Asianet Suvarna News Asianet Suvarna News

ನೆರೆ ಸಂತ್ರಸ್ತರಿಗಾಗಿ ಸಿದ್ದು ವಿಶೇಷ ಮನವಿ: ಸೈ ಎಂದ ಸಿಎಂ ಯಡಿಯೂರಪ್ಪ!

ನೆರೆ ಸಂತ್ರಸ್ತರಿಗಾಗಿ ಸಿದ್ದು ವಿಶೇಷ ಮನವಿ: ಸೈ ಎಂದ ಸಿಎಂ ಯಡಿಯೂರಪ್ಪ!| ಸಿದ್ದರಾಮಯ್ಯ ಆಗ್ರಹಕ್ಕೆ ಸಿಎಂ ಯಡಿಯೂರಪ್ಪ ಒಪ್ಪಿಗೆ| ಖಾಲಿ ಜಾಗವಿದ್ದರೆ ವಸತಿಗೆ ಅವಕಾಶ ನೀಡಲು ಸೂಚನೆ

Karnataka Flood Victims Will Get Sheds And Houses Built In Forest Land
Author
Bangalore, First Published Oct 12, 2019, 8:34 AM IST

ವಿಧಾನಸಭೆ[ಅ.12]: ನೆರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಲಭ್ಯವಿರುವ ಅರಣ್ಯ ಇಲಾಖೆಯ ಖಾಲಿ ಜಮೀನಿನಲ್ಲಿ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳು, ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡುವಂತೆ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಶುಕ್ರವಾರ ನೆರೆ ಸಂಕಷ್ಟಮತ್ತು ಪರಿಹಾರ ವಿಷಯ ಕುರಿತು ನಿಲುವಳಿ ಸೂಚನೆ ಮೇಲೆ ತಮ್ಮ ಚರ್ಚೆ ಮುಂದುವರೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನೆರೆ ಪ್ರದೇಶಗಳಲ್ಲಿ ನದಿ, ಹೊಳೆ ದಂಡೆಗಳಲ್ಲಿನ ಕೆಲವು ಊರುಗಳು ಅರಣ್ಯ ಪ್ರದೇಶದಲ್ಲಿವೆ. ಮೂರ್ನಾಲ್ಕು ಕಿ.ಮೀ. ಹೋದರೂ ಕಂದಾಯ ಭೂಮಿ ಸಿಗುವುದಿಲ್ಲ. ಅಂತಹ ಕಡೆ ಅರಣ್ಯ ಭೂಮಿ, ಡೀಮ್‌್ಡ ಅರಣ್ಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಡೀಮ್‌್ಡ ಅರಣ್ಯ ಭೂಮಿ ಕಂದಾಯ ಇಲಾಖೆಗೆ ಸೇರಿದ್ದು ಅದನ್ನು ಮರೆತು ತಾವು ಸರ್ಕಾರದಡಿ ಬರುವುದಿಲ್ಲ ಎನ್ನುವಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಅವರು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ನೆರೆ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ: ಕಾಂಗ್ರೆಸ್ ಪಟ್ಟು, ಸ್ಪೀಕರ್ ನಿರಾಕರಣೆ!

ಇದಕ್ಕೆ, ಕಾಂಗ್ರೆಸ್‌ನ ಪರಮೇಶ್ವರ್‌ ನಾಯಕ್‌, ಅಮರೇಗೌಡ ಬಯ್ಯಾಪುರ, ಅಂಜಲಿ ನಿಂಬಾಳ್ಕರ್‌, ಬಿಜೆಪಿಯ ಕೆ.ಜಿ.ಬೋಪಯ್ಯ, ಅರಗ ಜ್ಞಾನೇಂದ್ರ, ಹಾಲಪ್ಪ, ಅರವಿಂದ ಲಿಂಬಾವಳಿ, ರಾಜೀವ್‌ ಸೇರಿದಂತೆ ಪಕ್ಷಾತೀತವಾಗಿ ಹಲವು ಸದಸ್ಯರು ದನಿಗೂಡಿಸಿ, ಅರಣ್ಯ ಇಲಾಖೆ ಭೂಮಿಯಲ್ಲಿ ಗಿಡ ಮರಗಳು ಇಲ್ಲದಿದ್ದರೂ ಅಲ್ಲಿ ತಾತ್ಕಾಲಿಕ ಶೆಡ್‌, ಸಂತ್ರಸ್ತರು ತಾತ್ಕಾಲಿಕ ಮನೆಗಳ ನಿರ್ಮಾಣ ಮಾಡಿಕೊಳ್ಳಲು ಬಿಡುತ್ತಿಲ್ಲ. ಕನಿಷ್ಠ ಕುಡಿಯುವ ನೀರಿನ ಪೈಪುಗಳನ್ನು ಭೂಮಿಯೊಳಗೆ ತೆಗೆದುಕೊಂಡು ಹೋಗಲೂ ಬಿಡುತ್ತಿಲ್ಲ. ಸಂತ್ರಸ್ತರನ್ನು ನೆರೆ ಪ್ರದೇಶದಿಂದ ಹೊರಗೆ ಕರೆತರಲು ದಾರಿಯನ್ನೂ ಬಿಟ್ಟುಕೊಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲೆಡೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಯಾರೂ ಲೆಕ್ಕವಿಲ್ಲದಾಗಿದೆ ಎಂದು ಕಿಡಿ ಕಾರಿದರು.

‘ನಿಮ್ಮ ಮಾತು ಕೇಳಲ್ಲ.. ಕೇಳಕಾಗಲ್ಲ’ ಸಿದ್ದು ಸವಾಲು, ಸ್ಪೀಕರ್ ಕೂಲ್ ಕೂಲ್!

ಇದಕ್ಕೆ, ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ವಿಚಾರದಲ್ಲಿ ಇಡೀ ಸದನದ ಸದಸ್ಯರ ಅಭಿಪ್ರಾಯ ಒಂದೇ ಆಗಿದೆ. ನೆರೆ ಪ್ರದೇಶದಲ್ಲಿ ಕುಸಿದಿರುವ ಮನೆಗಳ ಪಕ್ಕದಲ್ಲೇ ಜಾಗವಿದ್ದರೂ ಅರಣ್ಯ ಇಲಾಖೆಯವರು ಸಂತ್ರಸ್ತರಿಗೆ ಶೆಡ್‌, ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡದೆ ಕಿರುಕುಳ ನೀಡುತ್ತಿದ್ದಾರೆಂಬ ದೂರುಗಳು ಬಂದಿವೆ. ಈ ಸಂಬಂಧ ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿಮ್ಮ ನಡವಳಿಕೆ ಬದಲಿಸಿಕೊಂಡು ಸಂತ್ರಸ್ತರ ನೆರವಿಗೆ ಸ್ಪಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.

Follow Us:
Download App:
  • android
  • ios