ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರು 10 ದಿನಗಳ ರಜೆ ಮೇಲೆ ತೆರಳಿ ಅಜ್ಞಾತವಾಸಕ್ಕೆ ಜಾರಿದ್ದಾರೆ. ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ಈ ಪ್ರಕರಣವು ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಭಾರೀ ಮುಜುಗರ ತಂದಿದೆ.

ಬೆಂಗಳೂರು (ಜ.19): ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿರುವ ಡಿಜಿಪಿ ರಾಮಚಂದ್ರ ರಾವ್ ಅವರು ಸಮವಸ್ತ್ರದಲ್ಲಿಯೇ ಪೊಲೀಸ್ ಕಚೇರಿಯಲ್ಲಿ ಹಲವು ಮಹಿಳೆಯರೊಂದಿಗೆ ನಡೆಸಿದ ಎನ್ನಲಾದ 47 ಸೆಕೆಂಡ್‌ಗಳ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಮತ್ತೊಂದೆಡೆ, ಮಾಧ್ಯಮಗಳಿಗೆ ಹಾಗೂ ಸರ್ಕಾರಕ್ಕೆ ಉತ್ತರ ಕೊಡಲಾಗದೇ ರಾಮಚಂದ್ರ ರಾವ್ ಅವರು ಯಾರ ಕೈಗೂ ಸಿಗದಂತೆ ಅಜ್ಞಾತವಾಸಕ್ಕೆ ಜಾರಿದ್ದಾರೆ. ಡಿಜಿಪಿ ಶ್ರೇಣಿಯ ಅಧಿಕಾರಿ ರಾಮಚಂದ್ರ ರಾವ್ ಅವರು ದಿಢೀರ್ ಆಗಿ 10 ದಿನಗಳ ಕಾಲ ರಜೆ ಮೇಲೆ ತೆರಳಿದ್ದು, ಸದ್ಯ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ಅಜ್ಞಾತವಾಸಕ್ಕೆ ಜಾರಿದ ಡಿಜಿಪಿ

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರು, ಕಳೆದ 8 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಇದ್ದಾಗ ರಾಸಲೀಲೆ ಮಾಡಿದ್ದಾರೆ ಎನ್ನಲಾದ ವಿಡಿಯೋಗಳು ಇವಾಗಿವೆ. ಆದರೆ, ಸಮವಸ್ತ್ರದಲ್ಲಿಯೇ ಮಹಿಳೆಯರೊಂದಿಗೆ ನಡೆಸಿದ ಎನ್ನಲಾದ 47 ಸೆಕೆಂಡ್‌ಗಳ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ಇತ್ತ ರಾಮಚಂದ್ರ ರಾವ್ ಅವರು ಯಾರ ಕೈಗೂ ಸಿಗದಂತೆ ನಾಪತ್ತೆಯಾಗಿದ್ದಾರೆ. ಸದ್ಯ ಅವರು ಯಾರ ಕರೆಗಳನ್ನೂ ಸ್ವೀಕರಿಸುತ್ತಿಲ್ಲ. ತಮ್ಮ ಅಧಿಕೃತ ಮತ್ತು ವೈಯಕ್ತಿಕ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಹೊರಜಗತ್ತಿನ ಸಂಪರ್ಕದಿಂದ ಸಂಪೂರ್ಣ ದೂರ ಉಳಿದಿದ್ದಾರೆ.

10 ದಿನಗಳ ರಜೆ ಅರ್ಜಿ

ತಮ್ಮ ವಿರುದ್ಧದ ಆರೋಪಗಳು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮತ್ತು ಗೃಹ ಸಚಿವರು ಭೇಟಿಗೆ ನಿರಾಕರಿಸಿದ ಬೆನ್ನಲ್ಲೇ, ರಾಮಚಂದ್ರ ರಾವ್ ಅವರು 10 ದಿನಗಳ ಕಾಲ ರಜೆ ಮೇಲೆ ತೆರಳುತ್ತಿರುವುದಾಗಿ ಕಚೇರಿ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮ ಅಥವಾ ಅಮಾನತು ಆದೇಶ ಹೊರಬೀಳುವ ಮುನ್ಸೂಚನೆ ಅರಿತು, ತನಿಖೆ ಮತ್ತು ಕಾನೂನು ಹೋರಾಟದ ಸಿದ್ಧತೆಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸರ್ಕಾರದ ಮುಂದಿನ ನಡೆ ಕುತೂಹಲ

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕಾನೂನಿಗಿಂತ ಯಾರೂ ದೊಡ್ಡವರಲ್ಲ' ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿಜಿಪಿ ಶ್ರೇಣಿಯ ಅಧಿಕಾರಿಯೇ ಇಂತಹ ವಿವಾದದಲ್ಲಿ ಸಿಲುಕಿರುವುದು ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ಅವರು ರಜೆಯಲ್ಲಿದ್ದರೂ ಸಹ, ಸರ್ಕಾರವು ಅವರ ಮೇಲೆ ಇಲಾಖಾ ತನಿಖೆ ನಡೆಸಿ ಅಮಾನತು ಮಾಡುವ ಸಾಧ್ಯತೆ ದಟ್ಟವಾಗಿದೆ. ತಮ್ಮದು 'ಫ್ಯಾಬ್ರಿಕೇಟೆಡ್' ವಿಡಿಯೋ ಎಂದು ವಾದಿಸುತ್ತಿರುವ ಅಧಿಕಾರಿಯ ಈ ದಿಢೀರ್ ರಜೆ ಮತ್ತು ಮೌನವು ಸಾರ್ವಜನಿಕರಲ್ಲಿ ಮತ್ತಷ್ಟು ಅನುಮಾನಗಳನ್ನು ದಟ್ಟವಾಗಿಸಿದೆ.