Karnataka CM: ಡಿಕೆಶಿ ಮಣಿಯುತ್ತಿಲ್ಲ, ಸಿದ್ದು ಬಿಡುತ್ತಿಲ್ಲ, ಕಾಂಗ್ರೆಸ್ ಸಿಎಂ ಕಗ್ಗಂಟು 4ನೇ ದಿನಕ್ಕೆ!
ಕರ್ನಾಟಕ ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ ಹುದ್ದೆ ದಂಗಲ್’ 4ನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ 3 ದಿನಗಳಿಂದ ಬೆಂಗಳೂರು ಹಾಗೂ ದೆಹಲಿಯಲ್ಲಿ ಸರಣಿ ಸಭೆ ಮತ್ತು ಎಐಸಿಸಿ ಅಧ್ಯಕ್ಷರ ಮಧ್ಯಸ್ಥಿಕೆ ಮಾತುಕತೆಯಾದರೂ ಬಗೆಹರಿದಿಲ್ಲ
ಬೆಂಗಳೂರು (ಮೇ.17) : ಕರ್ನಾಟಕ ಕಾಂಗ್ರೆಸ್‌ನ ದಿಗ್ಗಜ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ ಹುದ್ದೆ ದಂಗಲ್’ 4ನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ 3 ದಿನಗಳಿಂದ ಬೆಂಗಳೂರು ಹಾಗೂ ದೆಹಲಿಯಲ್ಲಿ ಸರಣಿ ಸಭೆ ಮತ್ತು ಎಐಸಿಸಿ ಅಧ್ಯಕ್ಷರ ಮಧ್ಯಸ್ಥಿಕೆ ಮಾತುಕತೆಯಾದರೂ ಬಗೆಹರಿದಿಲ್ಲ. 4ನೇ ದಿನವಾದ ಬುಧವಾರ ದೆಹಲಿಯಲ್ಲಿ ಖುದ್ದು ವರಿಷ್ಠ ರಾಹುಲ್ ಗಾಂಧಿ ಸಮ್ಮುಖದಲ್ಲಿ ಉಭಯ ನಾಯಕರ ಸಭೆ ನಡೆಯಲಿದ್ದು, ಈ ಹೈವೋಲ್ಟೇಜ್ ಸಭೆಯಲ್ಲಾದರೂ ಕಗ್ಗಂಟು ಪರಿಹಾರವಾಗುವುದೇ ಎಂಬ ಕುತೂಹಲ ಮೂಡಿದೆ.
ದೆಹಲಿಯಲ್ಲಿ ಮಂಗಳವಾರ ಇಡೀ ದಿನ ಸರಣಿ ಸಭೆ ನಡೆದಿದ್ದು, ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅವರ ಮನದಾಳ ಅರಿಯುವ ಪ್ರಯತ್ನ ಮಾಡಿದರು.
Karnataka CM: ಸಿಎಂ ಹುದ್ದೆಗಾಗಿ ಡಿಕೆಶಿ, ಸಿದ್ದು ಅಭಿಮಾನಿಗಳ ಹರಕೆ
ಡಿಕೆಶಿ ಬಿಗಿ ಪಟ್ಟು ಏನು?
- 5 ವರ್ಷ ನನ್ನನ್ನೇ ಸಿಎಂ ಮಾಡಿ. ಇಲ್ಲವಾದರೆ ಯಾವ ಹುದ್ದೆಯೂ ಬೇಡ
- ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ, ಪಕ್ಷದ ವಿರುದ್ಧ ಬಂಡೇಳಲ್ಲ
- 30 ವರ್ಷ ಬಳಿಕ ಒಕ್ಕಲಿಗರು, ದಲಿತರು, ಲಿಂಗಾಯತರು ಪಕ್ಷದತ್ತ ಬಂದಿದ್ದಾರೆ
- ಲೋಕಸಭೆ ಚುನಾವಣೆ ಹತ್ತಿರದಲ್ಲಿರುವಾಗ ಅವರನ್ನು ಕಳೆದುಕೊಳ್ಳುತ್ತೀರಾ?
- 2006ರಲ್ಲಿ ಪಕ್ಷಕ್ಕೆ ಸೇರಿ ಸಿದ್ದು ನಿಮ್ಮನ್ನು(ಖರ್ಗೆ) ರಾಷ್ಟ್ರ ರಾಜಕಾರಣಕ್ಕೆ ಕಳಿಸಿದರು
- ಪಕ್ಷ ಸಂಘಟನೆಗೆ ಅವರ ಕೊಡುಗೆ ಏನೂ ಇಲ್ಲ. ನಾನು ಸಂಪನ್ಮೂಲ ಹಂಚಿದ್ದೇನೆ
- ಕೇಂದ್ರ ಸರ್ಕಾರ ದಾಳಿ ನಡೆಸಿದರೂ ಜಗ್ಗದೆ ಪಕ್ಷದ ಪರವಾಗಿ ದುಡಿದಿದ್ದೇನೆ
ಸಿದ್ದು ಬಿಗಿ ಪಟ್ಟು ಏನು?
- ರಾಜ್ಯ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಮೂಡಲು ನಾನು ಕಾರಣ
- ಜನರು ನನ್ನ ಐದು ವರ್ಷದ ಆಳ್ವಿಕೆಯನ್ನು ಹೋಲಿಸಿ ನೋಡಿದ್ದು ಕಾರಣ
- ನನ್ನ ಅವಧಿಯ ಕಾರ್ಯಕ್ರಮಗಳಿಂದಾಗಿ ಕಾಂಗ್ರೆಸ್ಸಿಗೆ ವರ್ಚಸ್ಸು ಬಂದಿದೆ
- ಸರ್ವೇಯಲ್ಲೂ ನನ್ನ ಹೆಸರಿದೆ, ಹಾಲಿ ಶಾಸಕರು ಬೆಂಬಲವೂ ನನಗೇ ಇದೆ
- ಇದೇ ಕೊನೆಯ ಚುನಾವಣೆ ಎಂದು ಪ್ರಚಾರದ ಸಂದರ್ಭದಲ್ಲಿ ಹೇಳಿದ್ದೇನೆ
- ಹೀಗಾಗಿ ಸಿಎಂ ಹುದ್ದೆ ನೀಡಿ, ಇಲ್ಲದಿದ್ದರೆ ಅಹಿಂದ ಬೆಂಬಲಕ್ಕೆ ಧಕ್ಕೆ ಬರುತ್ತದೆ
- ಲೋಕಸಭೆ ಚುನಾವಣೆ ಸಮೀಪಿಸಿದೆ. ವೋಟ್ ಬ್ಯಾಂಕ್‌ಗೆ ಘಾಸಿ ಮಾಡಬೇಡಿ
ಖರ್ಗೆ ಮುಂದೆ ಡಿಕೆಶಿ ಏನೆಂದರು?:
ಮೊದಲಿಗೆ ಡಿ.ಕೆ. ಶಿವಕುಮಾರ್(DK Shivakumar) ಅವರೊಂದಿಗೆ ಖರ್ಗೆ(Mallikarjun kharge) ಚರ್ಚಿಸಿದರು. ಈ ವೇಳೆ ಶಿವಕುಮಾರ್ ಅವರು, ‘ಮುಖ್ಯಮಂತ್ರಿಯಾಗಲು ತಮಗಿರುವ ಅರ್ಹತೆ ಕುರಿತು ಸಾದ್ಯಂತವಾಗಿ ವಿವರಿಸಿ ತಮಗೆ ಐದು ವರ್ಷ ಪರಿಪೂರ್ಣ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಇದಾಗದಿದ್ದರೆ ನನಗೆ ಬೇರೆ ಯಾವ ಹುದ್ದೆಯೂ ಬೇಡ. ಕೇವಲ ಶಾಸಕನಾಗಿ ಮುಂದುವರೆಯುವೆ. ಹಾಗಂತ ಪಕ್ಷದ ವಿರುದ್ಧ ಬಂಡೇಳುವುದಿಲ್ಲ. ಬ್ಲ್ಯಾಕ್‌ಮೇಲ್ ಸಹ ಮಾಡುವುದಿಲ್ಲ’ ಎಂದು ಪಟ್ಟು ಹಿಡಿದರು ಎನ್ನಲಾಗಿದೆ.
‘ಈ ಬಾರಿಯ ಚುನಾವಣೆಯಲ್ಲಿ ಕಳೆದ 30 ವರ್ಷದಿಂದ ಪಕ್ಷದಿಂದ ವಿಮುಖವಾಗಿದ್ದ ಒಕ್ಕಲಿಗ ಹಾಗೂ ದಲಿತ ಮತ ಬ್ಯಾಂಕ್(Dalit and vokkaliga vote bank) ಮತ್ತೆ ಕಾಂಗ್ರೆಸ್‌ಗೆ ಒಲಿದಿದೆ. ದಲಿತರು ನಿಮ್ಮ (ಖರ್ಗೆ) ಮುಖ ನೋಡಿ ಕಾಂಗ್ರೆಸ್ ಪರ ಬಂದಿದ್ದರೆ ಒಕ್ಕಲಿಗ ಸಮುದಾಯ ನನ್ನ ಮುಖ ನೋಡಿ ಕಾಂಗ್ರೆಸ್‌ಗೆ ಬಂದಿದೆ. ಇದರ ಜತೆಗೆ, ಬೇರೆ ಕಾರಣಗಳಿಗಾಗಿ ಲಿಂಗಾಯತ ಸಮುದಾಯವೂ ಕಾಂಗ್ರೆಸ್‌ನತ್ತ ಬಂದಿದೆ. ಲೋಕಸಭಾ ಚುನಾವಣೆ ಮುಂದಿನ ಸವಾಲು ಆಗಿರುವ ಈ ಹಂತದಲ್ಲಿ ಒಕ್ಕಲಿಗ, ದಲಿತ ಹಾಗೂ ಲಿಂಗಾಯತ ಸಮುದಾಯವನ್ನು ಕಳೆದುಕೊಳ್ಳಬೇಕೇ ಅಥವಾ ಅವರನ್ನು ಜತೆಗಿಟ್ಟುಕೊಳ್ಳಬೇಕೇ ಯೋಚಿಸಿ’ ಎಂದರೆನ್ನಲಾಗಿದೆ.
ಅಲ್ಲದೆ, ‘ಕಳೆದ ಬಾರಿ ಪಕ್ಷ ಚುನಾವಣೆಯಲ್ಲಿ ವೈಫಲ್ಯ ಕಂಡಾಗ ಸಿದ್ದರಾಮಯ್ಯ (Siddaramaiah)ಹಾಗೂ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್(Dinesh gundurao) ರಾಜೀನಾಮೆ ನೀಡಿದ ಹಂತದಲ್ಲಿ ಪಕ್ಷದ ಹುದ್ದೆ ಪಡೆದು ಭಾರಿ ಬಹುಮತದ ಗೆಲುವ ಕಾಣುವ ಹಂತಕ್ಕೆ ಪಕ್ಷವನ್ನು ಸಂಘಟಿಸಿ, ಬೆಳೆಸಿದ್ದೇನೆ. ಕೇಂದ್ರದ ಬಿಜೆಪಿ ಸರ್ಕಾರ ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಿದರೂ, ಯಾವುದಕ್ಕೂ ಜಗ್ಗದೆ ಪಕ್ಷದ ಪರ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆ ಹಾಗೂ ಅನಂತರ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗಾಗಿ ಸಂಪನ್ಮೂಲ ಸಂಗ್ರಹ ಹಾಗೂ ಹಂಚಿಕೆ ಮಾಡಿದ್ದೇನೆ’ ಎಂದರೆಂದು ತಿಳಿದುಬಂದಿದೆ.
ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ದೂರುಗಳ ಸುರಿಮಳೆ ಸುರಿಸಿದ ಶಿವಕುಮಾರ್, ‘2006ರಲ್ಲಿ ಪಕ್ಷಕ್ಕೆ ಸೇರಿದ ಆರಂಭದಲ್ಲೇ ನಿಮ್ಮನ್ನು ರಾಷ್ಟ್ರೀಯ ರಾಜಕಾರಣಕ್ಕೆ ತೆರಳುವಂತೆ ಮಾಡಿದ ಸಿದ್ದರಾಮಯ್ಯ ಅವರು ಪಕ್ಷ ಸಂಘಟನೆಗೆ ಹೆಚ್ಚು ಕೊಡುಗೆ ನೀಡಿಲ್ಲ. ಆದರೂ 10 ವರ್ಷ ಪ್ರತಿಪಕ್ಷ ನಾಯಕ, 5 ವರ್ಷ ಮುಖ್ಯಮಂತ್ರಿ ಹುದ್ದೆ ಅನುಭವಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ, ಪಕ್ಷದ ವಿರುದ್ಧವಾಗುವಂತಹ ತೀರ್ಮಾನಗಳನ್ನು ಕೈಗೊಂಡಿದ್ದರು. ಈಗ ಆ ಸಮುದಾಯಗಳು ಪಕ್ಷದ ಪರ ಬಂದಿವೆ. ಅದನ್ನು ಉಳಿಸಿಕೊಳ್ಳಬೇಕು’ ಎಂದು ವಾದಿಸಿದರೆನ್ನಲಾಗಿದೆ.
ಸಿದ್ದು ವಾದವೇನು?:
ಡಿ.ಕೆ. ಶಿವಕುಮಾರ್ ಅವರ ನಂತರ ಸಿದ್ದರಾಮಯ್ಯ ಅವರು ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸುಮಾರು ಒಂದೂವರೆ ತಾಸು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಬೆಂಬಲ ತಮ್ಮೊಂದಿಗೆ ಇರುವ ಕಾರಣ ಮುಖ್ಯಮಂತ್ರಿ ಹುದ್ದೆಯನ್ನು ತಮಗೆ ನೀಡಬೇಕು ಎಂದು ವಾದಿಸಿದರು ಎನ್ನಲಾಗಿದೆ.
‘ಲೋಕಸಭಾ ಚುನಾವಣೆ ಸಮೀಪವಿದೆ. ಈ ಹಂತದಲ್ಲಿ ಪಕ್ಷದ ಜಾತಿ ಸಮೀಕರಣಕ್ಕೆ ಹಾಗೂ ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್‌ಗೆ ಘಾಸಿಯಾಗುವಂತಹ ನಿರ್ಧಾರ ತೆಗೆದುಕೊಳ್ಳಬಾರದು. ಈ ಬಾರಿಯ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಮೂಡಲು ಶ್ರೀಸಾಮಾನ್ಯರು ಬಿಜೆಪಿ ಆಡಳಿತವನ್ನು ಅದಕ್ಕೆ ಹಿಂದಿನ ನನ್ನ ಐದು ವರ್ಷದ ಆಡಳಿತದ ಜತೆ ಹೋಲಿಸಿಕೊಂಡಿದ್ದು ಕಾರಣ. ನನ್ನ ಅವಧಿಯ ಕಾರ್ಯಕ್ರಮಗಳು ಈಗಲೂ ಜನಪ್ರಿಯವಾಗಿವೆ. ಇದರಿಂದಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ವರ್ಚಸ್ಸು ಬಂದಿದೆ’ ಎಂದರು ಎಂದು ಹೇಳಲಾಗಿದೆ.
ಅಲ್ಲದೆ, ‘ಈ ಬಾರಿಯ ಮುಖ್ಯಮಂತ್ರಿ ಹುದ್ದೆಗೆ ಯಾರು ಅರ್ಹ ಎಂದು ನಡೆಸಿದ ಸರ್ವೇಯಲ್ಲಿ ಶೇ. 42ಕ್ಕೂ ಹೆಚ್ಚು ಮಂದಿ ನನ್ನ ಹೆಸರನ್ನೇ ಹೇಳಿದ್ದಾರೆ. ಹಾಲಿ ಶಾಸಕರ ಬೆಂಬಲವೂ ನನಗಿದೆ. ಈ ಬಾರಿಯ ಚುನಾವಣೆ ನನ್ನ ಕಡೆಯ ಚುನಾವಣೆ ಎಂದು ಹೇಳಿದ್ದೆ. ಚುನಾವಣಾ ರಾಜಕೀಯದಿಂದ ನಿವೃತ್ತನಾಗುವ ಮಾತು ಹೇಳಿದ್ದೇನೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆ ನನಗೆ ನೀಡಬೇಕು. ಇಲ್ಲದಿದ್ದರೆ ಅಹಿಂದ ವರ್ಗದ ಬೆಂಬಲಕ್ಕೆ ಧಕ್ಕೆ ಬರುತ್ತದೆ’ ಎಂದು ವಾದಿಸಿದರು ಎನ್ನಲಾಗಿದೆ.
Karnataka CM: ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಒಕ್ಕಲಿಗರ ಸಂಘ ಆಗ್ರಹ
ರಾಹುಲ್ ಜತೆ ಚರ್ಚಿಸುವೆ- ಖರ್ಗೆ ಉತ್ತರ:
‘ಉಭಯ ನಾಯಕರ ವಾದ ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ರಾಹುಲ್ ಗಾಂಧಿ ಅವರೊಂದಿಗೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಿರುದ್ಧವಾದ ನಿರ್ಣಯಗಳನ್ನು ಕೈಗೊಳ್ಳಬೇಡಿ’ ಎಂದು ಸಲಹೆ ನೀಡಿದರು ಎನ್ನಲಾಗಿದೆ. ಹೀಗಾಗಿ ಬುಧವಾರ ಮತ್ತೊಂದು ಸುತ್ತಿನ ಸಭೆಗಳು ರಾಹುಲ್ ಗಾಂಧಿ ಅವರ ಸಮ್ಮುಖ ನಡೆಯಲಿದ್ದು, ಅಲ್ಲಿ ಈ ಕಗ್ಗಂಟಿಗೆ ಪರಿಹಾರ ದೊರೆಯುವುದೇ ಕಾದು ನೋಡಬೇಕು.