‘ಕರ್ನಾಟಕ ಮಾದರಿ’ ಅಭಿವೃದ್ಧಿಗೆ 1 ವರ್ಷ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ನೆಲ, ಜಲ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾ, ಜಾಗತಿಕ ಭೂಪಟದಲ್ಲಿ ಸರ್ವಾಂಗೀಣ ಅಭಿವೃದ್ಧಿ, ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಗುರಿಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.

Karnataka congress government successfully running one years Karnataka model says siddaramaiah rav
ಕರ್ನಾಟಕದ ಏಳು ಕೋಟಿ ಜನರ ಆಶೀರ್ವಾದದೊಂದಿಗೆ ನಮ್ಮ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ರಾಜ್ಯದ 22ನೇ ಮುಖ್ಯಮಂತ್ರಿಯಾಗಿ 2023ರ ಮೇ 20ರಂದು ನಾನು ನನ್ನ ಸಚಿವ ಸಂಪುಟದೊಂದಿಗೆ ಅಧಿಕಾರ ಸ್ವೀಕರಿಸಿದ್ದೆ. ಲೋಕಸಭಾ ಚುನಾವಣಾ ಸಂಹಿತೆಯಿಂದಾಗಿ ಸಾರ್ವಜನಿಕ ಸಮಾರಂಭವನ್ನು ಆಯೋಜಿಸಿ ಜನತೆಗೆ ನಮ್ಮ ಸರ್ಕಾರ ಮತ್ತು ಪಕ್ಷದ ಪರವಾಗಿ ಧನ್ಯವಾದಗಳನ್ನು ತಿಳಿಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ಕ್ಷಮೆ ಇರಲಿ.

2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಸಂದೇಶ ಸರ್ಕಾರ ಬದಲಾವಣೆಯ ಆಶಯವನ್ನು ಮೀರಿದ್ದಾಗಿತ್ತು. ಅವರಿಗೆ 2013ರಿಂದ 2018ರ ವರೆಗಿನ ನಮ್ಮ ಸರ್ಕಾರದ ನೆನಪು ಕಾಡುತ್ತಿತ್ತು. ಅವರಿಗೆ ತಮ್ಮ ಬದುಕನ್ನು ಹಸನು ಮಾಡುವ, ತಮ್ಮ ಕಷ್ಟಗಳಿಗೆ ಹೆಗಲಾಗುವ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಸಮನಾಗಿ ಸಾಧಿಸುವಂತಹ ಸರ್ಕಾರ ಬೇಕಾಗಿತ್ತು. ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಅಭದ್ರತೆ ಅವರ ಬದುಕನ್ನು ಮೂರಾಬಟ್ಟೆ ಮಾಡಿದ್ದವು. ಅಭಿವೃದ್ಧಿಯ ವಿಚಾರವನ್ನು ಮಾತನಾಡಬೇಕಾದ, ಸಾಮಾಜಿಕ ಭದ್ರತೆಯನ್ನು ಕಲ್ಪಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅದರಿಂದ ವಿಮುಖವಾಗಿ ಸಮಾಜವನ್ನು ಒಡೆಯುವ ಭಾಷೆ, ಅಶಾಂತಿಯನ್ನು ಸೃಷ್ಟಿಸುವ ಕೆಲಸಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದವು. ಆ ಮೂಲಕ ಅಭಿವೃದ್ಧಿ ವಿಹೀನವಾಗಿ ಚುನಾವಣೆಗಳನ್ನು ಗೆಲ್ಲುವ ಬಗ್ಗೆ, ಕೋಮುದ್ವೇಷ ಭಾವನೆಗಳನ್ನು ಪ್ರಚೋದಿಸಿ ಸುಲಭವಾಗಿ ಅಧಿಕಾರವನ್ನು ಹಿಡಿಯುವ ಕುರಿತು ಕನಸು ಕಾಣುತ್ತಿದ್ದವು. ಇಂತಹ ಕುಟಿಲ ಆಲೋಚನೆಯ ಶಕ್ತಿಗಳಿಗೆ ರಾಜ್ಯದ ಜನತೆ ಮರ್ಮಾಘಾತವಾಗುವಂತಹ ಪೆಟ್ಟನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದರು.

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಪಂಚ ಗ್ಯಾರಂಟಿಗಳು 4.60 ಕೋಟಿ ಜನರನ್ನು ತಲುಪಿವೆ; ರಣದೀಪ್ ಸುರ್ಜೆವಾಲ

ಜನರ ವಿಶ್ವಾಸದಿಂದ ಅಧಿಕಾರಕ್ಕೆಬೆಲೆ ಏರಿಕೆಯಿಂದ ತತ್ತರಿಸಿದ್ದ ದುರ್ಭರ ದಿನಗಳಲ್ಲಿ ತಮ್ಮ ಮೇಲಿದ್ದ ಹೊರೆಯನ್ನು ತಗ್ಗಿಸಿ ಸಾಮಾಜಿಕ ಭದ್ರತೆಯ ಭಾವನೆಯನ್ನು, ಆಶಾವಾದವನ್ನು ಬಿತ್ತುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಸ್ವರೂಪವನ್ನು ರಾಜ್ಯದ ಜನತೆ ಬಹುವಾಗಿ ಮೆಚ್ಚಿದ್ದರು. ಕೇವಲ ಮೆಚ್ಚಿದ್ದು ಮಾತ್ರವೇ ಅಲ್ಲ, ಅಂತಹ ಯೋಜನೆಗಳನ್ನು ಜಾರಿಗೊಳಿಸುವ ಕಷ್ಟಸಾಧ್ಯ ಹೊಣೆಗಾರಿಕೆಯನ್ನು ಕಾಂಗ್ರೆಸ್‌ ಪಕ್ಷ ಖಂಡಿತವಾಗಿಯೂ ನಿರ್ವಹಿಸಬಲ್ಲದು ಎನ್ನುವ ಅದಮ್ಯ ವಿಶ್ವಾಸವನ್ನು ನಮ್ಮ ಮೇಲೆ ಇರಿಸಿದರು.

2013ರಲ್ಲಿ ನನ್ನದೇ ನೇತೃತ್ವದ‌ ಸರ್ಕಾರವು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯನ್ನು ಚಾಚೂ ತಪ್ಪದೆ ಜಾರಿಗೊಳಿಸಿದ್ದ ಇತಿಹಾಸ ಜನತೆಯ ಮುಂದಿತ್ತು. ಕಾಂಗ್ರೆಸ್‌ ಸರ್ಕಾರವೆಂದರೆ ಅದು ನುಡಿದಂತೆ ನಡೆವ ವಿಶ‍್ವಾಸಾರ್ಹ ಸರ್ಕಾರ ಎನ್ನುವ ಭಾವನೆ ಜನರ ಮನಸ್ಸಿನಿಂದ ಮಾಸಿರಲಿಲ್ಲ. ನಾವು ಈ ಹಿಂದಿನ ಅವಧಿಯಲ್ಲಿ ರೂಪಿಸಿ, ಕಾರ್ಯಗತಗೊಳಿಸಿದ್ದ ಯೋಜನೆಗಳ ಫಲಾನುಭವವನ್ನು ಜನತೆ ಕಂಡಿದ್ದರು. ಎಂತಹದ್ದೇ ಕಷ್ಟಗಳನ್ನು ಎದುರಿಸಿಯಾದರೂ ಸರಿ ತಾನು ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಕಾಂಗ್ರೆಸ್‌ ಸಮರ್ಥವಾಗಿ ಅನುಷ್ಠಾನಗೊಳಿಸಲಿದೆ ಎನ್ನುವ ತುಂಬು ವಿಶ್ವಾಸದಿಂದ ಅವರು ನಮ್ಮನ್ನು ಅಭೂತಪೂರ್ವವಾಗಿ ಆಶೀರ್ವದಿಸಿ ಅಧಿಕಾರದ ಚುಕ್ಕಾಣಿಯನ್ನು ನಮ್ಮ ಕೈಗೆ ನೀಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಜನತೆ ನಮ್ಮ ಮೇಲೆ ಇರಿಸಿದ ಭರವಸೆಯನ್ನು ನಾವು ಹುಸಿಹೋಗಲು ಬಿಡಲಿಲ್ಲ. ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನವೇ ಸಚಿವ ಸಂಪುಟ ಸಭೆ ನಡೆಸಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ತಾತ್ವಿಕ ನಿರ್ಣಯವನ್ನು ಕೈಗೊಂಡೆವು. ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯಡಿ (Universal Basic Income) ರೂಪಿತವಾದ ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಫಲಾನುಭವಿಗಳು ಅವುಗಳ ಲಾಭವನ್ನು ಸಮರ್ಥವಾಗಿ ಪಡೆಯುವಂತೆ ಮಾಡಿದ್ದೇವೆ.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಗೃಹಬಳಕೆದಾರರಿಗೆ ಮಾಸಿಕ ಗರಿಷ್ಠ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗಿದೆ. ರಾಜ್ಯದ 1.67 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆದಿದ್ದು, ಶೂನ್ಯ ವಿದ್ಯುತ್‌ ಬಿಲ್‌ ಪಡೆದಿವೆ. ಉಚಿತ ವಿದ್ಯುತ್‌ ವಿತರಣೆಗಾಗಿ 7,436 ಕೋಟಿ ರು. ಅನುದಾನ ಬಿಡುಗಡೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯು ಆರ್ಥಿಕವಾಗಿ ಹಿಂದುಳಿದಿರುವ ಈ ನಾಡಿನ ಕುಟುಂಬಗಳ ಯಜಮಾನಿಯರಿಗೆ ಮಾಸಿಕ 2 ಸಾವಿರ ರು. ಒದಗಿಸುವ ಮೂಲಕ ಅವರ ಕನಿಷ್ಠ ಅಗತ್ಯಗಳಿಗೆ ಬೆಂಗಾವಲಾಗಿದೆ. ಈ ಯೋಜನೆಯಡಿ ಮಾಸಿಕ 1 ಕೋಟಿ 21 ಲಕ್ಷ ಕುಟುಂಬಗಳ ಯಜಮಾನಿಯರ ಖಾತೆಗೆ 2,000 ರು. ನೇರ ವರ್ಗಾವಣೆಯಾಗುತ್ತಿದೆ. ಕುಟುಂಬ ನಿರ್ವಹಣೆಗೆ ಆರ್ಥಿಕ ನೆರವು ನೀಡುವ ಈ ಯೋಜನೆಗೆ ಮಾಸಿಕ 2,430 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಯೋಜನೆ ಜಾರಿಗೊಂಡ ನಂತರದಿಂದ ಈ ವರೆಗೆ ಒಟ್ಟು 23,365 ಕೋಟಿ ರು. ಅನುದಾನ ಇದಕ್ಕೆ ಬಳಕೆಯಾಗಿದೆ.

ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿಯನ್ನು ನೀಡಿ ಅವರು ತಮ್ಮ ಓಡಾಟಗಳಿಗೆ ಮತ್ತೊಬ್ಬರನ್ನು ಆಶ್ರಯಿಸದಂತೆ ಸ್ವಾವಲಂಬಿಗಳಾಗಿಸಿದೆ. ಶಕ್ತಿ ಯೋಜನೆಯಡಿ ನಿತ್ಯ ಸರಾಸರಿ 60 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಈವರೆಗೆ ಮಹಿಳಾ ಪ್ರಯಾಣಿಕರು 210 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದು, ಈ ಉಚಿತ ಟಿಕೆಟ್‌ಗಳ ಒಟ್ಟು ಮೌಲ್ಯ 5,096 ಕೋಟಿ ರು. ಆಗಿದೆ.

ಅನ್ನಭಾಗ್ಯ ಯೋಜನೆಯಡಿ ಹಸಿವು ಮುಕ್ತ ಕರ್ನಾಟಕಕ್ಕಾಗಿ 5 ಕೆ.ಜಿ ಉಚಿತ ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲು ತಲಾ 170 ರು. ಹಣವನ್ನು ಪಡಿತರ ಚೀಟಿ ಹೊಂದಿರುವ ಅಕೌಂಟ್‌ಗಳಿಗೆ ಹಾಕಲಾಗುತ್ತಿದೆ. ರಾಜ್ಯದ 1.38 ಕೋಟಿ ಕುಟುಂಬಗಳ 4 ಕೋಟಿ 8 ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಯೋಜನೆಯಡಿ ಕಲ್ಪಿಸಲಾಗಿದೆ. ಬಡಜನರ ಹಸಿವು ನೀಗಿಸುವ ಈ ಉದ್ದೇಶಕ್ಕಾಗಿ ಮಾಸಿಕ 671 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ.

ಯುವನಿಧಿ ಯೋಜನೆಯು ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3,000 ರು. ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 1,500 ರು. ನಿರುದ್ಯೋಗ ಭತ್ಯೆಯನ್ನು ನೀಡುವ ಮೂಲಕ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಿ ಉತ್ತಮ ಉದ್ಯೋಗಾವಕಾಶಗಳಿಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದೆ. ಈ ಯೋಜನೆಯಡಿ ಈವರೆಗೆ 1,53,255 ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಯುವಸಮೃದ್ಧಿ ಸಮ್ಮೇಳನ ಆಯೋಜನೆ ಮೂಲಕ 11,754 ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ವಿತರಣೆ ಮಾಡಲಾಗಿದೆ. 26,195 ಯುವಜನರು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಗಿದೆ.

ರಾಜ್ಯದ ಪ್ರತಿ ಕುಟುಂಬಕ್ಕೂ ಉಳಿತಾಯ

ಕರ್ನಾಟಕದಲ್ಲಿ ಇಂದು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಯೊಂದು ಕುಟುಂಬವು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ತಿಂಗಳಿಗೆ 8-10 ಸಾವಿರ ರು. ಉಳಿತಾಯ ಕಾಣುತ್ತಿದ್ದು, ಈ ಹಣವನ್ನು ಅವರು ತಮ್ಮ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯಕ್ಕೆ, ಭವಿಷ್ಯದ ಉಳಿತಾಯಕ್ಕೆ ಬಳಸುತ್ತಿದ್ದಾರೆ. ಅದೇ ರೀತಿ, ಮಧ್ಯಮ, ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೂ ಸಹ ಗೃಹಜ್ಯೋತಿ, ಶಕ್ತಿ, ಯುವನಿಧಿಯಂತಹ ಗ್ಯಾರಂಟಿ ಯೋಜನೆಗಳಿಂದಾಗಿ ವಾರ್ಷಿಕ 25-30 ಸಾವಿರ ರು. ಉಳಿಯುತ್ತಿದೆ. ಈ ಉಳಿತಾಯದ ಹಣವನ್ನು ಈ ಕುಟುಂಬಗಳು ತಮ್ಮ ಉತ್ತಮ ಭವಿಷ್ಯಕ್ಕೆ ಬಳಸುತ್ತಿವೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಇಂದು ಸಮಾಜದಲ್ಲಿ ಭದ್ರತೆಯ ಭಾವನೆ ಮನೆ ಮಾಡಿದೆ. ಇದಕ್ಕೆ ಸ್ಪಷ್ಟ ಉದಾಹರಣೆ, ಇತ್ತೀಚೆಗೆ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೇ ಟಾಪರ್‌ ಆದ ವಿಜಯಪುರದ ವಿದ್ಯಾರ್ಥಿ ವೇದಾಂತ್‌ ಗ್ಯಾರಂಟಿ ಯೋಜನೆಗಳು ತನ್ನ ಕುಟುಂಬಕ್ಕೆ, ಶಿಕ್ಷಣಕ್ಕೆ ನೆರವಾದ ಬಗ್ಗೆ ಹೇಳಿದ್ದನ್ನು ಇಲ್ಲಿ ನೆನೆಯಬಹುದು. ಇಂತಹ ಅಸಂಖ್ಯಾತ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎನ್ನುವ ಹೆಮ್ಮೆ ನನಗಿದೆ.

ಬರದಲ್ಲೂ ಕೈಹಿಡಿದ ಗ್ಯಾರಂಟಿರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ ಸಂದರ್ಭದಲ್ಲಿಯೂ ಸಹ ರೈತಾಪಿ ಕುಟುಂಬಗಳು, ಕೃಷಿ ಕಾರ್ಮಿಕರ ಕುಟುಂಬಗಳ ಪಾಲಿಗೆ ನೆರವಾಗಿ ನಿಂತದ್ದು ಸಹ ಇದೇ ಗ್ಯಾರಂಟಿ ಯೋಜನೆಗಳು ಎನ್ನುವುದನ್ನು ಮರೆಯುವಂತಿಲ್ಲ. ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಧಾವಿಸದೆ ಇದ್ದ ಸಂದರ್ಭದಲ್ಲಿ ಈ ಗ್ಯಾರಂಟಿ ಯೋಜನೆಗಳು ರೈತಾಪಿ ವರ್ಗದ ಬದುಕು ಭೀಕರವಾಗದಂತೆ ತಡೆದವು. ಬದುಕಿನೆಡೆಗೆ ಅವರು ಭರವಸೆ ಕಳೆದುಕೊಳ್ಳದಂತೆ ಸಲಹಿದವು.

ಎಲ್ಲಾ ರಂಗದಲ್ಲೂ ಅದ್ಭುತ ಪ್ರಗತಿಕಳೆದ ಒಂದು ವರ್ಷದ ಅವಧಿಯಲ್ಲಿ ನಾವು ಗ್ಯಾರಂಟಿ ಯೋಜನೆಗಳನ್ನು ಮಾತ್ರವೇ ಜಾರಿಗೊಳಿಸಲಿಲ್ಲ, ಬದಲಿಗೆ ರಾಜ್ಯದ ಆರ್ಥಿಕತೆಗೆ ಬಲ ನೀಡಲು ಅಗತ್ಯವಾದ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಹಿಂದೆ ಬೀಳಲಿಲ್ಲ. ಇಂದು ಕರ್ನಾಟಕ ಜಾಗತಿಕ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ರಫ್ತಿನ ವಿಚಾರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜಗತ್ತಿನ 500 ಫಾರ್ಚ್ಯೂನ್‌ ಕಂಪನಿಗಳಲ್ಲಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ ಕರ್ನಾಟಕ ಪ್ರಶಸ್ತ ತಾಣವಾಗಿದ್ದು, ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಏರೋಸ್ಪೇಸ್‌ ಉದ್ಯಮದಲ್ಲಿ ಭಾರತಕ್ಕೆ ಮಾದರಿಯಾಗಿದೆ. ಜಗತ್ತಿನ ನಾಲ್ಕನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್‌ ಆಗಿ ಹೊರಹೊಮ್ಮಿದೆ. ಪುನರ್‌ನವೀಕರಣ ಇಂಧನದ ಮೂಲಗಳ ವಿಚಾರದಲ್ಲಿ ದೇಶದಲ್ಲಿಯೇ ಕರ್ನಾಟಕ ಮಾದರಿಯಾಗಿದೆ. ಕರ್ನಾಟಕದ ಅಭಿವೃದ್ಧಿ ಮಾದರಿಯೆಂದರೆ ಅದು ಸಾಮಾಜಿಕ - ಆರ್ಥಿಕ ಆಶಯಗಳೆರಡನ್ನೂ ಸಾಕಾರಗೊಳಿಸುವ ಸಮಗ್ರ, ಸರ್ವಾಂಗೀಣ ಅಭಿವೃದ್ಧಿಯೇ ಆಗಿದೆ.

ನನ್ನ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2013-2018ರ ಅವಧಿಯಲ್ಲಿ ಯಾವ ಬಗೆಯಲ್ಲಿ ರಾಜ್ಯದ ಅಗಾಧ ಆರ್ಥಿಕ ಬೆಳವಣಿಗೆಗೆ ಕಾರಣವಾಗಿತ್ತೋ, ಅದೇ ರೀತಿ ಇಂದೂ ಸಹ ಸಮರ್ಥ ನೀತಿ-ನಿರೂಪಣೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ನಾಗಾಲೋಟ ನೀಡಲಿದೆ. ಸಮರ್ಥ ಕೈಗಾರಿಕಾ ನೀತಿ, ನಾವೀನ್ಯ ಕ್ರಮಗಳು, ಸುಗಮ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ವಾತಾವರಣದ ಮೂಲಕ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿಯಲ್ಲಿ ಉಂಟಾಗಿದ್ದ ನ್ಯೂನತೆಯನ್ನು ಸರಿಪಡಿಸಲಿದ್ದೇವೆ.

ಜನರ ತಲಾದಾಯ ಹೆಚ್ಚಳಅಭಿವೃದ್ಧಿಯ ವಿಚಾರದಲ್ಲಿ ಪ್ರಾಂತೀಯ ತಾರತಮ್ಯವನ್ನು ಹೋಗಲಾಡಿಸಲು ನಮ್ಮ ಸರ್ಕಾರ ಬಹುವಾಗಿ ಶ್ರಮಿಸಿತ್ತು. ಈ ಎಲ್ಲ ಸಕಾರಾತ್ಮಕ ಕ್ರಮಗಳಿಂದಾಗಿ ಕಲ್ಯಾಣ ಕರ್ನಾಟಕದ ಜನತೆಯ ತಲಾವಾರು ಆದಾಯ 2012ರಲ್ಲಿ 43,237 ರು. ಇದ್ದದ್ದು 2018ರ ವೇಳೆಗೆ 1,11,132 ರು.ಗೆ ಏರಿಕೆಯಾಯಿತು. ಅಂದರೆ ಈ ಹಿಂದಿನ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಕಲ್ಯಾಣ ಕರ್ನಾಟಕದ ಜನತೆಯ ತಲಾದಾಯದಲ್ಲಿ 67,895 ರು. ಹೆಚ್ಚಳವಾಯಿತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣ ಕುಸಿದು ಕೇವಲ 38 ಸಾವಿರ ರು. ಮಾತ್ರ ತಲಾದಾಯ ಏರಿಕೆಯಾಯಿತು. ಈಗ ಮತ್ತೊಮ್ಮೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈ ಭಾಗದ ಜನರ ಬದುಕಿನಲ್ಲಿ ಗಣನೀಯ ಸುಧಾರಣೆ ತರಲು ನಾವು ಕಟಿಬದ್ಧರಾಗಿದ್ದೇವೆ.

ದಿಲ್ಲಿಯಲ್ಲಿ ಮೊಳಗಿದ ಕನ್ನಡಿಗರ ಗರ್ಜನೆ

ಇನ್ನು ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ಸರ್ಕಾರ ಗಂಭೀರವಾಗಿ ದನಿ ಎತ್ತಿದೆ. ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಕನ್ನಡಿಗರ ಘರ್ಜನೆ ಕೇಳಿಸಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಅಭಿಯಾನದಡಿ ರಾಜ್ಯವು ತನ್ನ ಪಾಲಿನ ನ್ಯಾಯಯುತ ತೆರಿಗೆ ಹಕ್ಕಿಗಾಗಿ ಹೋರಾಟವನ್ನು ಆರಂಭಿಸಿದೆ. ಎಲ್ಲಿಯವರೆಗೆ ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಈ ಹೋರಾಟ ಮುಂದುವರಿಯಲಿದೆ. ದೇಶದ ಸಾರ್ವಭೌಮತೆ, ಸಮಗ್ರತೆಯನ್ನು ಎತ್ತಿ ಹಿಡಿಯಬೇಕಾದರೆ, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ದೇಶದ ಪ್ರತಿಯೊಂದು ರಾಜ್ಯದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ನ್ಯಾಯಯುತವಾದ ತೆರಿಗೆ ನೀತಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲು ನಾವು ಬಿಡುವುದಿಲ್ಲ. ಸಾಂವಿಧಾನಿಕ ಚೌಕಟ್ಟಿನೊಳಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವವರೆಗೆ ನಾವು ಈ ವಿಚಾರದಲ್ಲಿ ವಿಶ್ರಮಿಸುವುದೂ ಇಲ್ಲ.

ಚೆನ್ನೈ ಬಗ್ಗುಬಡಿದ ಬೆಂಗಳೂರು: ಇದು RCB ಹೊಸ ಅಧ್ಯಾಯವೆಂದ ಸಿದ್ದರಾಮಯ್ಯ, ಮನಗೆದ್ದ ಕಿಚ್ಚ ಸುದೀಪ್, ಮಲ್ಯ ವಿಶ್..!

ನೆಲ, ಜಲ, ಭಾಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುತ್ತಾ, ಜಾಗತಿಕ ಭೂಪಟದಲ್ಲಿ ಸರ್ವಾಂಗೀಣ ಅಭಿವೃದ್ಧಿ, ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಗುರಿಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ವಹಿಸಿಕೊಂಡು 1 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾದರಿಯನ್ನು ಸೃಷ್ಟಿಸಿದ್ದು, ರಾಜ್ಯ ಸರ್ಕಾರ ಅಭಿವೃದ್ಧಿಯ ಶಕೆಯನ್ನು ಸೃಷ್ಟಿಸಿದೆ.

- ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿಗಳು

Latest Videos
Follow Us:
Download App:
  • android
  • ios