾರಕ್ಕೆ ತೀವ್ರ ತೊಂದರೆಯುಂಟು ಮಾಡಿದೆ.

ರೈನ್‌ಬೋ ಲೇಔಟಲ್ಲಿ ಇಳಿಯದ ಪ್ರವಾಹ: ರೈನ್‌ಬೋ ಡ್ರೈವ್‌ ಲೇಔಟ್‌ನಲ್ಲೂ ನೀರಿನ ಪ್ರಮಾಣ ಇದ್ದಂತೆಯೇ ಇದೆ. ಸುಮಾರು ಮೂರು ಅಡಿಗಳಷ್ಟುನೀರು ಇರುವುದರಿಂದ ಇಲ್ಲಿನ ನಿವಾಸಿಗಳು ಟ್ರ್ಯಾಕ್ಟರ್‌, ಬೋಟ್‌ಗಳ ಮೂಲಕ ಸಂಚರಿಸುವ ಪರಿಸ್ಥಿತಿ ಮುಂದುವರೆದಿದೆ. ಶಾಲಾ, ಕಾಲೇಜು ಮತ್ತು ಕಚೇರಿಗಳಿಗೆ ಹೋಗಲು ಸ್ವಂತ ವಾಹನಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹಲವು ಮನೆಗಳ ದಿನಬಳಕೆ ವಸ್ತುಗಳು ಹಾನಿಗೊಳಗಾಗಿವೆ. ಕೆಲ ಸಂಘ-ಸಂಸ್ಥೆಗಳು ಉಚಿತ ಊಟ, ಉಪಹಾರದ ವ್ಯವಸ್ಥೆ ಮಾಡಿವೆ. ಮಳೆ ನೀರಿಗೆ ಮುಳುಗಿದ ಫೋರ್ಡ್‌, ಐ20, ಡಸ್ಟರ್‌, ಇನೋವಾ ಸೇರಿದಂತೆ ಐಷಾರಾಮಿ ಕಾರುಗಳನ್ನು ಮಾಲಿಕರು ಹೊರ ತೆಗೆಯುವ ಪ್ರಯತ್ನಗಳನ್ನು ಮಾಡುತ್ತಿದ್ದ ದೃಶ್ಯಕಂಡು ಬಂತು. ರೈನ್‌ಬೋ ಕಾಲೋನಿ ರಸ್ತೆಯು ಕೆರೆಯಂತಾಗಿದ್ದು, ವಾಹನ ಸವಾರರು ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ.

ಮಹದೇವಪುರದ ಮಳೆ ಹಾನಿ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ನ 2 ತಂಡಗಳು (4 ಬೋಟ್‌ಗಳು) ಮತ್ತು ಎಸ್‌ಡಿಆರ್‌ಎಫ್‌ನ 5 ತಂಡಗಳು (2 ಬೋಟ್‌), 50 ಮಂದಿ ಸಿಬ್ಬಂದಿ, 2 ಪಂಪ್‌ಗಳನ್ನು ಬಳಕೆ ಮಾಡಲಾಗಿದೆ. ಯಮಲೂರು, ಎಪಿಲಾನ್‌, ಹೋಪ್‌ಫಾಮ್‌ರ್‍ನಲ್ಲಿ ತಲಾ 2 ಬೋಟ್‌ಗಳು, ದಿವ್ಯಶ್ರೀ ಅಪಾರ್ಟ್‌ಮೆಂಟ್‌, ಆರ್‌ಬಿಡಿಯಲ್ಲಿ ತಲಾ 3 ಬೋಟ್‌ಗಳು ಮತ್ತು ವಿನಾಯಕ ಲೇಔಟ್‌, ಸುಮಧುರ ಅಪಾರ್ಟ್‌ಮೆಂಟ್‌, ಬೆಳತ್ತೂರಿನಲ್ಲಿ ತಲಾ ಒಂದು ಬೋಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

Bengaluru Rains: ಬೆಂಗಳೂರಿನಲ್ಲಿ ಮಳೆ ಸಾರ್ವಕಾಲಿಕ ದಾಖಲೆ..!

ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಬಳಿ ತೆರವು ಕಾರ್ಯಚರಣೆ: ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ದಿವ್ಯಶ್ರೀ ಅಪಾರ್ಟ್‌ಮೆಂಟ್‌ನ ಒತ್ತುವರಿ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದೆ. ಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್‌, ಉದ್ಯಾನವನ, ಸೆಕ್ಯುರಿಟಿ ಹೌಸ್‌ ಸೇರಿದಂತೆ ಇತರ ಭಾಗಗಳನ್ನು ಜೆಸಿಬಿ ನೆರವಿನಿಂದ ತೆರವುಗೊಳಿಸಲಾಗುತ್ತಿದೆ. ರಾಜಕಾಲುವೆ ಮೇಲೆ ಹಾಕಿದ್ದ ಕಾಂಕ್ರಿಟನ್ನು ಕೂಡ ತೆರವುಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.