ಬೆಂಗಳೂರು :  ಬರುವ ಮಾರ್ಚ್ 1ರಂದು ಕಲಬುರ್ಗಿಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಾವೇಶದಲ್ಲಿ ಹಾಲಿ ಶಾಸಕ ಡಾ.ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ.

ಈ ಬಗ್ಗೆ ಇದುವರೆಗೆ ಅಧಿಕೃತ ಮಾಹಿತಿ ಹೊರಬೀಳದಿದ್ದರೂ ಇಂಥದೊಂದು ಸುದ್ದಿ ಬಿಜೆಪಿ ಪಾಳೆಯದಲ್ಲಿ ಸುಳಿದಾಡುತ್ತಿದೆ. ಇದಕ್ಕೆ ಸಂಬಂಧಿ ಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ‘ಈವರೆಗೆ ಯಾರೂ ಸಂಪರ್ಕ ಮಾಡಿಲ್ಲ. ಆ ದಿನದವರೆಗೆ ಕಾದು ನೋಡೋಣ’ ಎಂದು ಮಾರ್ಮಿಕವಾಗಿ ಹೇಳಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.

ಚಿಂಚೋಳಿ ಕ್ಷೇತ್ರದ ಹಾಲಿ ಶಾಸಕರಾಗಿರುವ ಜಾಧವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ದಟ್ಟವಾಗಿ ಕೇಳಿಬರುತ್ತಿದೆ.