*ಕೋವಿಡ್‌ನಿಂದ ಮೊಟಕಾಗಿದ್ದ ಪಾದಯಾತ್ರೆ ರಾಮನಗರದಲ್ಲೇ ಪುನಾರಂಭ*ಸುರ್ಜೇವಾಲಾ ಚಾಲನೆ: ಮೊದಲ ದಿನವೇ 15 ಕಿ.ಮೀ. ನಡೆದ ನಾಯಕರು*ಬೆಂಗಳೂರಿಗೆ 5 ದಿನ 80 ಕಿಮೀ ನಡಿಗೆ

ರಾಮನಗರ (ಫೆ. 28): ರಾಜ್ಯದ ಎರಡೂವರೆ ಕೋಟಿ ಜನರಿಗೆ ಕುಡಿಯುವ ನೀರೊದಗಿಸುವ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಭಾನುವಾರ ರಾಮನಗರದಲ್ಲಿ ಅದ್ಧೂರಿ ಚಾಲನೆ ದೊರೆಯಿತು.ಕಳೆದ ಜ.9ರಂದು ಮೇಕೆದಾಟು ಸಂಗಮದಿಂದ ಶುರುವಾಗಿದ್ದ ಪಾದಯಾತ್ರೆ ಹೈಕೋರ್ಟ್‌ ಮಧ್ಯಪ್ರವೇಶದಿಂದ ಜ.12ಕ್ಕೆ ರಾಮನಗರದಲ್ಲಿ ಅರ್ಧಕ್ಕೇ ಮೊಟಕುಗೊಂಡಿತ್ತು. ಅಂದು ಕಾಂಗ್ರೆಸ್‌ ನಾಯಕರು ಮಾಡಿದ್ದ ಘೋಷಣೆಯಂತೆ ಭಾನುವಾರ ಬೆಳಗ್ಗೆ ಪಾದಯಾತ್ರೆ ನಿಂತಿದ್ದ ಸ್ಥಳದಿಂದಲೇ ಪುನಾರಂಭಗೊಂಡಿದ್ದು, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ ಮೂಲಕ 79.8 ಕಿ.ಮೀ. ಉದ್ದದ ಐದು ದಿನಗಳ ಪಾದಯಾತ್ರೆಗೆ ಚಾಲನೆ ನೀಡಿದರು.

ಕೊರೋನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದ್ದಲ್ಲದೆ ಜಿಲ್ಲಾಧಿಕಾರಿಗಳು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಅನುಮತಿ ನೀಡದಿದ್ದರೆ 10-11 ಮಂದಿಯೇ ನಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹೈಡ್ರಾಮಾ ನಿರೀಕ್ಷಿಸಿತ್ತಾದರೂ ಯಾವುದೇ ಗೊಂದಲಗಳಿಲ್ಲದೆ ಸಾಂಗವಾಗಿ ಮೇಕೆದಾಟು ಪಾದಯಾತ್ರೆ 2.0 ಶುರುವಾಗಿದ್ದು, ಭಾರೀ ಜನಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ: Mekedatu Padayatra ಮೇಕೆದಾಟು ಮಹಾಕಾಳಗ, ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಭಾಗಿ

ಭಾನುವಾರ ಬೆಳಗ್ಗೆ ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಹಾಗೂ ಪೀರನ್‌ ಷಾ ವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಡಿ.ಕೆ.ಶಿವಕುಮಾರ್‌ ವೇದಿಕೆಗೆ ಆಗಮಿಸಿದರು. ಈ ವೇಳೆಗೆ ಸಿದ್ದರಾಮಯ್ಯ, ಸುರ್ಜೇವಾಲಾ ಸೇರಿ ಎಲ್ಲಾ ನಾಯಕರೂ ಜತೆಯಾದರು. ವಂದೆಮಾತರಂ, ನಾಡಗೀತೆ, ರೈತಗೀತೆ ಹಾಗೂ ಪಾದಯಾತ್ರೆ ಉದ್ಘಾಟನಾ ಗೀತೆ ಗಾಯನದ ನಂತರ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನಿ ಸ್ವಾಮೀಜಿ ತೆಂಗಿನ ಗಿಡಕ್ಕೆ ಕಾವೇರಿ ನೀರೆರದು ಪಾದಯಾತ್ರೆ ಯಶಸ್ಸಿಗೆ ಹಾರೈಸಿದರು. ಬಳಿಕ ರಣದೀಪ್‌ಸಿಂಗ್‌ ಸುರ್ಜೇವಾಲಾ ಪಾದಯಾತ್ರೆಗೆ ಚಾಲನೆ ನೀಡಿದರು. ಇದೇ ವೇಳೆ ಸಿದ್ದರಾಮಯ್ಯ ವಿರಚಿತ ‘ಮೇಕೆದಾಟು ಯೋಜನೆ ತಪ್ಪಿಸಲಿದೆ ರೋದನೆ’ ಹೆಸರಿನ ಕೈಪಿಡಿಯನ್ನು ಸುರ್ಜೆವಾಲಾ ಅವರು ಬಿಡುಗಡೆ ಮಾಡಿದರು.

10.45 ಗಂಟೆಗೆ ಶುರುವಾಗಿದ್ದ ಉದ್ಘಾಟನಾ ಕಾರ್ಯಕ್ರಮ 12 ಗಂಟೆಗೆ ಮುಗಿದಿದ್ದರಿಂದ ಉರಿ ಬಿಸಿಲಿನಲ್ಲಿ ಪಾದಯಾತ್ರೆ ಶುರುವಾಯಿತು. ಬಿಸಿಲಲ್ಲಿ ನಡೆದು ಬಸವಳಿದ ನಾಯಕರು ಮಾರ್ಗ ಮಧ್ಯೆಯೇ ಬಳಲಿದರು. ಸುಸ್ತಾಗಿದ್ದರೂ ಅಲ್ಲಲ್ಲಿ ವಿಶ್ರಾಂತಿ ಪಡೆದು ವೈದ್ಯರ ಉಪಚಾರದಲ್ಲಿ ಮೊದಲ ದಿನದ ಪಾದಯಾತ್ರೆಯ ಗಮ್ಯವಾದ ಬಿಡದಿ ಪಟ್ಟಣ ತಲುಪಿದರು.

ಮೊದಲ ದಿನ 15 ಕಿ.ಮೀ: ಈ ವೇಳೆ ‘ನಮ್ಮ ನೀರು ನಮ್ಮ ಹಕ್ಕು’, ‘ನಮ್ಮ ಹಕ್ಕಿಗಾಗಿ ಕಟ್ಟಲೇಬೇಕು ಅಣೆಕಟ್ಟು’ ಎಂಬ ಉತ್ಸಾಹ ತುಂಬುವ ಮೇಕೆದಾಟು ಧ್ಯೇಯಗೀತೆಗಳೊಂದಿಗೆ ಮೊದಲ ದಿನ ಯಶಸ್ವಿಯಾಗಿ ಹದಿನೈದು ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಲಾಯಿತು.

ನಟ ಪ್ರೇಮ್‌ ಭಾಗಿ:‘ನೆನಪಿರಲಿ’ ಖ್ಯಾತಿಯ ನಟ ಪ್ರೇಮ್‌, ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಸಾಧು ಕೋಕಿಲ ಸೇರಿ ಸಿನಿಮಾ ರಂಗದವರು ಸಹ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಪ್ರೇಮ್‌, ನಾನು ಚಲನಚಿತ್ರ ನಟನಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿಲ್ಲ. ಒಬ್ಬ ಕನ್ನಡಿಗನಾಗಿ ಕುಡಿಯುವ ನೀರಿಗಾಗಿ ಹೆಜ್ಜೆ ಹಾಕುತ್ತಿದ್ದೇನೆ ಎಂದರು.

ಇದನ್ನೂ ಓದಿMekedatu Padayatre: ರಾಮನಗರದಿಂದ ಹೊರಟ ಪಾದಯಾತ್ರೆ, 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ, ಧ್ರುವನಾರಾಯಣ, ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ , ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಸೇರಿದಂತೆ ಬಹುತೇಕ ನಾಯಕರು ಹಾಜರಿದ್ದರು.

ಸೆಲ್ಫಿಗೆ ಬಂದರೆ ಎಳೆದು ಹಾಕಿ: ಡಿಕೆಶಿ:  ಪಾದಯಾತ್ರೆಯಲ್ಲಿ ಯಾರೂ ಸಹ ನಾಯಕರಿಗೆ ತೊಂದರೆ ಕೊಡಬಾರದು. ಕೊರೋನಾ ಮಾರ್ಗಸೂಚಿ ಪಾಲಿಸಿಯೇ ಪಾದಯಾತ್ರೆಯಲ್ಲಿ ಭಾಗವಹಿಸಬೇಕು. ಸೆಲ್ಫಿಗಾಗಿ ಮುಗಿಬಿದ್ದು ಯಾರಾದರೂ ತಳ್ಳಾಡಿದರೆ ಎಳೆದು ಹಾಕಿ ಎಂದು ಹೇಳಿದ್ದೇನೆ. ಹೀಗಾಗಿ ಯಾರೂ ಫೋಟೋಗಾಗಿ ನಮ್ಮ ಮುಂದೆ ಬರಬೇಡಿ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಪ್ರತಿ ಹನಿ ಮೇಲೂ ಸ್ಥಳೀಯರಿಗೆ ಹಕ್ಕು: ಕಾವೇರಿಯ ಪ್ರತಿ ಹನಿಯ ಮೇಲೂ ಸ್ಥಳೀಯರ ಹಕ್ಕಿದೆ. ಬಿಜೆಪಿ ಸರ್ಕಾರವು ಈ ಹೋರಾಟ ತಡೆಯಲು ಸಾಧ್ಯವಿಲ್ಲ. ಎಲ್ಲಾ ವರ್ಗದವರೂ ಹೋರಾಟಕ್ಕೆ ಕೈಜೋಡಿಸಿದರೆ ಕಾವೇರಿ ತಾಯಿಯೇ ನಮಗೆ ನ್ಯಾಯ ಒದಗಿಸುತ್ತಾಳೆ. - ರಣದೀಪ್‌ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ನಡಿಗೆ ನಂತರವೂ ಸತತ ಹೋರಾಟ: ಎರಡೂವರೆ ವರ್ಷವಾದರೂ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ದೊರಕಿಸಿಕೊಡದೆ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಎಸಗಿದೆ. ಪಾದಯಾತ್ರೆ ಬಳಿಕವೂ ಹೋರಾಟ ಮುಂದುವರೆಸುತ್ತೇವೆ. - ಸಿದ್ದರಾಮಯ್ಯ, ವಿಪಕ್ಷ ನಾಯಕ

ಬೆಂಗಳೂರಿನಲ್ಲಿ ಮಾ.3ಕ್ಕೆ ಪಾಂಚಜನ್ಯ: ಇದು ನಮ್ಮ ಹೋರಾಟ ಅಲ್ಲ. ರಾಜ್ಯದ ಜನರ ಹೋರಾಟ, ಬೆಂಗಳೂರು ಜನರ ಕುಡಿಯುವ ನೀರಿಗಾಗಿ ಹೋರಾಟ. ಅದಕ್ಕಾಗಿ ಐದು ದಿನ ಬಿಸಿಲಿದ್ದರೂ ಹೆಜ್ಜೆ ಹಾಕಲಿದ್ದೇವೆ. ಮಾ.3ಕ್ಕೆ ಬೆಂಗಳೂರಲ್ಲಿ ಪಾಂಚಜನ್ಯ ಮೊಳಗಿಸುತ್ತೇವೆ.- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

-ಶ್ರೀಕಾಂತ್‌ ಎನ್‌.ಗೌಡಸಂದ್ರ, ಕನ್ನಡಪ್ರಭ ವಾರ್ತೆ