Corona Update : ಹಾಸನ, ಮಂಡ್ಯ, ತುಮಕೂರಿನಲ್ಲಿ ಹೆಚ್ಚಿದ ಕರೋನಾ ಆತಂಕ!
ಕೊರಟಗೆರೆಯ ಒಂದೇ ಶಾಲೆಯಲ್ಲಿ 29 ಮಕ್ಕಳಿಗೆ ಕರೋನಾ
ಮಂಡ್ಯದಲ್ಲಿ ಪೊಲೀಸರ ಮೇಲೆ ಕರೋನಾ ದಾಳಿ
ಹಾಸನದ ಹಿಮ್ಸ್ ನಲ್ಲಿ ಕರೋನಾ ಅಘಾತ
ಬೆಂಗಳೂರು (ಜ. 8): ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಅಂದಾಜು ಒಂದೂವರೆ ಲಕ್ಷ ಕರೋನಾ ಹೊಸ ಪ್ರಕರಣ ಪತ್ತೆಯಾಗಿದ್ದರೆ, ರಾಜ್ಯದಲ್ಲಿ 8449 ಮಂದಿಯಲ್ಲಿ ಕರೋನಾ ಪಾಸಿಟಿವ್ (Covid Positive) ಕಾಣಿಸಿಕೊಂಡಿದ್ದು ನಾಲ್ವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ವಿವಿಧ ಜಿಲ್ಲೆಗಳಲ್ಲಿ ಕರೋನಾ ತನ್ನ ಆರ್ಭಟ ಮುಂದುವರಿಸಿದೆ. ಅದರಲ್ಲೂ ಹಾಸನ (Hasan), ಮಂಡ್ಯ(Mandya) ಹಾಗೂ ತುಮಕೂರಿನಲ್ಲಿ (Tumkur) ಕರೋನಾ (Corona ) ಆತಂಕ ಇನ್ನಷ್ಟು ಹೆಚ್ಚಾದ ಕುರಿತಾಗಿ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ 30,31,052 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 29,62,548 ಮಂದಿ ಚೇತರಿಸಿಕೊಂಡಿದ್ದಾರೆ. ಕೊರೋನಾದಿಂದ ಒಟ್ಟು 38,362 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 30,113 ಸಕ್ರಿಯ ಪ್ರಕರಣಗಳಿವೆ.
ನೈಟ್ ಕರ್ಫ್ಯೂ, ವೀಕೆಂಡ್ ಕರ್ಪ್ಯೂಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದ್ದರೂ, ದಿನೇ ದಿನೇ ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಶನಿವಾರ ತುಮಕೂರು ಜಿಲ್ಲೆಯ ಕೊರಟಗೆರೆಯ ಒಂದೇ ಶಾಲೆಯ 29 ಮಕ್ಕಳಲ್ಲಿ ಕರೋನಾ ಪಾಸಿಟಿವ್ ದೃಢವಾಗಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಇದೇ ಶಾಲೆಯ ಓರ್ವ ಶಿಕ್ಷಕ ಹಾಗೂ 22 ಮಕ್ಕಳಿಗೆ ಪಾಸಿಟಿವ್ ಆಗಿರುವ ಕುರಿತಾಗಿ ವರದಿ ಬಂದಿತ್ತು. ಅದರೊಂದಿಗೆ ಇಂದು ಓರ್ವ ನರ್ಸ್ ಸೇರಿ 9 ಮಕ್ಕಳಲ್ಲಿ ಕರೋನಾ ಪಾಸಿಟಿವ್ ಆಗಿರುವುದು ಬೆಳಕಿಗೆ ಬಂದಿದೆ.
ಕೊರಟಗೆರೆಯ (Koratagere) ಸರ್ಕಾರಿ ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲೂ ಸೋಂಕು ಪತ್ತೆಯಾಗಿದ್ದು, ಓರ್ವ ವಿದ್ಯಾರ್ಥಿನಿಯಿಂದ 31 ಮಕ್ಕಳಿಗೆ ಸೋಂಕು ತಗುಲಿದೆ. ಕಳೆದ ಕೆಲವು ದಿನಗಳಲ್ಲಿ ಕೆಮ್ಮು ಹಾಗೂ ಜ್ವರದ ಲಕ್ಷಣ ಹೊಂದಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಪಾಸಿಟಿವ್ ಆಗಿರುವುದು ತಿಳಿದುಬಂದಿದೆ. ಒಟ್ಟು ಈ ಶಾಲೆಯಲ್ಲಿ 582 ಮಕ್ಕಳಿದ್ದು, ಶಾಲೆಯಲ್ಲಿ 18 ಶಿಕ್ಷಕರು ಹಾಗೂ 6 ಜನ ಅಡುಗೆ ಸಹಾಯಕಿಯರಲಿದ್ದಾರೆ. ಈ ಎಲ್ಲಾ ಸೋಂಕಿತರನ್ನು ಜಿಲ್ಲಾ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್ ನಲ್ಲಿ ಇರಿಸಿದೆ. ಇದರ ನಡುವೆ ತಹಶೀಲ್ದಾರ್ ಜಹೀದಾ ಜಂಜಂ, ಶಾಲೆಗೆ ಒಂದು ವಾರ ರಜೆ ಘೋಷಣೆ ಮಾಡಿದ್ದಾರೆ.
ಮಂಡ್ಯ ಪೊಲೀಸರಿಗೆ (Mandya Police)ಬಿಡದ ಕರೋನಾ: ಕೋವಿಡ್ ಕಾರ್ಯನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಪೊಲೀಸರಿಗೆ ಮಂಡ್ಯದಲ್ಲಿ ಕರೋನಾ ತಗುಲಿದೆ. ವಾರ್ಷಿಕ ಕ್ರೀಡಾಕೂಟ ಹಾಗೂ ಯುವಜನೋತ್ಸವದ ಎಫೆಕ್ಟ್ ನಿಂದಾಗಿ ಮಂಡ್ಯದಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಎಲ್ಲಾ ಉನ್ನತ ಅಧಿಕಾರಿಗಳು ಹೋಂ ಕ್ವಾರಂಟೈನ್ ಗೆ ತೆರಳಿದ್ದಾರೆ. ಎಸ್ ಪಿ ಎನ್.ಸತೀಶ್, ಎಎಸ್ ಪಿ ಧನಂಜಯ್, ಮಂಡ್ಯ ಡಿವೈಎಸ್ ಪಿ ಮಂಜುನಾಥ್, ನಾಗಮಂಗಲ, ಮಳವಳ್ಳಿ ಡಿವೈಎಸ್ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ, ಬೆಳ್ಳೂರಿ ಪಿಎಸ್ಐ ಸೇರಿದಂತೆ ಹಲವು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಕೆಲವರು ಪರೀಕ್ಷೆ ಮಾಡಿಸಿ ಕ್ವಾರಂಟೈನ್ ಗೆ ತೆರಳಿದ್ದರೆ, ಇನ್ನೂ ಕೆಲವರು ಪರೀಕ್ಷೆ ನಡೆಸಲು ಹಿಂದೇಟು ಹಾಕಿದ್ದಾರೆ. ಇತ್ತೀಚೆಗೆ ಮಂಡ್ಯದ ಡಿಎಆರ್ ಆವರಣದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆದಿದ್ದರೆ, ಆ ಬಳಿಕ ಯುವಜನೋತ್ಸವದ ಭದ್ರತೆಯಲ್ಲಿದ್ದರು. ಪ್ರಸ್ತುತ ಮೈಸೂರು ಜಿಲ್ಲಾ ಎಎಸ್ ಪಿಗೆ ಮಂಡ್ಯದ ಆಡಳಿತದ ಹೊಣೆ ನೀಡಲಾಗಿದೆ.
Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, ಶೇ.4ರ ಮೇಲೇರಿದ ಪಾಸಿಟಿವಿಟಿ ದರ
ಹಿಮ್ಸ್ ನಲ್ಲಿ ಮನೆ ಮಾಡಿದ ಆತಂಕ: ಇನ್ನು ಹಾಸನ ಜಿಲ್ಲೆಯ ಹಿಮ್ಸ್ ನಲ್ಲಿ(Hassan Institute Of Medical Sciences) ಮೂವರು ಮೈದರು ಹಾಗೂ ಐದು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಕೋವಿಡ್ ಕಾಣಿಸಸಿಕೊಂಡಿದೆ. ಇವರೆಲ್ಲರೂ ಕೋವಿಡ್ ಕರ್ತವ್ಯದಲ್ಲಿ ಭಾಗಿಯಾಗಿದ್ದರು. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಒಟ್ಟಾರೆ ಶನಿವಾರ ಒಂದೇ ದಿನ ಕೋವಿಡ್ ಸೋಂಕಿನ ಪ್ರಮಾಣ 100ರ ಗಡಿ ದಾಟಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯ 350ರ ಗಡಿ ದಾಟಿದೆ.