Asianet Suvarna News Asianet Suvarna News

ಬಿಜೆಪಿಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್ : ಅಲ್ಲಿಂದ ಇಲ್ಲಿಗೆ ಬರೋರ್ಯಾರು..?

ಆಪರೇಷನ್ ಕಮಲ ನಡೆಸಲು ಮುಂ ದಾಗಿರುವ ಬಿಜೆಪಿಯ ಸಂಖ್ಯಾಬಲವನ್ನು 100 ಗಡಿಯೊಳಗೆ ಇಳಿಸಲು ಸೋಮವಾರದಿಂದ ‘ರಿವರ್ಸ್ ಆಪರೇಷನ್’ ಆರಂಭಿಸಲು ಕಾಂಗ್ರೆಸ್ ನಾಯಕತ್ವ ತೀರ್ಮಾನಿಸಿದೆ. 

Karnataka Congress Reserve Operation Against BJP
Author
Bengaluru, First Published Jan 20, 2019, 8:14 AM IST

ಬೆಂಗಳೂರು :  ವಿಧಾನಸೌಧದಲ್ಲಿ ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಇಬ್ಬರು ಅತೃಪ್ತ ಶಾಸಕರಿಗೆ ಪಕ್ಷ ವಿರೋಧಿ ನಡವಳಿಕೆ ತೋರಿದ ಹಿನ್ನೆಲೆಯಲ್ಲಿ ಅನರ್ಹಗೊಳಿಸಲು ಏಕೆ ಕ್ರಮ ಕೈಗೊಳ್ಳಬಾರದು ಎಂದು ಕಾರಣ ಕೇಳಿ ಕಾಂಗ್ರೆಸ್ ಪಕ್ಷ ನೋಟಿಸ್ ನೀಡಿದೆ. ಅಲ್ಲದೆ, ಆಪರೇಷನ್ ಕಮಲ ನಡೆಸಲು ಮುಂ ದಾಗಿರುವ ಬಿಜೆಪಿಯ ಸಂಖ್ಯಾಬಲವನ್ನು 100 ಗಡಿಯೊಳಗೆ ಇಳಿಸಲು ಸೋಮವಾರದಿಂದ ‘ರಿವರ್ಸ್ ಆಪರೇಷನ್’ ಆರಂಭಿಸಲು ನಾಯಕತ್ವ ತೀರ್ಮಾನಿಸಿದೆ. ಜತೆಗೆ, ಲೋಕಸಭೆ ಚುನಾವಣೆ ಮೈತ್ರಿ ಹಾಗೂ ಇತರೆ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಭಾನುವಾರ ಬೆಳಗ್ಗೆ 11 ರಿಂದ ಕಾಂಗ್ರೆಸ್ ಶಾಸಕರು ನೇರಾ ನೇರ ಮಾತುಕತೆ ನಡೆಸಲಿದ್ದಾರೆ.

ಇದಾಗುತ್ತಿದ್ದಂತೆಯೇ, ಅಂದರೆ, ಭಾನುವಾರ ಸಂಜೆಯ ವೇಳೆಗೆ ಕಾಂಗ್ರೆಸ್ ಶಾಸಕರ ಈಗಲ್ಟನ್ ರೆಸಾರ್ಟ್ ವಾಸಕ್ಕೆ ಮುಕ್ತಾಯ ಹೇಳಲು ನಿರ್ಧರಿಸಲಾಗಿದೆ. ಈಗಲ್ಟನ್ ರೆಸಾರ್ಟ್‌ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ವೇಳೆ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಈ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಶನಿವಾರ ರಾತ್ರಿಯ ವೇಳೆಗೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಯಿತು. ಈ ಶಾಸಕರಿಗೆ ನೀಡಲಾಗಿರುವ ನೋಟಿಸ್‌ನಲ್ಲಿ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶೇಷ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಈ ಸಭೆಗೆ ಗೈರು ಹಾಜರಾ ದರೆ ಸಂವಿಧಾನದ 10ನೇ ಶೆಡ್ಯೂಲ್ (ಪಕ್ಷಾಂತರ ನಿಷೇಧ ಕಾಯ್ದೆ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿತ್ತು. 

ಜತೆಗೆ, ಇತ್ತೀಚೆಗೆ ಮಾಧ್ಯಮಗಳಲ್ಲಿ ನೀವು ಬಿಜೆಪಿ ನಾಯಕರ ಸಂಪರ್ಕದಲ್ಲಿರುವ ಬಗ್ಗೆ, ದೆಹಲಿ, ಮುಂಬೈನಲ್ಲಿ ಹೋಟೆಲ್‌ಗಳಲ್ಲಿ ತಂಗಿರುವ ಬಗ್ಗೆ ಹಾಗೂ ಬಿಜೆಪಿಯನ್ನು ಸೇರುವ ಬಗ್ಗೆ ಸತತವಾಗಿ ವರದಿಯಾಗುತ್ತಿದ್ದರೂ, ಈ ಬಗ್ಗೆ ನೀವು ಸ್ಪಷ್ಟೀಕರಣ ನೀಡಿಲ್ಲ ಅಥವಾ ನಿರಾಕರಿಸಿಲ್ಲ. ಕೆಲ ಮಾಧ್ಯಮಗಳಲ್ಲಿ ನೀವು ಬಿಜೆಪಿ ಸೇರುವುದಾಗಿ ಹೇಳಿಕೆ ನೀಡಿದ ಬಗ್ಗೆ ವರದಿ ಯಾಗಿದ್ದರೂ ಅದನ್ನು ನೀವು ನಿರಾಕರಿಸಿಲ್ಲ. ಹೀಗಾಗಿ ನೀವು ಸ್ವಲಾಭಕ್ಕಾಗಿ ಸ್ವ ಇಚ್ಛೆಯಿಂದ ಪಕ್ಷ ತೊರೆಯಲು ಮುಂದಾಗಿದ್ದೀರಿ. 

ಹೀಗಾಗಿ ನಿಮ್ಮ ವಿಧಾನಸಭೆ ಸದಸ್ಯತ್ವ ರದ್ದುಪಡಿಸಲುಏಕೆ ಕ್ರಮ ಕೈಗೊಳ್ಳಬಾರದು ಎಂದು ಕೇಳಲಾಗಿದೆ. ಅತೃಪ್ತರ ಮೇಲೆ ಈಗಲೇ ಕ್ರಮವಿಲ್ಲ: ಶನಿ ವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತೃಪ್ತರಿಗೆ ನೋಟಿಸ್ ನೀಡುವ ಕುರಿತು ವಿವರವಾಗಿ ಚರ್ಚೆಯಾಗಿದ್ದು, ಆರಂಭದಲ್ಲಿ ಶಾಸಕರಿಗೆ ನೋಟಿಸ್ ನೀಡುವುದು. ಇದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಏನು ಸಮಜಾಯಿಷಿ ನೀಡುತ್ತಾರೆ ಎಂಬುದನ್ನು ಪರಿಶೀಲಿಸಿ ಅನಂತರ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. 

ಮೂಲಗಳ ಪ್ರಕಾರ, ನೋಟಿಸ್ ನೀಡಿ ದರೂ ಏಕಾಏಕಿ ಕ್ರಮ ಕೈಗೊಳ್ಳಲು ಕಾಂಗ್ರೆಸ್ ನಾಯಕತ್ವ ಮುಂದಾಗುವುದಿಲ್ಲ. ಬದಲಾಗಿ, ಈ ಅತೃಪ್ತರನ್ನು ಸಂಪರ್ಕಿಸಿ ಅವರನ್ನು ಮತ್ತೆ ಪಕ್ಷದ ತೆಕ್ಕೆಗೆ ತರಲು ತೀವ್ರ ಪ್ರಯತ್ನ ನಡೆಸಲು ತೀರ್ಮಾನಿಸಲಾಗಿದೆ. ಈ ಶಾಸಕರನ್ನು ಮನವೊಲಿಸುವ ಜವಾಬ್ದಾರಿಯನ್ನು ಸಹ ನಿರ್ದಿಷ್ಟ ನಾಯಕರಿಗೆ ವಹಿಸಲಾಗಿದೆ. ಈ ಎಲ್ಲಾ ಪ್ರಯತ್ನಗಳ ನಂತರವೂ ಅವರು ತಮ್ಮ ನಿಲುವಿನಿಂದ ಹಿಂದೆ ಸರಿಯದ ಪಕ್ಷದಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಕುರಿತು ಮುಂದಿನ ಕ್ರಮವಾಗಿ ವಿಧಾನಸಭೆಯ ಸ್ಪೀಕರ್‌ಗೆ ದೂರು ನೀಡಿ ಈ ನಾಲ್ಕು ಶಾಸಕರ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಲಾಗುತ್ತದೆ. 

ಬಿಜೆಪಿಯ ಯಾರಿಗೆ ಕಾಂಗ್ರೆಸ್ ಗಾಳ: ಆಪರೇಷನ್ ಕಮಲ ನಡೆಸಿ ತನಗೆ ಬೇಕಾದಷ್ಟು ಶಾಸಕರನ್ನು ಸೆಳೆಯುವಲ್ಲಿ ವಿಫಲವಾದ ಹಿನ್ನೆಲೆ ಯಲ್ಲಿ ಸರ್ಕಾರವನ್ನು ಅಲ್ಪಮತಕ್ಕೆ ಬರುವಂತೆ ಮಾಡುವ ತನ್ನ ‘ಪ್ಲಾನ್ ಬಿ’ಯನ್ನು ಜಾರಿಗೊಳಿಸಲು ಬಿಜೆಪಿ ಮುಂದಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಹ ಮೈತ್ರಿ ಪಕ್ಷ ಜೆಡಿಎಸ್ ಜತೆ ಸೇರಿ ಬಿಜೆಪಿಯ ಸಂಖ್ಯಾಬಲವನ್ನು 100ರ ಗಡಿಯೊಳಗೆ ಸೀಮಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಬಿಜೆಪಿಯ ಕೆಲ ನಿರ್ದಿಷ್ಟ ಶಾಸಕರನ್ನು ಗುರಿಯಾಗಿಟ್ಟುಕೊಂಡು ಅವರನ್ನು ಒಂದೋ ಕಾಂಗ್ರೆಸ್‌ಗೆ ಅಥವಾ ಜೆಡಿಎಸ್‌ಗೆ ಸೆಳೆ ಯುವ ಮೂಲಕ ಹಾಲಿ 104 ಸಂಖ್ಯಾಬಲ ಹೊಂದಿರುವ ಬಿಜೆಪಿಯನ್ನು 100ರ ಗಡಿಯೊಳಗೆ ಸೀಮಿತಗೊಳಿಸುವ ಪ್ರಯತ್ನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. 

ಬಿಜೆಪಿಯ ಹೊಸದುರ್ಗದ ಗೂಳಿಹಟ್ಟಿ ಶೇಖರ್, ನಂಜನಗೂಡು ಶಾಸಕ (ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಅಳಿಯ) ಡಾ.ಹರ್ಷವರ್ಧನ್, ಚಾಮರಾಜ ಶಾಸಕ ನಾಗೇಂದ್ರ, ಸುರಪುರ ಶಾಸಕ ರಾಜೂಗೌಡ ರನ್ನು ಗುರಿಯಾಗಿಸಿ ರಿವರ್ಸ್ ಆಪರೇಷನ್ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಅಲ್ಲದೆ, ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರನ್ನು ಸೆಳೆಯಲು ಯತ್ನಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.

Follow Us:
Download App:
  • android
  • ios