*ಮೇಕೆದಾಟು ಪಾದಯಾತ್ರೆ 2.0ದಲ್ಲಿ 10 ಸಾವಿರ ಮಂದಿ ಭಾಗಿ*15 ಕಿ.ಮೀ. ಪೂರೈಸಿ ಬಿಡದಿ ತಲುಪಿದ ಕಾಲ್ನಡಿಗೆ*ಪಾದಯಾತ್ರಿಗಳಿಗೆ ಊಟಕ್ಕೆ ಮುದ್ದೆ, ಸಾಂಬರ್‌, ರೈಸ್‌ ಬಾತ್‌, ಬಜ್ಜಿ 

ರಾಮನಗರ (ಫೆ. 28): ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೈಗೆತ್ತಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಯ ಮೊದಲ ದಿನ ಜೆಡಿಎಸ್‌ ಭದ್ರಕೋಟೆ ರಾಮನಗರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯಿಂದ ಬೃಹತ್‌ ಪಾದಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ ಶಕ್ತಿ ಪ್ರದರ್ಶನ ನಡೆಸಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರೇಷ್ಮೆನಗರಿಯಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ್ದಾರೆ.

ಪೂರ್ಣಕುಂಭ ಸ್ವಾಗತದೊಂದಿಗೆ ಶುರುವಾದ ಪಾದಯಾತ್ರೆಯಲ್ಲಿ ರಾಮನಗರದಿಂದ ಬಿಡದಿವರೆಗಿನ 15 ಕಿ.ಮೀ. ಮಾರ್ಗದ ಉದ್ದಕ್ಕೂ ಜನಸಾಗರ ನೆರೆದಿದ್ದು, ಪರಿಣಾಮ ವಾರಾಂತ್ಯದ ರಜೆಗಾಗಿ ಊರುಗಳಿಗೆ ತೆರಳಿ ಮೈಸೂರು ರಸ್ತೆ ಮೂಲಕ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಜನರಿಗೆ ಸಂಚಾರದಟ್ಟಣೆ ಬಿಸಿ ಜೋರಾಗಿಯೇ ತಟ್ಟಿತು.

ಇದರ ನಡುವೆಯೂ ಹೆಜ್ಜೆ ಹೆಜ್ಜೆಗೂ ಆರತಿಗಳ ಸ್ವಾಗತ, ವಿವಿಧ ಕಲಾತಂಡಗಳ ಭವ್ಯ ಸಾಥ್‌, ಕಾರ್ಯಕರ್ತರ ಜೈಕಾರಗಳ ನಡುವೆ ನಾಯಕರು ಯಶಸ್ವಿಯಾಗಿ ಮೊದಲ ದಿನದ ಪಾದಯಾತ್ರೆ ಪೂರೈಸಿದರು. ಎರಡನೇ ಹಂತದ ಪಾದಯಾತ್ರೆಯ ಮೊದಲ ದಿನ ಚಾಮರಾಜನಗರ, ಮಂಡ್ಯ, ರಾಮನಗರ ಜಿಲ್ಲೆಯ 8ರಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಹೆಜ್ಜೆ ಹಾಕಿದರು.

ಇದನ್ನೂ ಓದಿ:Mekedatu Padayatre: ಕಾಂಗ್ರೆಸ್‌ ಮೇಕೆದಾಟು ನಡಿಗೆ 2ನೇ ಕಂತು ಅದ್ಧೂರಿ ಆರಂಭ

ದಣಿದರೂ ಗುರಿ ತಲುಪಿದರು: ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಸುರ್ಜೇವಾಲಾ ಹಾಗೂ ಡಿ.ಕೆ. ಶಿವಕುಮಾರ್‌ ಆರಂಭದಲ್ಲೇ ಸುಸ್ತಾದರು. ಈ ವೇಳೆ ವಿಶ್ರಾಂತಿಗೆ ವ್ಯವಸ್ಥೆ ಮಾಡಿದ್ದ ಸ್ಥಳದಲ್ಲಿ ವಿಶ್ರಾಂತಿ ಪಡೆದರು. ಇದೇ ವೇಳೆ ವಿವಿಧ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮವನ್ನೂ ನೆರವೇರಿಸಿದರು. 

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ನಡೆದು ಸುಸ್ತಾಗಿದ್ದರಿಂದ ವಿಶ್ರಾಂತಿ ಸ್ಥಳದಲ್ಲಿ ಕಾರ್ಯಕರ್ತರೇ ಕಾಲಿಗೆ ಮಸಾಜ್‌ ಮಾಡಿದರು. ನಿರಂತರವಾಗಿ ನಾಯಕರ ರಕ್ತದೊತ್ತಡ ಪರಿಶೀಲನೆ, ವೈದ್ಯರ ಆರೈಕೆಯೊಂದಿಗೆ ಅಂತಿಮವಾಗಿ ದಿನದ ಗುರಿ ತಲುಪಿದರು.

ರೈತರ ಬಾರು ಕೋಲು, ಸಿದ್ದು ತಾಳ: ಮಾಯಗಾನಹಳ್ಳಿ ಬಳಿ ರೈತರು ಬಾರು ಕೋಲು ಚಳವಳಿ ನಡೆಸಿದರು. ಪಟಾಪಟ್ಟಿಚಡ್ಡಿ ಧರಿಸಿ ಬಾರ್‌ ಕೋಲು ಹಿಡಿದು ರೈತರು ಘೋಷಣೆ ಕೂಗಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದರು. ಬಳಿಕ ಡೊಳ್ಳು ಶಬ್ದಕ್ಕೆ ತಕ್ಕಂತೆ ತಾವು ತಾಳ ಹಾಕಿ ಖುಷಿಪಟ್ಟರು. ಎರಡು ಬಿಂದಿಗೆಗಳಲ್ಲಿ ಕಾವೇರಿ ನೀರನ್ನು ತುಂಬಿಸಿಕೊಂಡು ಹೆಗಲ ಮೇಲೆ ಹೊತ್ತ ಸೈಯದ್‌ ಹುಸೇನ್‌ ಸಹ ಸಾಥ್‌ ನೀಡಿದರು.

ಇದನ್ನೂ ಓದಿ: Mekedatu Padayatra ಮೇಕೆದಾಟು ಮಹಾಕಾಳಗ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭಾಗಿ

ಹೆಜ್ಜೆ ಹೆಜ್ಜೆಗೂ ಅಚ್ಚುಕಟ್ಟು ವ್ಯವಸ್ಥೆ: ಪಾದಯಾತ್ರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹೆಜ್ಜೆ ಹೆಜ್ಜೆಗೂ ನೀರಿನ ಬಾಟಲ್‌, ಎಳನೀರು, ಮಜ್ಜಿಗೆ, ಐಸ್‌ ಕ್ರೀಂ, ಕಬ್ಬಿನ ಹಾಲು, ತರಹೇವಾರಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಪ್ರತಿ ಅರ್ಧ ಕಿ.ಮೀ.ಗೊಂದು ವಿಶ್ರಾಂತಿ ಸ್ಥಳ ವ್ಯವಸ್ಥೆ ಮಾಡಲಾಗಿತ್ತು. ಅಗತ್ಯವಿರುವವರು ವಿಶ್ರಾಂತಿ ಪಡೆದ ಬಳಿಕ ಮುಂದುವರೆಯಬಹುದಿತ್ತು. ಏಳು ಕಿ.ಮೀ. ಬಳಿಕ ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಿಡದಿ ತಲುಪಿದ ಬಳಿಕ ಸಾವಿರಾರು ಮಂದಿಗೆ ಊಟಕ್ಕೆ ಹಾಗೂ ವಾಸ್ತವ್ಯಕ್ಕೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಲಾಗಿತ್ತು.

ಮುದ್ದೆ, ಸಾಂಬರ್‌, ಬಜ್ಜಿ, ಜಾಮೂನ್‌, ಮಜ್ಜಿಗೆ, ಹಣ್ಣು: ವಿವಿ​ಐ​ಪಿ​ಗ​ಳಿಗೆ ರಾಸ್ತಾ ಹೋಟೆಲ್‌ನ ಆವ​ರ​ಣ​ದಲ್ಲಿ ಊಟ ಮತ್ತು ವಿಶ್ರಾಂತಿ ವ್ಯವಸ್ಥೆ ಆಗಿತ್ತು. ಹೋಟೆಲ್‌ನ ಎರಡೂ ಭಾಗ​ಗ​ಳಲ್ಲಿ ಕಾರ್ಯ​ಕ​ರ್ತರು ಮತ್ತು ಸಾರ್ವ​ಜ​ನಿ​ಕ​ರಿಗೆ ಊಟದ ವ್ಯವ​ಸ್ಥೆ​ಯಾ​ಗಿತ್ತು. 

ಊಟಕ್ಕೆ ಮುದ್ದೆ, ಸಾಂಬರ್‌, ರೈಸ್‌ ಬಾತ್‌, ಬಜ್ಜಿ ಮತ್ತು ಜಾಮೂನ್‌ ಬಡಿ​ಸ​ಲಾ​ಯಿತು. ಸುಮಾರು 5 ಗಂಟೆ ವೇಳೆಗೆ ಪುನಃ ಹಜ್ಜೆ ಹಾಕಲು ಆರಂಭಿ​ಸಿದ ನಾಯ​ಕರು 6 ಕಿ.ಮೀ. ದೂರದ ಬಿಡದಿಗೆ ರಾತ್ರಿ 8 ಗಂಟೆ ವೇಳೆಗೆ ತಲು​ಪಿದರು. ಸಂಜೆ ಬಿಸಿ​ಲಿನ ತಾಪ ಇಳಿ​ದಿ​ದ್ದ​ರಿಂದ ಪಾದ​ಯಾ​ತ್ರಿ​ಗಳ ನಡಿಗೆ ವೇಗ ಪಡೆ​ದು​ಕೊಂಡಿತ್ತು.

ಮಧ್ಯಾಹ್ನ ಪಾದಯಾತ್ರೆ ವೇಳೆ ಬಿಸಿ​ಲಿನ ಝಳ​ದಿಂದ ಕೆಲ​ವರು ಹೈರಾ​ಣಾಗಿ ಹೋದರು. ದಾರಿ​ಯು​ದ್ದಕ್ಕೂ ಕುಡಿ​ಯುವ ನೀರು, ಮಜ್ಜಿಗೆ, ಹಣ್ಣು-ಹಂಪ​ಲಿನ ವ್ಯವಸ್ಥೆ ಇತ್ತು. ವಿಶ್ರಾಂತಿಗೆ ತಾಣ​ಗ​ಳನ್ನು ಮಾಡ​ಲಾ​ಗಿತ್ತು. ಕಾಂಗ್ರೆಸ್‌ ನಾಯ​ಕರು ಸೇರಿ​ ಪಾದ​ಯಾ​ತ್ರಿ​ಗಳು ಅಲ್ಲಲ್ಲಿ ವಿರ​ಮಿ​ಸು​ತ್ತಲೇ ಊಟದ ಸ್ಥಳ ತಲು​ಪಿ​ದರು.