ಬೆಂಗಳೂರು(ನ.28): ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಇಲ್ಲಿ ನಡೆದಿದೆ. ಸಂತೋಷ್‌ ಅವರನ್ನು ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

"

ಸಂತೋಷ್‌ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ಡಾಲರ್ಸ್‌ ಕಾಲೋನಿಯಲ್ಲಿ ಅವರ ನಿವಾಸವಿದ್ದು, ರಾತ್ರಿ 8 ಗಂಟೆ ಹೊತ್ತಿಗೆ 12 ನಿದ್ರೆ ಮಾತ್ರೆ ಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಇದ್ದರು. ಇದನ್ನು ಗಮನಿಸಿದ ಅವರ ಪತ್ನಿ ಕೂಡಲೇ ಸಮೀಪದ ರಾಮಯ್ಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಕ್ಷ ಒಪ್ಪಿದರೆ ಅರಿಸೀಕೆರೆಯಿಂದ ಕಣಕ್ಕೆ: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌

ವೈದ್ಯರು ಅವರನ್ನು ತುರ್ತು ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿದ್ದು, ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಅವು ತಿಳಿಸಿವೆ.

ಸಿಎಂ ಭೇಟಿ:

ಸಂತೋಷ್‌ ಆತ್ಮಹತ್ಯೆ ಯತ್ನ ಸುದ್ದಿ ತಿಳಿದ ಕೂಡಲೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಹಾಗೂ ಸಂತೋಷ್‌ ಪತ್ನಿಗೆ ಧೈರ್ಯ ತುಂಬಿದರು.

BJP ನಾಯಕರ ಭೇಟಿ : JDS ಮತ್ತೊಂದು ವಿಕೆಟ್ ಪತನ ?

‘2 ದಿನಗಳ ಹಿಂದಷ್ಟೇ ಸಂತೋಷ್‌ ನನ್ನನ್ನು ಭೇಟಿ ಆಗಿದ್ದರು. ನನ್ನ ಜತೆ ಬೆಳಗ್ಗೆ ವಾಕಿಂಗ್‌ ಕೂಡ ಮಾಡಿದ್ದರು. ಆತ್ಮಹತ್ಯೆ ಯತ್ನದ ಸುದ್ದಿ ಕೇಳಿ ನನಗೆ ಆಘಾತವಾಗಿದೆ. ಸಂತೋಷ್‌ ಪತ್ನಿ ಹಾಗೂ ವೈದ್ಯರ ಜತೆ ಮಾತನಾಡಿದ್ದೇನೆ. ಈ ಯತ್ನಕ್ಕೆ ಕಾರಣ ತಿಳಿದಿಲ್ಲ. ಘಟನೆಗೆ ಕಾರಣ ಪತ್ತೆ ಹಚ್ಚಬೇಕು. ಸಂತೋಷ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ಸುದ್ದಿಗಾರರಿಗೆ ಯಡಿಯೂರಪ್ಪ ತಿಳಿಸಿದರು. ಪುತ್ರ ಬಿ.ವೈ. ರಾಘವೇಂದ್ರ ಕೂಡ ಈ ಸಂದರ್ಭದಲ್ಲಿದ್ದರು.

ಸಂತೋಷ್‌ ಅವರು ಯಡಿಯೂರಪ್ಪ ಅವರ ಬಂಧುವೂ ಆಗಿದ್ದು, ಅವರ ಪರಮಾಪ್ತ ವಲಯದಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದರು. ತುಮಕೂರು ಜಿಲ್ಲೆ ತುರುವೇಕೆರೆ ಮೂಲದವರಾದ ಅವರು ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಅವರು ಇಚ್ಛೆ ಹೊಂದಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸ್ಥಳೀಯ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿತ್ತು ಎಂದೂ ಹೇಳಲಾಗಿತ್ತು.