Asianet Suvarna News Asianet Suvarna News

ನನ್ನ ಸಲಹೆ ನಿರ್ಲಕ್ಷ್ಯ ಮಾಡಿ ಕ್ಯಾಕ್ಟಸ್ ಗುಂಪಿನ ಮಾತು ಕೇಳಿ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ: ಎಚ್‌ ವಿಶ್ವನಾಥ

ಕರ್ನಾಟಕ ಏಕೀಕರಣವಾದ ನಂತರ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ. ಚಂಗಲರಾಯರೆಡ್ಡಿ ಅವರಿಂದ ಹಿಡಿದು ಈವರೆಗೆ ಯಾರು ಆ ಸ್ಥಾನದ ಘನತೆ ಹಾಳು ಮಾಡಿರಲಿಲ್ಲ, ಆದರೆ ಸಿದ್ದರಾಮಯ್ಯನವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯಂತ ಉನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನದ ಘನತೆ ಕಳೆದಿದ್ದಾರೆ ಎಂದು ಎಂಎಲ್ಸಿ ಎಚ್ ವಿಶ್ವನಾಥ ಟೀಕಿಸಿದರು

muda case mlc h vishwanath reacts about cm siddaramaiah at mysuru rav
Author
First Published Sep 26, 2024, 6:07 AM IST | Last Updated Sep 26, 2024, 7:49 AM IST

ಕೆಆರ್‌ ನಗರ (ಸೆ.26): ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಸನ್ ಗೆ ಅನುಮತಿ ನೀಡಿದ್ದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದು ತನಿಖೆಗೆ ಅವಕಾಶ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಚುನಾಯಿತ ಜನಪ್ರತಿನಿಧಿಗಳು ತಾವು ಏನು ಮಾಡಿದರು ನಡೆಯುತ್ತದೆ ಎಂಬುದಕ್ಕೆ ಉತ್ತಮ ಪಾಠವಾಗಿದೆ ಎಂದರು.

'ಬಿಜೆಪಿಯವರು ನಿಯತ್ತಾಗಿ ಇದ್ದಾರಾ?' : ಮಧು ಬಂಗಾರಪ್ಪ

ಹಗರಣ ಹೊರಬಂದ ಸಮಯದಲ್ಲಿ ನಾನು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿ ನೀವು ಅಕ್ರಮವಾಗಿ ಪಡೆದುಕೊಂಡಿರುವ ನಿವೇಶನವನ್ನು ವಾಪಸ್ಸು ಮಾಡಿ ತಮ್ಮ ಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದೆ, ಆದರೆ ಅಂದು ಅವರು ನಮ್ಮ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ಇಂದು ಈ ಸ್ಥಿತಿಗೆ ತಲುಪಿದ್ದಾರೆ ಎಂದರು. ತಮ್ಮ ಸುತ್ತಮುತ್ತ ಇದ್ದ ಕ್ಯಾಕ್ಟಸ್ ಗುಂಪಿನ ದೆಸೆಯಿಂದ ಮುಖ್ಯಮಂತ್ರಿಗಳಿಗೆ ಇಂದು ಈ ಪರಿಸ್ಥಿತಿ ಬಂದಿದ್ದು, ಅವರು ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಲು ರಾಜೀನಾಮೆ ನೀಡುವ ಮಾರ್ಗವೊಂದೆ ಉಳಿದಿರುವ ದಾರಿ ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ಏಕೀಕರಣವಾದ ನಂತರ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ. ಚಂಗಲರಾಯರೆಡ್ಡಿ ಅವರಿಂದ ಹಿಡಿದು ಈವರೆಗೆ ಯಾರು ಆ ಸ್ಥಾನದ ಘನತೆ ಹಾಳು ಮಾಡಿರಲಿಲ್ಲ, ಆದರೆ ಸಿದ್ದರಾಮಯ್ಯನವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯಂತ ಉನ್ನತ ಹುದ್ದೆಯಾದ ಮುಖ್ಯಮಂತ್ರಿ ಸ್ಥಾನದ ಘನತೆ ಕಳೆದಿದ್ದಾರೆ ಎಂದು ಅವರು ಜರಿದರು.

ಅಭಿವೃದ್ಧಿಯ ಹರಿಕಾರ ಮತ್ತು ಹಿಂದುಳಿದ ವರ್ಗದ ನಾಯಕ ಎಂಬ ಮುಖವಾಡದೊಂದಿಗೆ ಅಧಿಕಾರದ ಗದ್ದುಗೆ ಏರಿದ ಅವರು, ಇಂದು ಅವರೆಲ್ಲರ ಗೌರವವನ್ನು ಮಣ್ಣು ಪಾಲು ಮಾಡಿದ್ದು, ಈಗಲಾದರೂ ತಮ್ಮ ಹಠ ಬಿಟ್ಟು ರಾಜೀನಾಮೆ ನೀಡಿ ರಾಜ್ಯದ ಗೌರವ ಕಾಪಾಡಬೇಕೆಂದು ಸಲಹೆ ನೀಡಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಾನೂನು ಎಂಬುದು ರಾಷ್ಟ್ರಪತಿಯಿಂದ ಹಿಡಿದು ಸಾಮಾನ್ಯ ಮನುಷ್ಯನಿಗೂ ಒಂದೇ ಆಗಿದ್ದು, ಇದನ್ನು ಮುಖ್ಯಮಂತ್ರಿಗಳು ಅರಿತು ಕೂಡಲೇ ಪದತ್ಯಾಗ ಮಾಡಿ ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ಜನರು ಅವರನ್ನು ಸಾರ್ವಜನಿಕವಾಗಿ ಟೀಕಿಸುತ್ತಾರೆ, ಹಾಗಾಗಿ ಅವರು ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಹೇಳಿದರು.

ಅಧಿಕಾರದ ಚುಕ್ಕಾಣಿ ಹಿಡಿದು ಜನರ ಹಿತ ಕಾಪಾಡುವವರು ತಮ್ಮ ಸುತ್ತಮುತ್ತ ಸಜ್ಜನರು ಮತ್ತು ಉತ್ತಮ ಸಲಹೆ ನೀಡುವವರನ್ನು ಇಟ್ಟುಕೊಳ್ಳಬೇಕು, ಆದರೆ ಇದ್ಯಾವುದನ್ನು ಮಾಡದ ಮುಖ್ಯಮಂತ್ರಿಗಳು ತಮಗಿಷ್ಟ ಬಂದಂತೆ ನಡೆದುಕೊಂಡಿದ್ದು, ಇದಕ್ಕೆ ಕಾನೂನು ಮತ್ತು ಕಾಲವೇ ತಕ್ಕ ಉತ್ತರ ನೀಡಿದೆ ಎಂದು ಟೀಕಿಸಿದರು.

Muda case: ಬಿಜೆಪಿ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ - ಹರೀಶ್ ಪೂಂಜಾ ಭಾಷಣ

ಮಂಗಳವಾರ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ನಾನು ಜನತಾಂತ್ರಿಕ ವ್ಯವಸ್ಥೆಯಲ್ಲಿ ಅತ್ಯಂತ ಗೌರವದಿಂದ ಸ್ವಾಗತಿಸಲಿದ್ದು, ಮುಂದೆ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಮತ್ತು ಅಕ್ರಮ ಮಾಡುವವರಿಗೆ ಇದು ದೊಡ್ಡ ಪಾಠವಾಗಿದ್ದು, ಈ ಐತಿಹಾಸಿಕ ತೀರ್ಮಾನ ನ್ಯಾಯಾಂಗದ ಮೇಲೆ ಜನ ಸಾಮಾನ್ಯರು ಹೆಚ್ಚು ನಂಬಿಕೆ ಇಡುವಂತೆ ಮಾಡಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು

Latest Videos
Follow Us:
Download App:
  • android
  • ios