Asianet Suvarna News Asianet Suvarna News

ಮೋದಿ ಜತೆ ಸಿದ್ದು 40 ನಿಮಿಷ ಚರ್ಚೆ: ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ನೆರವಿಗೆ ಮೊರೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ. ಸುರಂಗ ಮಾರ್ಗಕ್ಕೆ 3000 ಕೋಟಿ ರು. ವೆಚ್ಚವಾಗಲಿದೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ-7ಅನ್ನು ರಾ.ಹೆ.4ಕ್ಕೆ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಯೋಜನೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಹಾಗೂ ಎನ್ಎಚ್ಎಐಗೆ ಅನುದಾನ ನೀಡುವಂತೆ ಮನವಿ ಸಿದ್ದರಾಮಯ್ಯ ಮಾಡಿದರು.

Karnataka CM Siddaramaiah Met PM Narendra Modi in New Delhi grg
Author
First Published Jun 30, 2024, 7:03 AM IST

ನವದೆಹಲಿ(ಜೂ.30):  ಮೂರು ದಿನಗಳಿಂದ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮೇಕೆದಾಟು, ಭದ್ರಾ ಮೇಲ್ದಂಡೆ, ಮೆಟ್ರೋ 3ನೇ ಹಂತ ಸೇರಿ ರಾಜ್ಯದ ಪ್ರಮುಖ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ರಾಜ್ಯ ಪ್ರಸ್ತಾಪ ಸಲ್ಲಿಸಿರುವ ಈ ಯೋಜನೆಗಳಿಗೆ ಆದಷ್ಟು ಶೀಘ್ರ ಅನುಮೋದನೆ ನೀಡುವಂತೆ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.

ಬೆಂಗಳೂರು ನಗರಕ್ಕೆ ಕುಡಿಯುವ ನೀರೊದಗಿಸುವ ಹಾಗೂ 400 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಮೇಕೆದಾಟು ಅಣೆಕಟ್ಟು ಯೋಜನೆಯ 9000 ಕೋಟಿ ರು. ಡಿಪಿಆರ್‌ಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ. ಈ ಯೋಜನೆ ಕುರಿತು ಖುದ್ದು ಆಸಕ್ತಿ ವಹಿಸುವಂತೆ ಸಿದ್ದರಾಮಯ್ಯ ಅವರು ಪ್ರಧಾನಿ ಅವರ ಜತೆಗಿನ ಸುಮಾರು 40 ನಿಮಿಷಗಳ ಭೇಟಿ ವೇಳೆ ಮನವಿ ಮಾಡಿದರು.

ಸಿದ್ದರಾಮಯ್ಯ ಕೊಟ್ಟ ತೆರಿಗೆ ಏಟಿಗೆ ಎಣ್ಣೆ ಅಂಗಡಿ ನೋಡಿದ್ರೆ ಕಿಕ್ ಹೊಡೆಯುತ್ತೆ: ಅಶೋಕ್‌ ವಾಗ್ದಾಳಿ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024ರಲ್ಲಿ ಘೋಷಿಸಿದಂತೆ 5300 ಕೋಟಿ ರು. ಬಿಡುಗಡೆ ಹಾಗೂ ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆಯೂ ಇದೇ ವೇಳೆ ಕೋರಿದರು. ಜತೆಗೆ ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹದಾಯಿ ಯೋಜನೆಗೆ ಇರುವ ಅಡ್ಡಿ, ಆತಂಕ ನಿವಾರಣೆಯಾದರೆ ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳು: 

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ. ಸುರಂಗ ಮಾರ್ಗಕ್ಕೆ 3000 ಕೋಟಿ ರು. ವೆಚ್ಚವಾಗಲಿದೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ-7ಅನ್ನು ರಾ.ಹೆ.4ಕ್ಕೆ ಸಂಪರ್ಕಿಸುವುದರಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಯೋಜನೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಹಾಗೂ ಎನ್ಎಚ್ಎಐಗೆ ಅನುದಾನ ನೀಡುವಂತೆ ಮನವಿ ಸಿದ್ದರಾಮಯ್ಯ ಮಾಡಿದರು.
ಅದೇ ರೀತಿ 73.04 ಕಿ.ಮೀ ಉದ್ದದ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ಅನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಅನುಮೋದಿಸಿದೆ. ಕೇಂದ್ರ ಬಜೆಟ್‌ನಲ್ಲಿ ಇದಕ್ಕೆ ಅಗತ್ಯ ಅನುದಾನ ಮೀಸಲಿಡುವಂತೆ ಕೋರಿದರು.

ಇನ್ನು ಬೆಂಗಳೂರು ಮೆಟ್ರೋದ 3ನೇ ಹಂತದ 44.65 ಕಿ.ಮೀ. ಮಾರ್ಗದ 15,611 ಕೋಟಿ ವೆಚ್ಚದ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಶೀಘ್ರ ಇದಕ್ಕೆ ಅನುಮೋದನೆ ನೀಡಬೇಕು. 15 ನೇ ಹಣಕಾಸು ಆಯೋಗ 2021-26 ರ ಅವಧಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗಾಗಿ ಶಿಫಾರಸ್ಸು ಮಾಡಿರುವ 6000 ಕೋಟಿ ರು. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ, ಬಿಬಿಎಂಪಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ 3200 ಕೋಟಿ ರು. ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ.30% ( 960 ಕೋಟಿ ರು.) ಅನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯತಾ ಅಂತರ ನಿಧಿಯಾಗಿ ಒದಗಿಸಲು ಮನವಿ ಮಾಡಿದರು.

ಇದಲ್ಲದೆ 5ನೇ ಹಣಕಾಸು ಆಯೋಗವು 2020-21ರಲ್ಲಿ ಶಿಫಾರಸ್ಸು ಮಾಡಿದ್ದ 5495 ಕೋಟಿಯ ನಿರ್ದಿಷ್ಟ ಅನುದಾನಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಮೊತ್ತದ ಪಾಲು ದೊರೆತಿಲ್ಲವಾದ್ದರಿಂದ ಈ ಶಿಫಾರಸ್ಸನ್ನು ಒಪ್ಪಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು.

ಏಮ್ಸ್‌ಗೆ ಆಗ್ರಹ:

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 3000 ಕೋಟಿ ರು. ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿರಿಸಿದ್ದು, ಕೇಂದ್ರ ಸರ್ಕಾರ ತನ್ನ 2024-25ರ ಬಜೆಟ್‌ನಲ್ಲಿ ಅನುರೂಪದ ಅನುದಾನ ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನ ಹೆಚ್ಚಿಸಲು ಹಾಗೂ ಹೊಸ ಕಾರ್ಯಕ್ರಮಗಳನ್ನು ಯೋಜನೆಯಡಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡಲು ಮನವಿ ಮಾಡಲಾಗಿದೆ. ಜತೆಗೆ ರಾಯಚೂರು ಜಿಲ್ಲೆಗೆ ಏಮ್ಸ್ ಘೋಷಣೆ ಮಾಡುವಂತೆ ಪ್ರಧಾನಿ ಅವರಿಗೆ ಆಗ್ರಹಿಸಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ: ಆರ್.ಅಶೋಕ್

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಡಾ.ಜಿ.ಪರಮೇಶ್ವರ್‌, ಡಾ.ಎಚ್‌.ಸಿ.ಮಹದೇವಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿಎಂ ಬೇಡಿಕೆ ಪಟ್ಟಿ

- ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಅನುಮತಿ
- ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಬಿಡುಗಡೆ
- ಕಳಸಾ- ಬಂಡೂರಿ ಯೋಜನೆ ಸಂಬಂಧ ಅನುಮತಿಗೆ ಕೋರಿಕೆ
- ರಾಯಚೂರು ಜಿಲ್ಲೆಯಲ್ಲಿ ಏಮ್ಸ್‌ ಸ್ಥಾಪನೆ ಮಾಡಲು ಮನವಿ
- ಬೆಂಗಳೂರಿನಲ್ಲಿ 60 ಕಿ.ಮೀ. ಸುರಂಗ ಮಾರ್ಗಕ್ಕೆ ನೆರವು
- ಬೆಂಗಳೂರು ಮೆಟ್ರೋದ 3ನೇ ಹಂತದ ಯೋಜನೆಗೆ ಸಮ್ಮತಿ

Latest Videos
Follow Us:
Download App:
  • android
  • ios