ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್‌ ಸಿದ್ಧತೆಗೆ ಅಣಿಯಾಗಿದ್ದು, ಜನವರಿ ಮೊದಲ ವಾರದಿಂದಲೇ ಬಜೆಟ್‌ ಸಿದ್ಧತಾ ಪೂರ್ವಭಾವಿ ಪ್ರಕ್ರಿಯೆಗಳು ಶುರುವಾಗಲಿವೆ.

ಬೆಂಗಳೂರು : ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಹಣಕಾಸು ವರ್ಷದ ಬಜೆಟ್‌ ಸಿದ್ಧತೆಗೆ ಅಣಿಯಾಗಿದ್ದು, ಜನವರಿ ಮೊದಲ ವಾರದಿಂದಲೇ ಬಜೆಟ್‌ ಸಿದ್ಧತಾ ಪೂರ್ವಭಾವಿ ಪ್ರಕ್ರಿಯೆಗಳು ಶುರುವಾಗಲಿವೆ.

ಈ ಸಂಬಂಧ ಮುಖ್ಯಮಂತ್ರಿ ಅವರೇ ಗುರುವಾರ ಮಾಹಿತಿ ನೀಡಿದ್ದು, ಈ ತಿಂಗಳಿಂದಲೇ ಬಜೆಟ್‌ ಸಿದ್ಧತೆ ಆರಂಭಿಸುವುದಾಗಿ ಹೇಳಿದ್ದಾರೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ವರ್ಷ ಡಿಸೆಂಬರ್‌ ವೇಳೆಗಾಗಲೇ ಬಜೆಟ್‌ ತಯಾರಿ ಪೂರ್ವಭಾವಿ ಸಭೆ ನಡೆಸುತ್ತಿದ್ದರು. ಆದರೆ, ಈ ಬಾರಿ ನಾಯಕತ್ವ ಬದಲಾವಣೆ ಗೊಂದಲದ ಹಿನ್ನೆಲೆಯಲ್ಲಿ ಕೊಂಚ ತಡವಾಗಿದೆ. ಈ ವರ್ಷ ಜನವರಿಯಲ್ಲಿ ಸಭೆ ನಡೆಸುತ್ತಿದ್ದು, ಫೆಬ್ರವರಿ ಅಂತ್ಯಕ್ಕೆ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಗುರುವಾರ ತಮ್ಮನ್ನು ಭೇಟಿ ಮಾಡಿದ ಮುಖ್ಯಕಾರ್ಯದರ್ಶಿ ಸೇರಿ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಜೆಟ್ ಸಿದ್ಧತೆ ಯಾವಾಗ ಆರಂಭ ಆಗಲಿದೆ ಎಂಬ ಪ್ರಶ್ನೆಗೆ, ‘ಈ ತಿಂಗಳಿನಿಂದ(ಜನವರಿ) ಬಜೆಟ್ ಸಿದ್ಧತೆ ಶುರು ಮಾಡುತ್ತೇನೆ’ ಎಂದು ಹೇಳಿದರು.

ಪೂರ್ವಭಾವಿ ಸಭೆ:

ಮಾಹಿತಿ ಪ್ರಕಾರ, ಮೊದಲಿಗೆ ಮುಖ್ಯಮಂತ್ರಿ ಅವರು ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ. ಯಾವ್ಯಾವ ಇಲಾಖೆಯಿಂದ ಎಷ್ಟೆಷ್ಟು ಆದಾಯ ನಿರೀಕ್ಷಿಸಲಾಗಿತ್ತು? ಹಣಕಾಸು ವರ್ಷಾಂತ್ಯದ ವೇಳೆಗೆ ಎಷ್ಟು ಆದಾಯ ಬರಬಹುದು? ಕಳೆದ ಬಜೆಟ್‌ನಲ್ಲಿ ಆಯಾ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನದಲ್ಲಿ ಎಷ್ಟು ಬಳಕೆಯಾಗಿದೆ? ಎಷ್ಟು ಉಳಿದಿದೆ? ಮುಂದಿನ ವರ್ಷದಲ್ಲಿ ಇಲಾಖಾವಾರು ಆದಾಯ ನಿರೀಕ್ಷೆ ಮತ್ತು ಖರ್ಚು-ವೆಚ್ಚಗಳ ಆಧಾರದಲ್ಲಿ ಹೊಸ ಯೋಜನೆಗಳ ಲೆಕ್ಕಾಚಾರ ನಡೆಯಲಿದೆ. ಬಳಿಕ ಹಣಕಾಸು ಇಲಾಖೆಯೊಂದಿಗೆ ಸಭೆ ನಡೆಸಿ ಸಂಪನ್ಮೂಲ ಸಂಗ್ರಹ ಸಂಬಂಧ ಮತ್ತೊಮ್ಮೆ ಅವಲೋಕನ ಕೈಗೊಳ್ಳಲಿದ್ದಾರೆ. ನಂತರ ಮುಖ್ಯಮಂತ್ರಿ ಅವರು ವಿಶೇಷವಾಗಿ ರಾಜ್ಯದ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಇದರಲ್ಲಿ ರೈತರು, ವಾಣಿಜ್ಯೋದ್ಯಮಗಳು, ಸಾರಿಗೆ, ಕಾರ್ಮಿಕ ಮತ್ತಿತರ ಸಂಘಟನೆಗಳಿಂದ ಬೇಡಿಕೆಗಳನ್ನು ಸ್ವೀಕರಿಸಿ ಸಾಧ್ಯವಾಗುವ ಬೇಡಿಕೆಗಳನ್ನು ಬಜೆಟ್‌ನಲ್ಲಿ ಸೇರಿಸುವ ಪ್ರಯತ್ನ ನಡೆಯಲಿದೆ ಎಂದು ತಿಳಿದು ಬಂದಿದೆ.

ಇನ್ನು ಕಳೆದ ವರ್ಷ ಮಾ.7ರಂದು 2025-26ನೇ ಸಾಲಿನ ಹಾಗೂ ತಮ್ಮ 16ನೇ ಮುಂಗಡ ಪತ್ರವನ್ನು ಸಿದ್ದರಾಮಯ್ಯ ಮಂಡಿಸಿದ್ದರು. ಈ ಬಾರಿ ಬಜೆಟ್‌ ಪೂರ್ವಸಿದ್ಧತಾ ಸಭೆಗಳು ಪೂರ್ಣಗೊಂಡ ಬಳಿಕ ಅವರ 17ನೇ ಬಜೆಟ್‌ ಮಂಡನೆಗೆ ದಿನಾಂಕ ಅಂತಿಮಗೊಳಿಸಬೇಕಾಗಿದೆ ಎಂದು ಮುಖ್ಯಮಂತ್ರಿಯವರ ಕಾರ್ಯಾಲಯದ ಮೂಲಗಳು ಹೇಳುತ್ತವೆ.

ನಾನೇ ಬಜೆಟ್‌ ಮಂಡಿಸ್ತೇನೆ ಎಂದಿದ್ದ ಸಿಎಂ:

ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್‌ ಸೂಚನೆಯಂತೆ ಪರಸ್ಪರ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿ ಬಳಿಕ ಹೈಕಮಾಂಡ್ ತೀರ್ಮಾನಕ್ಕೆ ಇಬ್ಬರೂ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದರು. ಬಳಿಕ ಬೆಳಗಾವಿ ಅಧಿವೇಶನದ ಸಮಯದಲ್ಲಿ ಹೈಕಮಾಂಡ್‌ ನಾಯಕತ್ವ ಬದಲಾವಣೆಗೆ ಒಪ್ಪಿಲ್ಲ ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯ ಅವರೇ ಸದನದಲ್ಲಿ ಬಹುಶಃ ಹೈಕಮಾಂಡ್‌ ನಮ್ಮ ಪರವಾಗಿದೆ. ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಲ್ಲ. ಹೈಕಮಾಂಡ್‌ ಹೇಳುವವರೆಗೂ ನಾನೇ ಮುಖ್ಯಮಂತ್ರಿ. ಮುಂದಿನ ಬಜೆಟ್‌ ಅನ್ನೂ ನಾನೇ ಮಂಡಿಸುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದರು. ಇದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ನೇತೃತ್ವದ ಬಗ್ಗೆ ಹೊಸ ವರ್ಷದಲ್ಲಿ ಮಾತನಾಡುವುದಾಗಿಯೂ ಹೇಳಿದ್ದರು.

ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ : ಸಲೀಂ

ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟದ ಪುನಾರಚನೆ ಸಾಧ್ಯತೆಯಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಶೇ. 50ರಷ್ಟು ಸಚಿವರಿಗೆ ಪಕ್ಷದ ಜವಾಬ್ದಾರಿ ನೀಡಿ, ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ ವಿಧಾನಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಹೇಳಿದ್ದಾರೆ. ತಾವು ಕೂಡ ಸಚಿವ ಸ್ಥಾನ ಆಕಾಂಕ್ಷಿ ಎಂದಿದ್ದಾರೆ.

ಈ ವರ್ಷ ರಾಜಕೀಯ ಬಡ್ತಿ ನಿರೀಕ್ಷೆ ಇದೆ: ಪರಂ

ಬೆಂಗಳೂರು: ಎಲ್ಲರಂತೆ ನನಗೂ ಮಹತ್ವಾಕಾಂಕ್ಷೆಗಳಿವೆ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಈ ವರ್ಷ ‘ರಾಜಕೀಯ ಬಡ್ತಿ’ ಸಿಗುವ ನಿರೀಕ್ಷೆಯಲ್ಲಿದ್ದೇನೆ ಎನ್ನುವ ಮೂಲಕ ತಾವೂ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂಬ ಸುಳಿವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೀಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಬಡ್ತಿ 2026ರಲ್ಲಿ ಆಗಬೇಕು. ಅದು ನಮ್ಮ ಹೈಕಮಾಂಡ್‌ಗೆ ಬಿಟ್ಟದ್ದು. ಹೈಕಮಾಂಡ್ ನಿರ್ಧಾರ ಮಾಡಿದರೆ ಅದು ಆಗುತ್ತದೆ. ನಾನು ಇಲ್ಲಿಯವರೆಗೆ ಆಶಾವಾದಿಯಾಗಿ ಬದುಕಿದ್ದೇನೆ, ಆದ್ದರಿಂದ ಅದು ನನಗೆ ಹೊಸದೇನಲ್ಲ ಎಂದರು.

- ಸದ್ಯದಲ್ಲೇ ಆಯವ್ಯಯ ಸಿದ್ಧತೆ ಆರಂಭಿಸುವುದಾಗಿ ಸ್ವತಃ ಸಿಎಂ ಘೋಷಣೆ

- ಫೆಬ್ರವರಿ ಅಂತ್ಯ/ಮಾರ್ಚ್‌ ಮೊದಲ ವಾರ ಸಿದ್ದು 17ನೇ ಬಜೆಟ್‌ ಮಂಡನೆ?

- ನಾಯಕತ್ವ ಬದಲಾವಣೆ ಬಗ್ಗೆ ಕಳೆದ ಹಲವು ತಿಂಗಳಿನಿಂದ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಬಿರುಸಿನ ಚರ್ಚೆ

- ವಾದ- ಪ್ರತಿವಾದ ತಾರಕಕ್ಕೇರಿದಾಗ ನಾನೇ ಬಜೆಟ್‌ ಮಂಡಿಸುವೆ ಎಂದು ಘಂಟಾಘೋಷವಾಗಿ ಸಾರಿದ್ದ ಸಿಎಂ ಸಿದ್ದು

- ಸಾಮಾನ್ಯವಾಗಿ ಡಿಸೆಂಬರ್‌ನಿಂದಲೇ ಬಜೆಟ್‌ ತಯಾರಿ ಸಂಬಂಧ ಪೂರ್ವಭಾವಿ ಸಭೆಗಳು ನಡೆಯಬೇಕಾಗಿದ್ದವು

- ರಾಜ್ಯದ ನಾಯಕತ್ವ ಬದಲಾವಣೆ ಗೊಂದಲದ ಕಾರಣಕ್ಕೆ ಈ ಬಾರಿ ಬಜೆಟ್‌ ಸಿದ್ಧತಾ ಸಭೆಗಳ ಆಯೋಜನೆ ವಿಳಂಬ

- ಇದೀಗ ಇನ್ನೊಂದು ವಾರದಲ್ಲಿ ಸಿದ್ಧತಾ ಸಭೆ ನಡೆಸುವುದಾಗಿ ಸ್ವತಃ ಮುಖ್ಯಮಂತ್ರಿಗಳಿಂದಲೇ ಇದೀಗ ಹೇಳಿಕೆ