'ತನಿಖೆಯೇ ಇಲ್ಲದೆ ಉಗ್ರ ಎಂದು ಹೇಗೆ ಹೇಳ್ತೀರಾ..?' ಮಂಗಳೂರು ಬ್ಲಾಸ್ಟ್ ಬಗ್ಗೆ ಡಿಕೆಶಿ 'ಮೃದು' ಮಾತು!
ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್, ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಮಾತನಾಡಿದ್ದು, ಬಹುಶಃ ಸಣ್ಣ ತಪ್ಪಿನಿಂದ ಈ ಘಟನೆ ಆಗಿರಬಹುದು. ತನಿಖೆಯೇ ಇಲ್ಲದೆ ಆತನನ್ನು ಉಗ್ರ ಎಂದು ಹೇಗೆ ಹೇಳ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಡಿ.15): ಕಳೆದ ತಿಂಗಳು ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ ವಿಚಾರ ತಕ್ಷಣವೇ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೂಡ ಇದರ ತನಿಖೆಯನ್ನು ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ಘಟನೆಯ ಬಗ್ಗೆ ತನಿಖೆ ನಡೆಸದೆ ಕುಕ್ಕರ್ ಬಾಂಬ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು "ಭಯೋತ್ಪಾದಕ" ಎಂದು ಕರೆದಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.'ಯಾರು ಈ ಭಯೋತ್ಪಾದಕರು? ಏನು ಕ್ರಮ ಕೈಗೊಳ್ಳಲಾಗಿದೆ? ತನಿಖೆಯಿಲ್ಲದೆ ಒಬ್ಬರನ್ನು ಭಯೋತ್ಪಾದಕರೆಂದು ಹೇಗೆ ಕರೆಯುತ್ತಾರೆ? ಈ ಪ್ರಕರಣದಲ್ಲಿ ಅವರು ಇನ್ನಷ್ಟು ವಿವರವಾಗಿ ಹೋಗಿದ್ದರೆ ನಮಗೂ ಕೂಡ ತಿಳಿಯುತ್ತಿತ್ತು.ಇದು ಮುಂಬೈ, ದೆಹಲಿ, ಪುಲ್ವಾಮಾದಲ್ಲಿ ನಡೆದಂತಹ ಭಯೋತ್ಪಾದಕ ಕೃತ್ಯವೇ?'' ಎಂದು ಡಿಕೆ ಶಿವಕುಮಾರ್ ಗುರುವಾರ ಪ್ರಶ್ನಿಸಿದ್ದಾರೆ.
ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು ಹಲವಾರು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಮಾತನಾಡುವ ವೇಳೆ ಈ ಮಾತು ಹೇಳಿದ್ದಾರೆ. ಬಾಂಬ್ ಸ್ಫೋಟವನ್ನು "ಬೇರೆ ರೀತಿಯಲ್ಲಿ ಯೋಜಿಸಲಾಗಿದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ “ಕೆಲವರು ತಪ್ಪು ಮಾಡಿರಬಹುದು. ಆದರೆ ಅದನ್ನು ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತಿದೆ' ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ. ಬಿಜೆಪಿ ಈ ಘಟನೆಯನ್ನು ಮತ ಸೆಳೆಯಲು ಬಳಸಿಕೊಂಡಿದೆ ಎಂದು ಅವರು ದೂಷಿಸಿದ್ದಾರೆ.
ಕುಕ್ಕರ್ ಬಾಂಬ್ ಕೇಸ್: ಕೊಚ್ಚಿಯಲ್ಲಿ ಶಾರೀಕ್ ಸಂಪರ್ಕದಲ್ಲಿದ್ದವರ ಪತ್ತೆ?
ಮತ ಸೆಳೆಯಲು ಬಿಜೆಪಿ ಈ ರೀತಿ ಮಾಡುತ್ತಿದೆ. ಇದು ಹೆಚ್ಚು ಮತ ಗಳಿಸುವ ಅವರ ತಂತ್ರವಷ್ಟೇ. ಇಂತಹ ಪ್ರಯೋಗವನ್ನು ಯಾರೂ ಮಾಡಿಲ್ಲ, ಇದು ದೇಶದ ಇತಿಹಾಸಕ್ಕೆ ನಾಚಿಕೆಗೇಡು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ವಕ್ತಾರ ಎಸ್ ಪ್ರಕಾಶ್ ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
Mangauru bomb blast: ಹೋಂ ಸ್ಟೇಯಲ್ಲಿ ಸ್ತ್ರೀಯರ ಜತೆ ತಂಗಿದ್ದ ಶಾರೀಕ್!
"ಭಯೋತ್ಪಾದಕರು ಯಾರು ಎಂಬುದನ್ನು ಪೊಲೀಸರು ತನಿಖೆಯ ನಂತರ ನಿರ್ಧರಿಸುತ್ತಾರೆ. ಇಷ್ಟು ವರ್ಷಗಳ ಕಾಲ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಮೂಲಭೂತವಾದ ಗೊತ್ತಿಲ್ಲದಿದ್ದರೆ ಅದು ತುಂಬಾ ದುರದೃಷ್ಟಕರ. ಭಯೋತ್ಪಾದನಾ ಚಟುವಟಿಕೆ ಆರೋಪಿಗಳ ಬೆಂಬಲಕ್ಕೆ ಬರುವುದು ತುಂಬಾ ಅಪಾಯಕಾರಿ. ಅವರು ಕರ್ನಾಟಕದ ಜನರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಅವರ ಅಸಡ್ಡೆ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು' ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಭ್ರಷ್ಟಾಚಾರ ಆರೋಪವನ್ನು ಮರೆ ಮಾಚಲು ಕುಕ್ಕರ್ ಪ್ರಕರಣ ತರಲಾಗಿದೆ ಅಷ್ಟೇ. ಡಿಜಿ ತಕ್ಷಣ ಮಂಗಳೂರಿಗೆ ಹೋಗಿದ್ದರು. ಎನ್‌ಐಎ ಕೂಡ ಬಂದಿತ್ತು. ಭಯೋತ್ಪಾದಕರು ಎಲ್ಲಿಂದ ಬಂದರು ಅನ್ನೋದನ್ನ ಸರ್ಕಾರ ಹೇಳಬೇಕು. ಮತದಾರರ ಪಟ್ಟಿ ಡಿಲಿಟ್ ಆರೋಪ ಬಂದ ಹಿನ್ನೆಲೆಯಲ್ಲಿ ಕುಕ್ಕರ್ ಪ್ರಕರಣ ದೊಡ್ಡದು ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಖಂಡಿತವಾಗಿ ಅಧಿಕಾರಕ್ಕೆ ಬರಲಿದೆ. ನಾವು 126 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಬಿಜೆಪಿ ಪಕ್ಷ 60-70 ಸೀಟ್‌ಗಳಲ್ಲಿ ಗೆಲುವು ಸಾಧಿಸಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.