ಬೆಂಗಳೂರು(ಏ.12): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿದ್ದು, ಶನಿವಾರ 8 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು 215 ಮಂದಿಗೆ ಸೋಂಕು ತಗುಲಿದಂತಾಗಿದ್ದು, ಶನಿವಾರ ಸೋಂಕು ವರದಿಯಾದ 8 ಮಂದಿ ಪೈಕಿ ಬೆಂಗಳೂರಿನ ಶಿಫಾ ಆಸ್ಪತ್ರೆಯ 32 ವರ್ಷದ ವೈದ್ಯರೊಬ್ಬರಿಗೆ ಸೋಂಕು ಖಚಿತಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕೊರೋನಾ ಚಿಕಿತ್ಸೆ ಸೌಲಭ್ಯ ಹೊಂದಿದ್ದ ಶಿಫಾ ಖಾಸಗಿ ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ. ಇತ್ತೀಚೆಗೆ ತೀವ್ರ ಉಸಿರಾಟ ಸಮಸ್ಯೆಯೊಂದಿಗೆ (ಎಸ್‌ಎಆರ್‌ಐ) ವ್ಯಕ್ತಿಯೊಬ್ಬರು (196ನೇ ರೋಗಿ) ಈ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಖಚಿತಪಟ್ಟಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಲಾಕ್‌ಡೌನ್‌ ನಡುವೆ ಪಾಸ್‌ಗಾಗಿ 44 ಲಕ್ಷ ಜನ ಅರ್ಜಿ!

ಬಳಿಕ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ಶುಶ್ರೂಷಕರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಇದೀಗ 32 ವರ್ಷದ ವೈದ್ಯರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಶನಿವಾರದವರೆಗೆ ಒಟ್ಟು 215 ಮಂದಿಗೆ ಸೋಂಕು ದೃಢಪಟ್ಟಿದ್ದು, 39 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆರು ಮಂದಿ ಮೃತಪಟ್ಟಿದ್ದು, ನಾಲ್ಕು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೈಸೂರಿನಲ್ಲಿ ಮತ್ತೆ 5 ಪ್ರಕರಣ:

ಶನಿವಾರದ 8 ಪ್ರಕರಣಗಳ ಪೈಕಿ ಮೈಸೂರಿನಲ್ಲಿ 5 ಪ್ರಕರಣ ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2, ಬೀದರ್‌ನಿಂದ 1 ಪ್ರಕರಣ ವರದಿಯಾಗಿದೆ. ಮೈಸೂರಿನ ಪ್ರಕರಣಗಳ ಪೈಕಿ 5 ಪ್ರಕರಣಗಳೂ ನಂಜನಗೂಡು ಔಷಧ ಕಾರ್ಖಾನೆಯ ನಂಟಿನ ಪ್ರಕರಣಗಳೇ ಆಗಿದ್ದು, ಈ ಮೂಲಕ ನಂಜನಗೂಡು ಕ್ಲಸ್ಟರ್‌ನಿಂದ 36 ಮಂದಿಗೆ ಸೋಂಕು ಹಬ್ಬಿದಂತಾಗಿದೆ.

88ನೇ ಸೋಂಕಿತನ (ಔಷಧ ಕಂಪನಿ ಉದ್ಯೋಗಿ) ಸಂಪರ್ಕದಿಂದ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಬೀದರ್‌ನಲ್ಲಿ 122ನೇ ಸೋಂಕಿತನಿಂದ ಅವರ ಅಣ್ಣ ಪತ್ನಿಗೆ (50) ಸೋಂಕು ಹರಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 32 ವರ್ಷದ ವೈದ್ಯನ ಹೊರತುಪಡಿಸಿ 10 ವರ್ಷದ ಪುಟ್ಟಬಾಲಕನಿಗೆ ಅವರ ತಂದೆಯಿಂದ (92ನೇ ಸೋಂಕಿತ) ಸೋಂಕು ಹರಡಿದೆ ಎಂದು ತಿಳಿದುಬಂದಿದೆ.

ಸೋಂಕು ವೃದ್ಧಿಯಲ್ಲಿ ರಾಜ್ಯಕ್ಕೆ 19ನೇ ಸ್ಥಾನ:

ಕೊರೋನಾ ದೈನಂದಿನ ವಿವರ ನೀಡಲು ಸಚಿವ ಎಸ್‌. ಸುರೇಶ್‌ಕುಮಾರ್‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಸಿಜಿಆರ್‌ ವರದಿ ಪ್ರಕಾರ ಕೊರೋನಾ ಸೋಂಕು ವೃದ್ಧಿಯಾಗುತ್ತಿರುವುದರ ಸರಾಸರಿ ದರದಲ್ಲಿ ರಾಜ್ಯವು 19ನೇ ಸ್ಥಾನದಲ್ಲಿದೆ. ಕಳೆದ ಐದು ದಿನಗಳ ವರದಿಯಲ್ಲಿ ದೇಶದ ಸರಾಸರಿ ಸಿಜಿಆರ್‌ (ಕಾಂಪೌಂಡೆಡ್‌ ಗ್ರೋತ್‌ ರೇಟ್‌) ಶೇ.12.09 ರಷ್ಟಿದೆ. ರಾಜ್ಯದ ಸರಾಸರಿ ಶೇ.6.05 ರಷ್ಟುಮಾತ್ರ ಇದೆ. ಹೀಗಾಗಿ ದೇಶವು 19ನೇ ಸ್ಥಾನದಲ್ಲಿದ್ದು, ಒಟ್ಟು ವರದಿಯಾಗಿರುವ ಪ್ರಕರಣಗಳ ಪೈಕಿ 11ನೇ ಸ್ಥಾನದಲ್ಲಿದೆ’ ಎಂದು ಹೇಳಿದರು.

KSRTC​ಯಿಂದ ವಿನೂ​ತನ ಐಡಿಯಾ, ಗುಜರಿ ಬಸ್‌ಗ​ಳಿಗೆ ಹೊಸ ರೂಪ!

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ‘8,500ಕ್ಕೂ ಹೆಚ್ಚು ಮಂದಿ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೇಂದ್ರ ಸರ್ಕಾರದ ಸೂಚಿಸಿರುವ ಮಾರ್ಗಸೂಚಿಗಿಂತಲೂ ಹೆಚ್ಚಿನ ಮಂದಿಗೆ ನಾವು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ. ರಾಜ್ಯದಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಶೇ.100 ರಷ್ಟುಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇತ್ತೀಚೆಗೆ ನಡೆದ ಕಾರ್ಯಪಡೆ ಸಭೆಯಲ್ಲಿ ಎರಡನೇ ಹಂತದ ಸಂಪರ್ಕಿತರ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಬೇಕು’ ಎಂದು ನಿರ್ಧರಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳಿಗೆ ಯಾವುದೇ ಶಂಕಿತ ಸೋಂಕಿತರ ಬಗ್ಗೆ ಅನುಮಾನ ಬಂದರೆ ಅವರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ಹೇಳಿದರು.