ಧರ್ಮಸ್ಥಳದಲ್ಲಿ ನಡೆದಿರುವ 100ಕ್ಕೂ ಅಧಿಕ ನಿಗೂಢ ಹತ್ಯೆಗಳ ಬಗ್ಗೆ ಮಾಜಿ ನೌಕರನೊಬ್ಬ ಬಹಿರಂಗಪಡಿಸಿದ್ದಾನೆ. ನೂರಾರು ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಅತ್ಯಾಚಾ*ರ ಮತ್ತು ಕೊಲೆಗಳ ಆರೋಪ ಕೇಳಿಬಂದಿದ್ದು, ಈ ಹತ್ಯೆಗಳ ತನಿಖೆಗೆ ಆಗ್ರಹಿಸಿ ವಕೀಲರ ಪತ್ರ ವೈರಲ್ ಆಗಿದೆ.
ಬೆಂಗಳೂರು (ಜು.18): ಸೌಜನ್ಯಾ ಕೇಸ್ ನಂತರ ಮತ್ತೆ ಧರ್ಮಸ್ಥಳ ಸುದ್ದಿಯಲ್ಲಿದೆ. ರಾಜ್ಯದಲ್ಲಿ ಸೌಜನ್ಯಾ ಹೋರಾಟ ತಣ್ಣಗಾಗ್ತಿದ್ದಂತೆ ಮತ್ತೊಂದು ಸಂಚಲನ ಸೃಷ್ಟಿಸಿದೆ. ನಿಗೂಢ ವ್ಯಕ್ತಿಯಿಂದ ಧರ್ಮಸ್ಥಳದ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಧರ್ಮಸ್ಥಳ ಸಂಸ್ಥೆ ಮಾಜಿ ನೌಕರ ಎಂದು ಹೇಳಿಕೊಳ್ಳುವ ಅನಾಮಧೇಯ ವ್ಯಕ್ತಿಯ ನೂರಾರು ಜನ ಅಪ್ರಾಪ್ತ ಬಾಲಕಿಯರು ಹಾಗೂ ಮಹಿಳೆಯರ ಅತ್ಯಾಚಾ*ರ ಮತ್ತು ಕೊಲೆ ಮಾಡಿದ ಶವಗಳನ್ನು ನಾನು ಹೂತು ಹಾಕಿದ್ದೇನೆ ಎಂಬ ಹೇಳಿಕೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಇವೆಲ್ಲವೂ 15 ವರ್ಷದಲ್ಲಿ ಧರ್ಮಸ್ಥಳದಲ್ಲಿ ನಿಗೂಢ ಹತ್ಯೆಗಳಾದವಾ? ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನಿವೃತ್ತಿ ನ್ಯಾಯಮೂರ್ತಿಗಳು, ಸಿಎಂ ಸಿದ್ದರಾಮಯ್ಯ, ಮಗಳನ್ನು ಕಳೆದುಕೊಂಡ ಸಂತ್ರಸ್ತ ತಾಯಿ ಹಾಗೂ ವಕೀಲರ ಹೇಳಿಕೆಗಳು ಏನೇನಿವೆ ಎಂಬ ವಿವರ ಇಲ್ಲಿದೆ..
ಅನಾಮಧೇಯ ವ್ಯಕ್ತಿಯು ನೂರಾರು ಶವಗಳನ್ನ ಹೂತು ಹಾಕಿದ್ದೆ ಹೇಳುವುದಕ್ಕೆ ಪಶ್ಚಾತಾಪ ಆಗಿದೆ ಎಂದು ಇದೀಗ ಬಂದು ದೂರು ಕೊಟ್ಟಿದ್ದಾನೆ. ಕಳೆದ 16 ವರ್ಷಗಳಲ್ಲಿ ನಡೆದ ಸಾವಿನ ರಹಸ್ಯ (ಅಂದರೆ 1998 ರಿಂದ 2014ರವರೆಗೆ) ಧರ್ಮಸ್ಥಳದಲ್ಲಿ ಸರಣಿ ಹತ್ಯೆ ನಡೆದಿದೆಯಾ ಎಂಬುದು ಪೊಲೀಸ್ ಇಲಾಖೆ ನಿದ್ದೆಗೆಡಿಸಿದೆ. ಹತ್ಯಾಕಾಂಡಗಳ ಸ್ಫೋಟಕ ಸತ್ಯ ಬಿಚ್ಚಿಡುವುದಾಗಿ ಅಪರಿಚಿತ ವ್ಯಕ್ತಿ ಹೇಳಿದ್ದಾನೆ.
ಇನ್ನು ಈ ಅನಾಮಧೇಯ ವ್ಯಕ್ತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದಕ್ಕಿಂತಲೂ ಮೊದಲು ಧರ್ಮಸ್ಥಳದಲ್ಲಿ ನಿಗೂಢ ಹತ್ಯೆಗಳ ಬಗ್ಗೆ ವಕೀಲರ ಪತ್ರ ವೈರಲ್ ಆಗಿದೆ. ಬೆಂಗಳೂರಿನ ವಕೀಲರ ಲೆಟರ್ ಹೆಡ್‌ನಲ್ಲಿ ಪತ್ರ ವೈರಲ್ ಆಗುತ್ತಿದೆ. ವಕೀಲ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ ಲೆಟರ್ ಹೆಡ್‌ನ ಪತ್ರ ಇದಾಗಿದೆ. ಇದರಲ್ಲಿ ಧರ್ಮಸ್ಥಳದಲ್ಲಿ ನಡೆದ ಹತ್ಯೆ, ಅತ್ಯಾಚಾ*ರಗಳ ಮಾಹಿತಿಯನ್ನು ಬರೆಯಲಾಗಿದೆ. ಜೂನ್ 22ರ ದಿನಾಂಕವನ್ನು ಹೊಂದಿದ್ದ ಪತ್ರ ರಾಜ್ಯಾದ್ಯಂತ ವೈರಲ್ ಆಗಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಶವಗಳನ್ನ ಹೂತು ಹಾಕಿದ್ದ ವ್ಯಕ್ತಿ ಶರಣಾಗತಿಗೆ ಸಿದ್ಧ ಎಂಬ ಪತ್ರ ವೈರಲ್ ಆಗಿತ್ತು.
ಪತ್ರದಲ್ಲಿರುವ ವಿವರ ಇಲ್ಲಿದೆ:
ಓಜಸ್ವಿ ಗೌಡ ಮತ್ತು ಸಚಿನ್ ಎಸ್ ದೇಶಪಾಂಡೆ, ವಕೀಲರು
ದಿನಾಂಕ: 22-ಜೂನ್-2025
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾ*ರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು ತಾನು ಹೂತು ಹಾಕಿರುವ ಮೃತದೇಹಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರತೆಗೆದ ಕಳೇಬರವೊಂದನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಎಸ್‌ಐಟಿ ತನಿಖೆಗೆ ಆಗ್ರಹ:
ನ್ಯಾಯಮೂರ್ತಿ ಗೋಪಾಲಗೌಡರಿಂದ ಸೌಜನ್ಯಾ ಪ್ರಕರಣದ ತನಿಖೆಗೂ ಒತ್ತಾಯ ಮಾಡಿದ್ದಾರೆ. ಜೊತೆಗೆ, ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಶವಗಳ ಅಂತ್ಯಕ್ರಿಯೆ ನಡೆದ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ರಾಜ್ಯ ಸರ್ಕಾರ ಸ್ವತಂತ್ರ ತನಿಖಾ ಸಂಸ್ಥೆಗೆ (ಎಸ್‌ಐಟಿ) ಕೊಡಬೇಕು ಎಂದು ಹಿಂದುಳಿದ ವರ್ಗದ ಆಗೋಗದ ಮಾಜಿ ಅಧ್ಯಕ್ಷ ದ್ವಾರಕಾನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ನಾಪತ್ತೆಯಾದ ಬಾಲಕಿ ತಾಯಿಯಿಂದ ವಿಶೇಷ ಮನವಿ:
ಧರ್ಮಸ್ಥಳದಲ್ಲಿ ನನ್ನ ಮಗಳು ಅನನ್ಯಾ ಭಟ್ ನಾಪತ್ತೆ ಆಗಿದ್ದು, ಈವರೆಗೂ ಪತ್ತಯಾಗಿಲ್ಲ. ಇದೀಗ ಒಬ್ಬ ವ್ಯಕ್ತಿ ನೂರಾರು ಬಾಲಕಿಯರು ಹಾಗೂ ಮಹಿಳೆಯರ ಶವಗಳನ್ನು ಹೂತು ಹಾಕಿದ್ದು, ಅವುಗಳನ್ನು ತೆರೆಯುವುದಾಗಿ ಮುಂದೆ ಬಂದಿದ್ದಾನೆ. ಪೊಲೀಸರು ಹಾಗೂ ಸರ್ಕಾರ ಕೂಡಲೇ ಎಲ್ಲ ಶವಗಳನ್ನು ಹೊರತೆಗೆಸಿ ಡಿಎನ್‌ಎ ಪರೀಕ್ಷೆಯನ್ನು ಮಾಡಿಸಿ. ಅದರಲ್ಲಿ ನನ್ನ ಮಗಳು ಅನನ್ಯಾ ಭಟ್ ಶವ ಸಿಕ್ಕಿದರೆ ಅದನ್ನು ನಾನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಸಬೇಕು ಎಂದು ನಾಪತ್ತೆಯಾದ ಬಾಲಕಿಯ ತಾಯಿ ಸರ್ಕಾರಕ್ಕ ಮನವಿ ಮಾಡಿಕೊಂಡಿದ್ದಾರೆ.
