'ದೇಶಕ್ಕಾಗಿ ಅತ್ತೆ, ಪತಿಯನ್ನ ಕಳೆದುಕೊಂಡರು..' ಮಹಿಳಾ ದಿನಾ ಕಾರ್ಯಕ್ರಮದಲ್ಲಿ ಸೋನಿಯಾ ತ್ಯಾಗದ ಬಗ್ಗೆ ಡಿಕೆಶಿ ಭಾವುಕ ಮಾತು!
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶಕ್ತಿ ತುಂಬಿದ್ದು, ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ವಿವರಿಸಿದರು.

ಬೆಂಗಳೂರು (ಮಾ.15): ಮಹಿಳೆ ನಡೆದರೇ ಕುಟುಂಬ ನಡೆಯುತ್ತೆ, ಮಹಿಳೆ ಮುಂದೆ ನಡೆದ್ರೆ ಮನೆ. ಊರು ನಡೆಯುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.
ಮಹಿಳಾ ದಿನಾಚರಣೆ ಹಿನ್ನೆಲೆ ಇಂದು ಕೆಪಿಸಿಸಿಯಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಿಂದ 1.23 ಕೋಟಿ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. 1.56 ಫಲಾನುಭವಿಗಳು ಗೃಹಜ್ಯೋತಿ ಯೋಜನೆ ಪಡೆಯುತ್ತಿದ್ದಾರೆ. ನಾನು ಅಧಿಕಾರ ತೆಗೆದುಕೊಂಡು ಬಳಿಕ ಒಂದು ನಿರ್ಧಾರ ಮಾಡಿದ್ದೆ. ಮುಂದಿನ ಚುನಾವಣೆಯಲ್ಲಿ ಭವಿಷ್ಯ ಕಾಣಬೇಕು ಅಂದ್ರೆ ಅದು ಮಹಿಳೆಯರು- ಯುವಕರಿಂದ ಅಂತಾ ಅರಿತುಕೊಂಡಿದ್ದೆ. ಹೀಗಾಗಿ ಚುನಾವಣೆಯ ಪ್ರಣಾಳಿಕೆ ಮಾಡುವಾಗ ಮಹಿಳೆಯರು- ಯುವಕರಿಗೆ ಆದ್ಯತೆ ನೀಡಿದೆ. ಆದರೆ ಇದನ್ನು ವಿರೋಧಿಗಳು ಟೀಕಿಸಿದರು. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತಾ ಆಡಿಕೊಂಡರು. ಈಗ ಅವರೇ ನಮ್ಮನ್ನ ಫಾಲೋಅಪ್ ಮಾಡ್ತಾ ಇದಾರೆ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಮಹಿಳೆಯರಿಗೆ ಶಕ್ತಿ ತುಂಬಿದೆ:
ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಶಕ್ತಿ ಕೊಟ್ಟಿದೆ. ಆದರೆ ಮಹಿಳೆಯರು ಪಕ್ಷಕ್ಕೆ ಏನು ಕಾಣಿಕೆ ಕೊಡುತ್ತೀರಾ? ಮಹಿಳಾ ಕಾಂಗ್ರೆಸ್ ಬಗ್ಗೆ ಸಮಾಧಾನ ಇಲ್ಲ. ನಾನು ಅಂದುಕೊಂಡಷ್ಟು ಪಕ್ಷ ಸಂಘಟನೆ ಮಾಡಿಲ್ಲ. ರಾಣಿ ಸತೀಶ ಅಧ್ಯಕ್ಷ ಆದ ದಿನದಿಂದ ಇಂದಿನವರೆಗೂ ಮಹಿಳಾ ಕಾಂಗ್ರೆಸ್ ಸಂಘಟನೆ ಬಗ್ಗೆ ಸಮಾಧಾನ ಇಲ್ಲ ಎಂದರು.
ಇದನ್ನೂ ಓದಿ: 'ಏಯ್ ಡಿಕೆ ಶಿವಕುಮಾರ, ಹಿಂದಿ ಹೇರಿಕೆಗೆ ರಾಹುಲ್, ಸೋನಿಯಾಗಾಂಧಿ ಪರಿಹಾರ ಕೊಡ್ತಾರಾ?; ಕೋಡಿಹಳ್ಳಿ ಏಕವಚನದಲ್ಲೇ ವಾಗ್ದಾಳಿ!
ಪ್ರತಿಯೊಬ್ಬ ಫಲಾನುಭವಿಯಿಂದ 50 ಜನರ ಸದಸ್ಯತ್ವ ಮಾಡಿಸಿ:
ಗೃಹಲಕ್ಷ್ಮೀ ಯೋಜನೆಯ ಪ್ರತಿಯೊಬ್ಬ ಪಲಾನುಭವಿಗಳಿಂದ 50 ಜನರಿಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಮಾಡಿಸಿ. ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಪಡೆಯುವವರ ಮೂಲಕ ಸದಸ್ಯತ್ವ ಮಾಡಿಸಿ. ಆ ಪಕ್ಷ ಉಳಿದ್ರೆ ಮಾತ್ರ ನಿಮಗೆ ಲಾಭ ಸಿಗುತ್ತೆ ಅಂತಾ ತಿಳಿಸಿ ಸದಸ್ಯತ್ವ ಮಾಡಿಸಿ. ಶ್ರಮ ಇರೋ ಕಡೆ ಫಲ ಇದೆ. ಸಂಘಟನೆ ಮಾಡಿ. ಸಮಾಜ ಸೇವೆ ಮಾಡುವವರನ್ನ ಜನರು ಗುರುತಿಸುತ್ತಾರೆ ಎಂದು ಸಲಹೆ ನೀಡಿದರು.
ಸೋನಿಯಾ ತ್ಯಾಗ ಸ್ಮರಿಸಿದ ಡಿಕೆಶಿ:
ಮಹಿಳೆಯರು ತ್ಯಾಗಮಯಿಗಳು. ನಮ್ಮ ನಾಯಕಿ ಸೋನಿಯಾ ಗಾಂಧಿ ದೇಶಕ್ಕಾಗಿ ಅತ್ತೆ, ಗಂಡನನ್ನು ಕಳೆದುಕೊಂಡರು. ಸೋನಿಯಾ ಗಾಂಧಿಯವರನ್ನ ಪ್ರಧಾನಿ ಮಾಡೋಕೆ ಹೋದಾಗ ದೇಶ ಉದ್ದಾರ ಆಗಬೇಕು ಅಂತಾ ಮನಮೋಹನ ಸಿಂಗ್ ಅವರನ್ನ ಪ್ರಧಾನಿ ಮಾಡಿದ್ರು. ನಾವೇನಾದ್ರೂ ಪಿಎಂ ಪಟ್ಟ ಸಿಗುತ್ತಂದ್ರೆ ಬಿಟ್ಟು ಕೊಡ್ತೀವಾ? ಪಂಚಾಯ್ತಿ ಸ್ಥಾನ ಬಿಡಲ್ಲ. ಆರು ತಿಂಗಳು ಒಂಬತ್ತು ತಿಂಗಳು ಅಂತ ಇರ್ತಾರೆ. ಇಂದು ನಾಳೆ ಅಂತ ಓಡಾಡ್ತಾ ಇರ್ತಾರೆ. ಆದರೆ ಸೋನಿಯಾ ಗಾಂಧಿ ಹಾಗಲ್ಲ, ಪ್ರಧಾನಮಂತ್ರಿ ಸ್ಥಾನವನ್ನೇ ಬಿಟ್ಟು ಕೊಟ್ರು ಎಂದು ಸೋನಿಯಾ ಗಾಂಧಿ ತ್ಯಾಗವನ್ನು ಸ್ಮರಿಸಿದರು.
ಬಿಜೆಪಿ ವಿರುದ್ಧ ಕಿಡಿ:
ಸೌಮ್ಯರೆಡ್ಡಿ ಅವರನ್ನ ಅಧ್ಯಕ್ಷೆ ಮಾಡಿದಾಗ ಸಾಕಷ್ಟು ವಿರೋದ ಮಾಡಿದ್ರು. ಮಾಡೋರು ಮಾಡಲಿ ಬಿಡಿ, ನಾವು ಸೈಟ್ ಗಳನ್ನ ಕೊಡುವಾಗ ಮಹಿಳೆಯರ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸ್ತಾ ಇದ್ದೇವೆ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು. ಬಿಜೆಪಿಯವರು ಗ್ಯಾರಂಟಿ ಸಮಿತಿ ಮಾಡಿದ್ದಕ್ಕೆ ಗಲಾಟೆ ಎಬ್ಬಿಸಿದರು. ಆಗ ಸಿಎಂ ನಿಮ್ಮ ಹಕ್ಕನ್ನು ಕಿತ್ತುಕೊಳ್ಳಲ್ಲ ಅಂತಾ ಹೇಳಿದ್ದಾರೆ ಎಂದರು. ಗ್ಯಾರಂಟಿ ಯೋಜನೆ ವಿರೋಧ ಮಾಡುವ ಬಿಜೆಪಿಯವರಿಗೆ ನಾನು ಹೇಳಿದ್ದೇನೆ, 'ನೀವೂ ಯೋಜನೆ ಲಾಭ ತೆಗೆದುಕೊಳ್ಳೋದನ್ನು ಬಿಡಿ ಅಂದಿದ್ದೇನೆ. ಆದ್ರೆ ಅವರು ಯೋಜನೆ ಲಾಭ ಪಡೆಯುವುದು ಬಿಡ್ತಾರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 'ಖರ್ಗೆ ಹಾಲು ಕುಡಿದಷ್ಟು, ನಾನು ನೀರು ಕುಡಿದಿಲ್ಲ' ಟಿಎ ಶರವಣ ಮಾತಿಗೆ ಪರಿಷತ್‌ನಲ್ಲಿ ಪ್ರಿಯಾಂಕ್ ಕೆಂಡಾಮಂಡಲ!
ಮಹಿಳೆಯರು ಹಬ್ಬದಂತೆ ಸಂಭ್ರಮಿಸಬೇಕು:
ನಮ್ಮ ಸರ್ಕಾರದ ಕಾರ್ಯಕ್ರಮಕ್ಕೆ ಎರಡು ವರ್ಷ ತುಂಬಿದೆ. ಇದು ಮಹಿಳೆಯರು ಸಂಭ್ರಮಿಸಬೇಕು ರಾಜ್ಯದ ಮನೆಮನೆಗಳ ಮುಂದೆ ರಂಗೋಲಿ ಸ್ಪರ್ಧೆ ಮಾಡಿಸಿ ಹಬ್ಬದ ರೀತಿ ಆಚರಿಸಬೇಕು ಯಾರು ಎಷ್ಟು ಬೇಕಾದ್ರೂ ಕಿರುಚಿಕೊಳ್ಳಲಿ ನೀವು ಹಬ್ಬದ ರೀತಿ ಸಂಭ್ರಮಿಸಿ ಎಂದು ಕರೆ ನೀಡಿದರು. ಅತಿ ಹೆಚ್ಚು ಮಹಿಳಾ ಸದಸ್ಯತ್ವ ಮಾಡಿಸುವವರಿಗೆ ಕಮೀಟಿಗೆ ನೇಮಕ ಮಾಡಿಸುವೆ. ಪಕ್ಷ ಅಧಿಕಾರದಲ್ಲಿದ್ರೆ ಮಾತ್ರ ನಮಗೆ ಕುರ್ಚಿ, ವ್ಯಕ್ತಿ ಪೂಜೆ ಬಿಡಿ ಪಕ್ಷ ಪೂಜೆ ಮಾಡಿ ಎಂದರು. ಶ್ರಮ ಹಾಕಿ ಕೆಲಸ ಮಾಡಬೇಕು ಫಲ ದೇವರು ಕೊಡ್ತಾನೆ ಎಂದರು.
ಡಿಕೆಶಿ ಮಾತಿಗೆ ನಗೆಗಡಲಲ್ಲಿ ತೇಲಿದ ಸಭೆ
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಷಣದ ವೇಳೆ ವೇದಿಕೆಯಲ್ಲಿ ಸೀಟುಗಳು ಖಾಲಿ ಇದ್ದರೂ ಮುಂಭಾಗದಲ್ಲಿ ಮಹಿಳೆಯರಿಗೆ, 'ನಡೀರಮ್ಮ ಬೇಗ ಕೂತ್ಕೊಳ್ಳಿ. ನಾವು ಸೀಟು ಸೀಟು ಅಂತಿದ್ದೀವಿ. ನೀವು ನೋಡಿದ್ರೆ ಸೀಟು ಸಿಕ್ಕರೂ ಕೂರೋಲ್ಲ' ಎಂದರು. ಡಿಕೆಶಿ ಮಾತು ಕೇಳಿ ಒಂದು ಕ್ಷಣ ಸಭೆ ನಗೆಗಡಲಲ್ಲಿ ತೇಲಿತು. ಬಳಿಕ, 'ಏಯ್ ಪೊಲೀಸ್ ಅಲ್ಲಿ ನಿಂತಿರೋರನ್ನೆಲ್ಲ ಒಳಗೆ ಕಳಿಸಿ' ಎಂದು ಸೂಚನೆ ನೀಡಿದರು.