ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿ ಎಡಗೈ ಶೇ.6 ಮತ್ತು ಬಲಗೈ ಜಾತಿಗಳಿಗೆ ಶೇ.6 ಮತ್ತು ಸ್ಪೃಶ್ಯ ಜಾತಿಗಳಿಗೆ ಶೇ.5 ಮೀಸಲು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನ್ಯಾ. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಮಾರ್ಪಾಟುಗಳೊಂದಿಗೆ ಸರ್ಕಾರ ಅಂಗೀಕರಿಸಿದೆ ಎಂದರು.

ಬೆಂಗಳೂರು (ಆ.20): ರಾಜ್ಯದಲ್ಲಿ ಆಗಸ್ಟ್ 19 ರಂದು ನಡೆದ ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗವು ಸಲ್ಲಿಸಿದ್ದ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ಅಂಗೀಕರಿಸಿ, ಎಡಗೈ ಸಂಬಂಧಿತ ಜಾತಿಗಳುಳ್ಳ 'ಎ' ಪ್ರವರ್ಗಕ್ಕೆ - ಶೇ. 6, ಬಲಗೈ ಸಂಬಂಧಿತ ಜಾತಿಗಳುಳ್ಳ 'ಬಿ' ಪ್ರವರ್ಗಕ್ಕೆ - ಶೇ. 6 ಹಾಗೂ 'ಸಿ' ಪ್ರವರ್ಗಕ್ಕೆ - ಶೇ.5 ರಷ್ಟು ಒಳಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದಿನಾಂಕ:01.08.2024 ರಂದು ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ 'ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಸಾಂವಿಧಾನಿಕವಾಗಿ ದತ್ತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಸಂವಿಧಾನದ ಅನುಚ್ಚೇದ 14, 15 ಮತ್ತು 16 ರಲ್ಲಿ ತಿಳಿಯಪಡಿಸಿರುವ ಸಮಾನತೆಯ ತತ್ವಕ್ಕೆ ಯಾವುದೇ ಚ್ಯುತಿ ಬಾರದಂತೆ ಅದರ ಮೂಲ ಆಶಯವನ್ನು ಸದೃಢಗೊಳಿಸುವ ದೃಷ್ಟಿಯಿಂದ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬಹುದು' ಎಂದು ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರವು ದಿನಾಂಕ 2024ರ ನವೆಂಬರ್ 12 ರಂದು ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಲಾಯಿತು. ಈ ಆಯೋಗವು ಸೂಕ್ತ ದತ್ತಾಂಶಗಳನ್ನು (Empirical Data) ಸಂಗ್ರಹಿಸಿ, ಒಳ ಮೀಸಲಾತಿ ನೀಡುವ ಕುರಿತು ಶಿಫಾರಸ್ಸುಗಳನ್ನು ಮಾಡಲು ಕೋರಲಾಯಿತು.

ಜಸ್ಟೀಸ್ ಹೆಚ್.ಎನ್. ನಾಗಮೋಹನ್‌ದಾಸ್ ಅವರ ಆಯೋಗವು ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಇದೇ ತಿಂಗಳು ಅಂದರೆ ಆ.01 ರಂದು ವರದಿಯನ್ನು ಸಲ್ಲಿಸಿತು. ಆಯೋಗವು ಪರಿಶಿಷ್ಟ ಜಾತಿಗಳಿಗೆ ಸೇರಿದ 1,05,09,871 ಜನರ ದತ್ತಾಂಶಗಳನ್ನು ಸಂಗ್ರಹಿಸಿದೆ. ಶೇ.93 ರಷ್ಟು ಪರಿಶಿಷ್ಟ ಜಾತಿಗಳ ಜನಸಂಖ್ಯೆಯು ಈ ಸಮೀಕ್ಷೆಗೆ ಲಭ್ಯವಾಗಿದೆ. ಸಚಿವ ಸಂಪುಟವು ಈ ವರದಿಯನ್ನು ಕೂಲಂಕಶವಾಗಿ ಪರಿಶೀಲಿಸಿದೆ. ನಂತರ ಆಗಸ್ಟ್ 19 ರಂದು ನಡೆದ ಸಚಿವ ಸಂಪುಟದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಅವರ ಆಯೋಗವು ಸಲ್ಲಿಸಿದ್ದ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಟುಗಳೊಂದಿಗೆ ಅಂಗೀಕರಿಸಿದ್ದೇವೆ ಎಂದು ತಿಳಿಸಿದರು.

ಎಡಗೈ ಸಂಬಂಧಿತ ಜಾತಿಗಳೆಂದು ಆಯೋಗವು ಗುರುತಿಸಿರುವ ಸಮುದಾಯಗಳಿಗೆ ಶೇ.6 ರಷ್ಟು ಒಳಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೇವೆ. ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಲಾಗಿದೆ ಎಂಬುದನ್ನು ಗಮನಿಸಿದ ಸಚಿವ ಸಂಪುಟವು ಈ ಜಾತಿಗಳನ್ನು ಬಲಗೈ ಸಂಬಂಧಿತ ಜಾತಿಗಳ ಜೊತೆ ಸೇರಿಸಿ ಬಲಗೈ ಸಂಬಂಧಿತ ಜಾತಿಗಳ ಸಮೂಹಕ್ಕೆ ಶೇ.6 ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೇವೆ.

ಇದರ ಜೊತೆಯಲ್ಲಿ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಗುಂಪುಗಳಲ್ಲಿನ 4,74,954 ಜನಸಂಖ್ಯೆಯನ್ನು ಎಡಗೈ ಸಂಬಂಧಿತ ಮತ್ತು ಬಲಗೈ ಸಂಬಂಧಿತ ಜಾತಿಗಳ ಜೊತೆ ಸಮಾನವಾಗಿ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ.

Scroll to load tweet…

ಸ್ಪೃಶ್ಯ ಜಾತಿಗಳ ಗುಂಪಿಗೆ ಜಸ್ಟೀಸ್ ನಾಗಮೋಹನ್ ದಾಸ್ ಅವರು ಶೇ. 4 ರಷ್ಟು ಮೀಸಲಾತಿಯನ್ನು ಶಿಫಾರಸ್ಸು ಮಾಡಿದ್ದರು. ಹಾಗೆಯೇ 59 ಜಾತಿಗಳ 5,22,099 ಜನಸಂಖ್ಯೆಯನ್ನು ಪ್ರವರ್ಗ-ಎ ಎಂದು ತೀರ್ಮಾನಿಸಿ ಶೇ.1 ರಷ್ಟು ಮೀಸಲಾತಿಯನ್ನು ಶಿಫಾರಸ್ಸು ಮಾಡಿದ್ದರು. ಕೆಲವು ತಾಂತ್ರಿಕ ಕಾರಣಗಳಿಂದ ಈ ಎರಡೂ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಶೇ.5 ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ.

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟವು ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ಹಾಗೂ ಎಡಗೈ ಸಂಬಂಧಿತ ಜಾತಿಗಳುಳ್ಳ 'ಎ' ಪ್ರವರ್ಗಕ್ಕೆ - ಶೇ. 6, ಬಲಗೈ ಸಂಬಂಧಿತ ಜಾತಿಗಳುಳ್ಳ ಬಿ ಪ್ರವರ್ಗಕ್ಕೆ - ಶೇ. 6 ಹಾಗೂ ಸಿ ಪ್ರವರ್ಗಕ್ಕೆ - ಶೇ.5 ರಷ್ಟು ಒಳಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ. ಪರಿಶಿಷ್ಟ ಜಾತಿಗಳಲ್ಲಿರುವ ಎಲ್ಲಾ 101 ಜಾತಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇನ್ನಿತರೆ ವಿಷಯಗಳಲ್ಲಿ ಅವಕಾಶಗಳನ್ನು ಒದಗಿಸುವಲ್ಲಿ ಸಮಾನತೆ ಮತ್ತು ನ್ಯಾಯ ಸಮ್ಮತತೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಈ ಮಾರ್ಪಾಡುಗಳನ್ನು ಮಾಡಲಾಗಿದೆ. ಈ ರೀತಿ ನಿರ್ಧಾರ ಮಾಡುವಾಗ ಸಚಿವ ಸಂಪುಟವು ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನಮೂದಿಸಲಾದ ತತ್ವಗಳನ್ನು ಗಮನದಲ್ಲಿಟ್ಟುಕೊಂಡಿದೆ.

  • ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆಯನ್ನು ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿಕೊಂಡು, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚಿಸಲು ತೀರ್ಮಾನಿಸಿದ್ದೇವೆ.
  • ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಹಾಗೂ ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ.
  • ಇದೇ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ.

* ಸರ್ಕಾರವು ಈಗ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಮಾರ್ಪಾಡುಗಳ ಅಗತ್ಯತೆ ಕಂಡುಬಂದರೆ ಅವುಗಳನ್ನು ಮುಂದಿನ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ವರದಿಯನ್ನು ಮೇಲೆ ಪ್ರಸ್ತಾಪಿಸಿದ ಮಾರ್ಪಾಟುಗಳೊಂದಿಗೆ ಅಂಗೀಕರಿಸಿದೆ. ನಮ್ಮ ಈ ತೀರ್ಮಾನವು ಒಳ ಮೀಸಲಾತಿ ಕುರಿತ ದಶಕಗಳ ಹೋರಾಟಕ್ಕೆ ನ್ಯಾಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇವೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕವು ಸಾಮಾಜಿಕ ನ್ಯಾಯದ ವಿಚಾರದಲ್ಲೂ ಮುಂಚೂಣಿಯಲ್ಲಿದೆ ಎಂಬುದನ್ನು ನಮ್ಮ ಸರ್ಕಾರವು ಸಾಬೀತು ಮಾಡಿದೆ.