ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ಸಚಿವ ಸಂಪುಟ ನಿರ್ಧಾರ, ವಿವಾದ ಸೃಷ್ಟಿಸಿದ ಸರ್ಕಾರದ ನಡೆ!
ಹುಬ್ಭಳ್ಳಿ ಪೊಲೀಸ್ ಠಾಣೆ ಮೇಲೆ ನುಗ್ಗಿ ದಾಂಧಲೆ ನಡೆಸಿ ಭಾರಿ ಗಲಭೆ ಸೃಷ್ಟಿಸಿದ ಕೇಸ್ ವಾಪಸ್ ಪಡೆಯಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಡೆ ಇದೀಗ ಭಾರಿ ವಿವಾದ ಸೃಷ್ಟಿಸಿದೆ.
ಬೆಂಗಳೂರು(ಅ.11) ಮುಡಾ ಪ್ರಕರಣ, ವಾಲ್ಮೀಕಿ ಹಗರಣ ಸೇರಿದಂತೆ ಸಾಲು ಸಾಲು ಪ್ರಕರಣಗಳ ನಡುವೆ ಸಿಲುಕಿ ಒದ್ದಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತೆಗೆದುಕೊಂಡ ನಿರ್ಧಾರ ಭಾರಿ ವಿವಾದ ಸೃಷ್ಟಿಸಿದೆ. 2022ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಕೇಸ್ ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರದ ಸಂಪುಟ ನಿರ್ಧರಿಸಿದೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಭಯೋತ್ಪಾದಕರನ್ನು ರಕ್ಷಿಸುವ ಹಾಗೂ ಅಲ್ಪಸಂಖ್ಯಾತರನ್ನು ರಕ್ಷಿಸುವ ನಿರ್ಧಾರ ಎಂದು ಆಕ್ರೋಶ ಹೊರಹಾಕಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಡಾ.ಜಿ ಪರಮೇಶ್ವರ್ ಮನವಿಯಂತೆ ಸಚಿವ ಸಂಪುಟ ಹುಬ್ಬಳ್ಳಿ ಗಲಭೆ ಕೇಸ್ ಸೇರಿದಂತೆ ಒಟ್ಟು 43 ಕೇಸ್ ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಎಪ್ರಿಲ್ 16, 2022ರಲ್ಲಿ ಈ ಗಲಭೆ ನಡೆದಿತ್ತು. ಇಸ್ಲಾಂ ಧರ್ಮದ ಬಗ್ಗೆ ವ್ಯಾಟ್ಸ್ಆ್ಯಪ್‌ನಲ್ಲಿ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿದ್ದ ಹಿಂದೂ ಯುವಕನ ವಿರುದ್ಧ ಮುಸ್ಲಿಂ ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ದಾಳಿ ಮಾಡಿತ್ತು. ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸುವಂತೆ ಮುಸ್ಲಿಮ್ ಗುಂಪು ಪೊಲೀಸರ ಮುಂದೆ ಪಟ್ಟು ಹಿಡಿದಿತ್ತು. 155 ಕ್ಕೂ ಹೆಚ್ಚು ಮಂದಿ ಏಕಾಏಕಿ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿತ್ತು.
ಮುಡಾ ಕೇಸ್ ಬಳಿಕ ಗೌರ್ನರ್, ಸಿಎಂ ಸಿದ್ದರಾಮಯ್ಯ ಮುಖಾಮುಖಿ
ಕಲ್ಲು, ಬಡಿಗೆ, ಬೆಂಕಿ ಮೂಲಕ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಆಕ್ರೋಶಿತ ಗುಂಪು ದಾಳಿ ಮಾಡಿತ್ತು. ಈ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯವಾಗಿತ್ತು. 10 ಪೊಲೀಸ್ ವಾಹನಗಳು ಜಖಂಗೊಂಡಿತ್ತು. ಈ ಪೈಕಿ 155 ಮಂದಿ ವಿರುದ್ದ ಕೇಸ್ ದಾಖಲಾಗಿತ್ತು. ಇದೀಗ ಈ ಗಲಭೆ ಕೇಸ್ ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ.
ಕಾಂಗ್ರೆಸ್ ಸರ್ಕಾರದ ನಡೆದ ವಿರುದ್ದ ಬಿಜೆಪಿ ಗರಂ ಆಗಿದೆ. ಈ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಹುಬ್ಬಳ್ಳಿ ಗಲಭೆ ಕೇಸ್‌ನಲ್ಲಿ 155 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಗೆ ಸುಪ್ರೀಂ ಕೋರ್ಟ್ ಕೂಡ ಜಾಮೀನು ನಿರಾಕರಿಸಿದೆ. ಈ ಕೇಸ್ ದುರ್ಬಲಗೊಳಿಸಲು ಕಾಂಗ್ರೆಸ್ ಸರ್ಕಾರ ಎಲ್ಲಾ ಪ್ರಯತ್ನ ನಡೆಸಿತ್ತು. ಈ ಆರೋಪಿಗಳು ಅಮಾಯಕರು ಎಂದು ಕಾಂಗ್ರೆಸ್ ಸರ್ಟಿಫಿಕೇಟ್ ನೀಡಿತ್ತು. ಸರ್ಕಾರಿ ವಕೀಲರನ್ನು ಬದಲಿಸಿ ಎಲ್ಲರನ್ನೂ ಬಚಾವ್ ಮಾಡುವ ಪ್ರಯತ್ನ ಮಾಡಿದ ಕಾಂಗ್ರೆಸ್ ಸರ್ಕಾರ ಇದೀಗ ಕೇಸ್ ವಾಪಸ್ ಪಡೆದು ಅತೀ ದೊಡ್ಡ ತಪ್ಪು ಮಾಡಿದೆ ಎಂದು ಜೋಶಿ ಹೇಳಿದ್ದಾರೆ.
ಹರ್ಯಾಣ ಕಾಂಗ್ರೆಸ್ ಸೋಲಿಗೂ ಮುಡಾ ಕೇಸಿಗೂ ಸಂಬಂಧ?: ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ