The battle against Hindi imposition ಡಿಕೆ ಶಿವಕುಮಾರ್ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಹಿಂದಿ ಹೇರಿಕೆ ವಿಚಾರದಲ್ಲಿ ಹೈಕಮಾಂಡ್ ಕೇಳಿ ತೀರ್ಮಾನ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಬಳ್ಳಾರಿ (ಮಾ.14): 'ಏಯ್ ಡಿಕೆ ಶಿವಕುಮಾರಾ.. ಹಿಂದಿ ಹೇರಿಕೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಪರಿಹಾರ ಹೇಳ್ತಾರಾ? ಅವ್ರೆಲ್ಲ ಉತ್ತರ ಭಾರತದವರೇ ಅಷ್ಟು ತಿಳಿಯೋಲ್ವ? ಎಂದು ಡಿಸಿಎಂ ಡಿಕೆ ಶಿವಕುಮಾರ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಹಿಂದಿ ಹೇರಿಕೆ ವಿರುದ್ಧ ದಕ್ಷಿಣದ ರಾಜ್ಯಗಳ ಎಲ್ಲ ಸಿಎಂಗಳನ್ನು ಒಗ್ಗೂಡಿಸಿ ವಿರೋಧ ವ್ಯಕ್ತಪಡಿಸಿಲು ತಮಿಳುನಾಡು ಮುಖ್ಯಮಂತ್ರಿ ಕರೆ ನೀಡಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, 'ಬೆಂಬಲ ಕೊಡಬೇಕೋ ಬೇಡ್ವೋ ಎಂದು ನಮ್ಮ ಹೈಕಮಾಂಡ್ ಕೇಳಿ ಹೇಳ್ತೇನೆ ಎಂದಿದ್ದಾರೆ. ಅಲ್ಲ ಸ್ವಾಮಿ ನಾಡು ನುಡಿ ಭಾಷೆ ವಿಚಾರದಲ್ಲೂ ಹೈಕಮಾಂಡ್ ಕೇಳಿಕೊಂಡು ತೀರ್ಮಾನ ಮಾಡೋಕೆ ಆಗುತ್ತಾ? ಎಂದು ಕಿಡಿಕಾರಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಹೈಕಮಾಂಡ್ ಯಾರು? ಉತ್ತರದವರೇ ತಾನೇ?

ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ರಾಜ್ಯಗಳು ಒಂದಾಗಲು ಹೈಕಮಾಂಡ್ ಕೇಳಿ ತೀರ್ಮಾನ ಮಾಡಬೇಕಾ? ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರು ಬಿಜೆಪಿ ಪಕ್ಷದ ಹೈಕಮಾಂಡ್ ಯಾರು? ಎಲ್ಲ ಉತ್ತರ ಭಾರತದವರು ಆಗಿರೋವಾಗ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಏಯ್ ಶಿವಕುಮಾರ ಹಿಂದಿ ಹೇರಿಕೆ ವಿರುದ್ಧ ಹೋರಾಟಕ್ಕೆ ಹೈಕಮಾಂಡ್ ಕೇಳಿ ಹೇಳ್ತೇನೆ ಅಂತೀಯಲ್ಲ ಏನು ಹೇಳಬೇಕು ನಿಂಗೆ. ಅವರಲ್ಲಿ ಪರಿಹಾರ ಸಿಗಬಹುದು, ಸಿಗದೇ ಇರಬಹುದು. ನಮಗೆ ನಿಮ್ಮಂಥ ಬಾಲಂಗೋಚಿ ರಾಜಕಾರಣ ಬೇಕಾಗಿಲ್ಲ. ಕನ್ನಡ ನಾಡು ನುಡಿ ರಕ್ಷಣೆ ಯಾವ ಹೈಕಮಾಂಡ್ ಸಲಹೆ ಪಡೆಯದೇ ನಿರ್ಧಾರ ತೆಗೆದುಕೊಳ್ಳಬಲ್ಲ 'ಕನ್ನಡ, ನೆಲ, ಜಲ ಮೊದಲು' ಎನ್ನುವ ನಾಯಕರು ಬೇಕು ಎಂದು ಡಿಸಿಎಂ ವಿರುದ್ಧ ಕಿಡಿಕಾರಿದರು.