DK Shivakumar Mallikarjun Kharge meeting :ಅನಾರೋಗ್ಯದ ಕಾರಣದಿಂದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿಲ್ಲ. ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು, ಖರ್ಗೆಯವರು ದೆಹಲಿಗೆ ತೆರಳುವ ಮುನ್ನ ಸೋಮವಾರ ಈ ಭೇಟಿ ನಡೆಯುವ ಸಾಧ್ಯತೆಯಿದೆ.
ಬೆಂಗಳೂರು (ನ.24): ಅನಾರೋಗ್ಯದ ಕಾರಣದಿಂದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರವೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ಸೋಮವಾರ ಖರ್ಗೆ ಅವರನ್ನು ಭೇಟಿ ಮಾಡಿ ಅಧಿಕಾರ ಹಂಚಿಕೆ ಕುರಿತು ತಮ್ಮ ನಿಲುವು ತಿಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇಂದು ಡಿಕೆ ಶಿವಕುಮಾರ ಮಲ್ಲಿಕಾರ್ಜುನ ಖರ್ಗೆ ಭೇಟಿ?
ಅದಿಕಾರ ಹಂಚಿಕೆ ತಿಕ್ಕಾಟದ ಬೆನ್ನಲ್ಲೇ ಶುಕ್ರವಾರ ಸಂಜೆ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ವಾಪಸಾಗಿದ್ದರು. ಅಂದೇ ರಾತ್ರಿ ಶಿವಕುಮಾರ್ ಅವರು ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ನಿರೀಕ್ಷೆ ಇತ್ತಾದರೂ ಭೇಟಿಯಾಗಿರಲಿಲ್ಲ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಮಾಡಿ ಚರ್ಚಿಸಿದ್ದರೂ ಶಿವಕುಮಾರ್ ಹೋಗಿರಲಿಲ್ಲ.
ಖರ್ಗೆ ಇಂದೇ ದೆಹಲಿಗೆ?
ಭಾನುವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಶಿವಕುಮಾರ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಖರ್ಗೆ ಅವರನ್ನು ಭೇಟಿ ಮಾಡಿಲ್ಲ. ಖರ್ಗೆ ಅವರು ಸೋಮವಾರ ದೆಹಲಿಗೆ ತೆರಳಲಿದ್ದು, ಇದಕ್ಕೂ ಮೊದಲು ಶಿವಕುಮಾರ್ ಅವರ ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


