ರಾಜ್ಯದಲ್ಲಿ ಕೊರೋನಾ ಹಾವಳಿ ಇದೀಗ ಮಿತಿ ಮೀರಿದೆ. ರಾಜ್ಯದಲ್ಲಿ ಕೊರೋನಾದ ನಡುವೆಯೇ ಕಾಲ ಕಳೆಯುತ್ತಾ 6 ತಿಂಗಳು ಮುಕ್ತಾಯವಾಗಿದೆ. 

ವರದಿ : ರಾಕೇಶ್‌ ಎನ್‌.ಎಸ್‌.

ಬೆಂಗಳೂರು (ಸೆ.08): ರಾಜ್ಯದಲ್ಲಿ ಕೊರೋನಾ ಸೋಂಕು ಪತ್ತೆಯಾಗಿ ಬುಧವಾರ (ಸೆ.9)ಕ್ಕೆ ಆರು ತಿಂಗಳು. ಸೋಂಕು ಹರಡದಂತೆ ಕೇಂದ್ರ ಸರ್ಕಾರಕ್ಕೂ ಮುನ್ನ ಲಾಕ್‌ಡೌನ್‌ ಘೋಷಿಸಿ ಮೆಚ್ಚುಗೆ ಪಡೆದದ್ದು ಕರ್ನಾಟಕ. ತಿಂಗಳುಗಟ್ಟಲೇ ಲಾಕ್‌ಡೌನ್‌, ಸೀಲ್‌ಡೌನ್‌, ಭಾಗಶಃ ಅನ್‌ಲಾಕ್‌ಗಳಿಂದ ಬದುಕಿನ ಎಲ್ಲ ಚಟುವಟಿಕೆ ಮೇಲೆ ಅಗಾಧ ಹೊಡೆತ ಬಿದ್ದಿದೆ. ಹಿಂದೆ ನೂರಿನ್ನೂರು ಸಂಖ್ಯೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದ ವೇಳೆ ಸ್ತಬ್ಧ ಸ್ಥಿತಿಯಲ್ಲಿದ್ದ ರಾಜ್ಯದಲ್ಲಿ ಈಗ ದಿನಕ್ಕೆ ಸಾವಿರಗಟ್ಟಲೆ ಸೋಂಕಿತರು, ಸರಾಸರಿ ಶತಕದ ಮೇಲೆ ಸಾವು ಆಗುತ್ತಿದ್ದರೂ ಎಲ್ಲವೂ ಮುಕ್ತ ಮುಕ್ತ.

ಕೋವಿಡ್‌-19ರ ಸಕ್ರಿಯ ಪ್ರಕರಣಗಳಲ್ಲಿ ದೇಶದಲ್ಲೇ ಮೂರನೇ ಸ್ಥಾನಕ್ಕೆ ಕರ್ನಾಟಕ ಏರಿ ಕೂತಿದೆ. ಸೋಂಕಿತರು ಹಾಗೂ ಸಾವಿನ ಸಂಖ್ಯೆ ನೋಡಿ ಆರಂಭದಲ್ಲಿ ಆತಂಕಕ್ಕೆ ಒಳಗಾಗುತ್ತಿದ್ದ ಜನರಿಗೆ ಈಗ ಸೋಂಕಿತರ ಸಂಖ್ಯೆ ಸಾವಿರಾರು ದಾಟಿದರೂ ಯಾವುದೇ ಆತಂಕ, ಗಾಬರಿ ಉಂಟಾಗುತ್ತಿಲ್ಲ. ಹೀಗಾಗಿ ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ.

ಅಮೆರಿಕದಿಂದ ಬಂದವಗೆ ಮೊದಲ ಸೋಂಕು:

ಅಮೆರಿಕದಿಂದ ಭಾರತಕ್ಕೆ ಬಂದಿದ್ದ ಖಾಸಗಿ ಕಂಪನಿಯೊಂದರ ಸಿಬ್ಬಂದಿಯೊಬ್ಬರಿಗೆ ಕೋವಿಡ್‌-19 ಇರುವುದು ಮಾಚ್‌ರ್‍ 9ರಂದು ಖಚಿತವಾಗಿತ್ತು. ತಕ್ಷಣ ರಾಜ್ಯ ಸರ್ಕಾರ ಸೋಂಕು ನಿಯಂತ್ರಿಸಲು ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ-1897ರನ್ನು ಜಾರಿಗೊಳಿಸಿ ಆಂಶಿಕವಾದ ಲಾಕ್‌ಡೌನ್‌ ಪ್ರಾರಂಭಿಸಿತ್ತು. ಸೌದಿ ಅರೇಬಿಯಾದಿಂದ ವಾಪಸ್‌ ಆಗಿದ್ದ ಕಲಬುರಗಿಯ 76 ವಯಸ್ಸಿನ ವೃದ್ಧರೊಬ್ಬರು ಮಾಚ್‌ರ್‍ 12ರಂದು ಪ್ರಾಣ ಕಳೆದುಕೊಂಡಿದ್ದರು. ಇದು ಕೋವಿಡ್‌ಗೆ ದೇಶದಲ್ಲೇ ಮೊದಲ ಬಲಿಯಾಗಿತ್ತು.

ರಾಜ್ಯದಲ್ಲಿ 4 ಲಕ್ಷ ದಾಟಿದ ಕೊರೋನಾ ಸಂಖ್ಯೆ: ಸೋಮವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!

ಇಲ್ಲಿಂದ ಶುರುವಾದ ಕೊರೋನಾ ಸೋಂಕಿನ ಯಾತ್ರೆ ಈಗ ರಾಜ್ಯದ ಮೂಲೆಮೂಲೆಗೂ ಹರಡಿದೆ. ಏಪ್ರಿಲ್‌ 8ರಂದು ರಾಜ್ಯದಲ್ಲಿ ಒಟ್ಟು 181 ಮಂದಿಗೆ ಸೋಂಕು ಅಂಟಿತ್ತು. ಅದರಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದರು. 148 ಸಕ್ರಿಯ ಕೊರೋನಾ ಪ್ರಕರಣಗಳಿದ್ದವು. ಮಾಚ್‌ರ್‍/ ಏಪ್ರಿಲ್‌ನಲ್ಲಿ ನಂಜನಗೂಡಿನ ಫಾರ್ಮಾಸುಟಿಕಲ್‌ ಕಂಪನಿ ಮತ್ತು ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದಿದ್ದ ತಬ್ಲೀಘಿ ಜಮಾತ್‌ ಸಮಾವೇಶದಲ್ಲಿ ಭಾಗಿಯಾದವರ ಮೂಲಕ ಸೋಂಕಿನ ಸಂಖ್ಯೆ ನಿಧಾನವಾಗಿ ಹೆಚ್ಚಾಯಿತು. ಆಗ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲೇ 10ನೇ ಸ್ಥಾನದಲ್ಲಿತ್ತು.

ಮೇ 8ರ ಹೊತ್ತಿಗೆ ರಾಜ್ಯದಲ್ಲಿ ಒಟ್ಟು 753 ಪ್ರಕರಣ ದಾಖಲಾಗಿ, 30 ಮಂದಿ ಮೃತಪಟ್ಟಿದ್ದರು. 346 ಸಕ್ರಿಯ ಪ್ರಕರಣಗಳಿದ್ದವು. ಒಟ್ಟು 1.44 ಲಕ್ಷ ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು.

ಲಾಕ್‌ಡೌನ್‌ನಿಂದ ತುಸು ವಿನಾಯಿತಿ ಪ್ರಾರಂಭವಾದ ಜೂನ್‌ 8ಕ್ಕೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಪ್ರಕರಣ 5,760 ಹಾಗೂ 3,175 ಸಕ್ರಿಯ ಪ್ರಕರಣಗಳಿದ್ದವು. 64 ಮಂದಿ ಕೋವಿಡ್‌ಗೆ ಬಲಿಯಾಗಿದ್ದರು. 3.93 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಕೊರೋನಾ ಸುನಾಮಿ ಆರಂಭ:

ಜುಲೈ 8ರ ಹೊತ್ತಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 28,877ಕ್ಕೆ ಏರಿಕೆಯಾಗಿತ್ತು. ಸಾವಿನ ಸಂಖ್ಯೆ 470ನ್ನು ತಲುಪಿತ್ತು. 7.60 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ನಡೆದಿತ್ತು. ನಿತ್ಯ ಅಂದಾಜು 1,500 ಪ್ರಕರಣ ವರದಿಯಾಗುತ್ತಿದ್ದವು. ದಿನಕ್ಕೆ ಅಂದಾಜು 20 ಸಾವಿರ ಪರೀಕ್ಷೆಗಳನ್ನು ಸರ್ಕಾರ ನಡೆಸುತ್ತಿತ್ತು. ಆಗಸ್ಟ್‌ 8ರ ಹೊತ್ತಿಗೆ ಕೊರೋನಾ ಸುನಾಮಿ ಶುರುವಾಗಿ ಪ್ರತಿದಿನ ನೂರಕ್ಕೂ ಹೆಚ್ಚು ಸಾವು, ಪ್ರತಿದಿನ 6,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿದ್ದವು.

ಅನ್‌ಲಾಕ್‌ 4.0 ಗೆ ಕರ್ನಾಟಕ ತೆರೆದುಕೊಂಡ ರೀತಿ ..

ಮಾಚ್‌ರ್‍ 9ರಿಂದ ಜುಲೈ 8 ರವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ 28,877 ಕೊರೋನಾ ಪ್ರಕರಣಗಳು ಮತ್ತು 470 ಸಾವಿನ ವರದಿಯಾಗಿದ್ದರೆ, ಜುಲೈ 8ರಿಂದ ಆಗಸ್ಟ್‌ 8 ರ ವರೆಗಿನ ಅವಧಿಯಲ್ಲೇ 1,36,047 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಈ ಅವಧಿಯಲ್ಲಿ 2,528 ಮಂದಿ ಮೃತಪಟ್ಟಿದ್ದರು. ಒಟ್ಟು 16.68 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಸೆಪ್ಟೆಂಬರ್‌ 8ಕ್ಕೆ ರಾಜ್ಯದಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 4.04 ಲಕ್ಷಕ್ಕೆ ತಲುಪಿದೆ. ಮೂರು ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಾ ಮುಕ್ತರಾಗಿದ್ದಾರೆ. ಇದೇ ವೇಳೆ 6534 ಮಂದಿ ಸಾವನ್ನಪ್ಪಿದ್ದಾರೆ.

ಪ್ರಸ್ತುತ ನಿತ್ಯ 70 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಒಟ್ಟು 33 ಲಕ್ಷಕ್ಕೂ ಹೆಚ್ಚು ಕೊರೋನಾ ಪರೀಕ್ಷೆಯನ್ನು ನಡೆಸಲಾಗಿದೆ. ಸಮಾಧಾನಕರ ಸಂಗತಿ ಎಂದರೆ ರಾಜ್ಯದಲ್ಲಿ ಕೊರೋನಾದಿಂದ ಸಾಯುತ್ತಿರುವವರ ಪ್ರಮಾಣ ಅತ್ಯಂತ ಕಡಿಮೆಯಿದೆ.

ರಾಜ್ಯದಲ್ಲಿ ಕೊರೋನಾ

1ನೇ ಕೇಸ್‌ - ಮಾರ್ಚ್ 9

1,000 ಕೇಸ್‌ - ಮೇ 15

10,000 ಕೇಸ್‌ - ಜೂನ್‌ 24

1 ಲಕ್ಷ ಕೇಸ್‌ - ಜುಲೈ 27

2 ಲಕ್ಷ ಕೇಸ್‌ - ಆಗಸ್ಟ್‌ 13

3 ಲಕ್ಷ ಕೇಸ್‌ - ಆಗಸ್ಟ್‌ 26

4 ಲಕ್ಷ ಕೇಸ್‌ - ಸೆಪ್ಪೆಂಬರ್‌ 8

1ನೇ ಸಾವು - ಮಾರ್ಚ್ 12

100ನೇ ಸಾವು - ಜೂನ್‌ 17

500ನೇ ಸಾವು - ಜುಲೈ 10

1000ನೇ ಸಾವು - ಜುಲೈ 16

5000ನೇ ಸಾವು - ಆಗಸ್ಟ್‌ 26