ಮುಂದಿನ ನವೆಂಬರ್-ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಭವಿಷ್ಯ ನುಡಿದಿದ್ದಾರೆ. 

ಮೈಸೂರು (ಜೂ.16): ಮುಂದಿನ ನವೆಂಬರ್, ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯುವುದು ನಿಶ್ಚಿತ. ಡಿ.ಕೆ.ಶಿವಕುಮಾರ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಭವಿಷ್ಯ ನುಡಿದಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಪಕ್ಷದಲ್ಲಿ ಐವತ್ತು ವರ್ಷಗಳ ಕಾಲ ಕೆಲಸ ಮಾಡಿರುವ ನನಗೆ ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಗೊತ್ತಿದೆ ಎಂದರು.

ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬದಲಾವಣೆ ಆಗುವುದು ಈಗಾಗಲೇ ನಿರ್ಣಯವಾಗಿದೆ. ಹಾಗಾಗಿಯೇ ಇತ್ತೀಚೆಗೆ ದಿಲ್ಲಿಯಿಂದ ಬರುವಾಗ ಸಿದ್ದರಾಮಯ್ಯ ಮುಖ ಮುಚ್ಚಿಕೊಂಡು ಬಂದರು ಎಂದು ವ್ಯಂಗ್ಯವಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕು ಎಂಬ ಆಸೆ ಇತ್ತು. ಆದರೆ, ಆರ್‌ಸಿಬಿ ವಿಜಯೋತ್ಸವದ ವೇಳೆ ಅವರು ಎಲ್ಲಾ ಕುಲಗೆಡಿಸಿ ಬಿಟ್ಟರು. ಸಿಎಂಗೆ ಜವಾಬ್ದಾರಿಯೇ ಇಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ಕಾಲ್ತುಳಿತ 3.30ಕ್ಕೆ ನಡೆದರೆ, ನನಗೆ 5.30ಕ್ಕೆ ಗೊತ್ತಾಗುತ್ತದೆ ಎನ್ನುತ್ತಾರೆ ಎಂದು ಟೀಕಿಸಿದರು.