Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ: ಪಂಚ ಗ್ಯಾರಂಟಿಗಳು 4.60 ಕೋಟಿ ಜನರನ್ನು ತಲುಪಿವೆ; ರಣದೀಪ್ ಸುರ್ಜೆವಾಲ

*ಸರ್ಕಾರಕ್ಕೆ ವರ್ಷ-ಕೋಟ್ಯಂತರ ಫಲಾನುಭವಿಗಳು ಹರ್ಷ
* ಕಾಂಗ್ರೆಸ್ ಸರ್ಕಾರ ಸಾಧನೆಗೆ ರಣದೀಪ್ ಸುರ್ಜೆವಾಲ ಹರ್ಷ
* ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನೆ.
* ವರ್ಷದಲ್ಲಿ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳ ಬಣ್ಣನೆ

Randeep Surjewala Appreciate Karnataka congress government successfully running one year sat
Author
First Published May 19, 2024, 7:37 PM IST

ಬೆಂಗಳೂರು (ಮೇ 19): ಮುಖ್ಯಮಂತ್ರಿ  ಸಿದ್ದರಾಮಯ್ಯ,  ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 20 ರಂದು 1 ವರ್ಷ ಪೂರೈಸುತ್ತಿದೆ. ಕಡಿಮೆ‌ ಅವಧಿಯಲ್ಲಿ ಸರ್ಕಾರ ಅಪೂರ್ವ ಸಾಧನೆ ಮಾಡಿ, ಅಗಣಿತ ಜನ ಮನ್ನಣೆ ಗಳಿಸಿದೆ. ಯಾವುದೇ ಜಾತಿ, ಧರ್ಮ ಎಂದು ನೋಡದೇ ಎಲ್ಲ ವರ್ಗವನ್ನೂ ಸಮಾನಾಗಿ ಕಾಣುವ ಮೂಲಕ ಸರ್ವರಿಗೂ ಸಮಬಾಳು - ಸಮಪಾಲು ಎಂಬ ತತ್ತ್ವವನ್ನು ಸಾರಿದೆ. ಆ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ 4.60 ಕೋಟಿ ಜನರನ್ನು ತಲುಪುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲ ಬಣ್ಣಿಸಿದ್ದಾರೆ. 

ರಾಜ್ಯ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಎಂದರೆ ಕೇವಲ ರಸ್ತೆ, ಸೇತುವೆಯಂಥ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲ. ಬಡವರು, ಮಹಿಳೆಯರು,‌ ರೈತರು ಸೇರಿದಂತೆ ಶ್ರಮಿಕ ವರ್ಗವನ್ನೂ ಸಹ ಆರ್ಥಿಕವಾಗಿ ಸಶಕ್ತರನ್ನಾಗಿಸಿ, ಮುಖ್ಯವಾಹಿನಿಗೆ ತಂದು, ಸರ್ವರ ಸರ್ವತೋಮುಖ ಅಭಿವೃದ್ಧಿ ಮಾಡುವುದು ಎಂಬ ವಿಭಿನ್ನ ಆಶಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಡಿ ಇಟ್ಟಿದೆ‌. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ದೇಶದಲ್ಲಿ, ಅಷ್ಟೇ ಏಕೆ ವಿಶ್ವದಲ್ಲೇ ಮಾದರಿಯಾಗಿದೆ.

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೇವಲ ಭರವಸೆ ಕೊಡದೇ, ಗ್ಯಾರಂಟಿ ಕಾರ್ಡ್ ಗಳ ಮೂಲಕ ಜನರಿಗೆ ವಿಶ್ವಾಸ ಮೂಡಿಸಿತ್ತು. ಬಹುಮತದ ಜನಾಶಯ ಪಡೆದ ನಂತರ ಸುಮ್ಮನೆ ಕೂರದೇ 9 ತಿಂಗಳಲ್ಲಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮೀ, ಶಕ್ತಿ, ಯುವ ನಿಧಿಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಅಕ್ಕಿ ಕೊಡದೇ ಅಸಹಕಾರ ನೀಡಿದಾಗಲೂ ಜನರ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ನುಡಿದಂತೆ ನಡೆಯುತ್ತಿದೆ.  ನೇರ ನಗದು ವರ್ಗಾವಣೆ ಮೂಲಕ  ಕೋಟ್ಯಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಿಸಿ, ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಔಷದೋಪಚಾರಕ್ಕೆ ನೆರವಾಗಿದೆ. ರಾಜ್ಯದ ಪ್ರವಾಸೋದ್ಯಮ ಚಟುವಟಿಕೆ ಚುರುಕಾಗಿದೆ. ಒಟ್ಟಿನಲ್ಲಿ ಸರ್ಕಾರ "ಜನರಿಂದ ಜನರಿಗಾಗಿ," ಎಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಈಡೇರಿಸುತ್ತಿದೆ.

ಮಹಿಳೆಯರು ಉಚಿತ ಪ್ರಯಾಣದ ಮೂಲಕ, ಗೃಹ ಲಕ್ಷ್ಮೀ ಯೋಜನೆಯ ಮೂಲಕ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಆ ಮೂಲಕ ಸರ್ಕಾರವು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೂಲ ಆಶಯವನ್ನು ಈಡೇರಿಸುವತ್ತ ದಾಪುಗಾಲಿಡುತ್ತಿದೆ. ರಾಜ್ಯದ 223 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಮಾಡಿ, ಅಸಹಕಾರ ತೋರಿದಾಗಲೂ ಸಹ ರಾಜ್ಯದ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾದವು. ಜನರು ತೊಂದರೆ ಇಲ್ಲದೇ ಜೀವನ ಮಾಡಲು ರಾಜ್ಯ ಸರ್ಕಾರ ತನ್ನ ಯೋಜನೆಗಳ ಮೂಲಕ ಅನುವು ಮಾಡಿಕೊಟ್ಟಿತು. ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ ಸರ್ಕಾರದ ನಡೆ ಶ್ಲಾಘನೀಯ. ಈ ವೇಳೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಸಹ ರಾಜ್ಯ ಸರ್ಕಾರ ಜಮೆ ಮಾಡಿ ರೈತ ಪರ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ.

ಕ್ರಾಂತಿಕಾರಿ ಹೆಜ್ಜೆಗಳಿಂದ ಒಂದು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ ಸರ್ಕಾರ ಮುಂದಿನ ನಾಲ್ಕು ವರ್ಷಗಳನ್ನು ಸಮರ್ಥವಾಗಿ ಎದುರಿಸಲಿದೆ. ಮಾತ್ರವಲ್ಲ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಸೃಷ್ಟಿ ಮಾಡಲಿದೆ ಎಂಬ ದೃಢ ವಿಶ್ವಾಸವಿದೆ. ವರ್ಷದಲ್ಲಿ ಕೋಟ್ಯಂತರ ಜನರ ಹರ್ಷಕ್ಕೆ ಕಾರಣವಾದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸುರ್ಜೆವಾಲಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios