Asianet Suvarna News Asianet Suvarna News

ಡ್ರಗ್ಸ್ ಮಾಫಿಯಾಕ್ಕೆ ಸಿಎಂ ಬಿಎಸ್‌ವೈ ಖಡಕ್ ವಾರ್ನಿಂಗ್..!

ಡ್ರಗ್ಸ್‌ ದಂಧೆ ವಿರುದ್ಧ ದೇಶದಲ್ಲಿ ಮೊದಲ ಬಾರಿಗೆ ಬಿಗಿಯಾದ ಕ್ರಮ ತೆಗೆದುಕೊಂಡಿದ್ದೇವೆ. ಡ್ರಗ್ಸ್‌ನಿಂದ ಯುವಕರು, ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಡಕ್ ವಾರ್ನಿಂಗ್ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Karnataka CM BS Yediyurappa warns Strict action against Drugs Mafia
Author
Bengaluru, First Published Sep 8, 2020, 8:23 AM IST

ಬೆಂಗಳೂರು(ಸೆ.08): ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹಬ್ಬಿರುವ ಮಾದಕವಸ್ತು ಜಾಲವನ್ನು ಸದೆಬಡಿಯದೆ ವಿರಮಿಸುವುದಿಲ್ಲ ಎಂಬ ಕಠೋರ ಸಂದೇಶ ರವಾನಿಸಿದ್ದಾರೆ.

ಕನ್ನಡ ಚಲನಚಿತ್ರ ರಂಗದ ಅನೇಕರು ಸೇರಿದಂತೆ ಅತಿಗಣ್ಯರ ವಲಯದಲ್ಲಿ ಕಂಪನ ಉಂಟು ಮಾಡಿರುವ ಮಾದಕ ದ್ರವ್ಯ ಪ್ರಕರಣದ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಯಾರೇ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಸಮರ್ಪಕ ತನಿಖೆ ನಡೆಸಲಾಗುವುದು ಎಂದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್‌ ದಂಧೆ ವಿರುದ್ಧ ದೇಶದಲ್ಲಿ ಮೊದಲ ಬಾರಿಗೆ ಬಿಗಿಯಾದ ಕ್ರಮ ತೆಗೆದುಕೊಂಡಿದ್ದೇವೆ. ಡ್ರಗ್ಸ್‌ನಿಂದ ಯುವಕರು, ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕೊನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಒತ್ತಡಕ್ಕೆ ಮಣಿಯಲ್ಲ-ಬೊಮ್ಮಾಯಿ:

ಇದೇ ವಿಷಯದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಡ್ರಗ್‌ ಜಾಲಕ್ಕೆ ಸಂಬಂಧಪಟ್ಟಂತೆ ಹಲವಾರು ಮಾಹಿತಿಗಳು ತನಿಖೆ ವೇಳೆ ಲಭ್ಯವಾಗಿದ್ದು, ಪ್ರಕರಣ ಸಂಬಂಧ ಯಾವುದೇ ಪ್ರಭಾವ, ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದರು.

ಈಗಾಗಲೇ ಪೊಲೀಸರು ಡ್ರಗ್‌ ಜಾಲವನ್ನು ಭೇದಿಸುತ್ತಿದ್ದಾರೆ, ನಿತ್ಯ ಹೊಸ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಪೊಲೀಸರು ಮುಕ್ತವಾಗಿ ವಿಚಾರಣೆ ಮಾಡುತ್ತಿರುವ ಪರಿಣಾಮ ಹಲವಾರು ಜನರು ಸಿಕ್ಕಿ ಬೀಳುತ್ತಿದ್ದಾರೆ ಎಂದರು.

ಡ್ರಗ್ಸ್ ರುಚಿ ಹೇಗಿದೆ ಅಂತ ರಾಗಿಣಿನ ಕೇಳ್ತಿದ್ದಾರೆ ನೆಟಿಜನ್ಸ್!

ಪ್ರಕರಣ ಸಂಬಂಧ ಲಭ್ಯವಾಗಿರುವ ಹಲವಾರು ಮಾಹಿತಿಗಳನ್ನು ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ. ರಾಜ್ಯಕ್ಕೆ ಹೊರ ರಾಜ್ಯಗಳಿಂದ ವಿವಿಧ ಬಗೆಯ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ. ಆದ್ದರಿಂದ ರಾಜ್ಯದ ಗಡಿ ಭಾಗದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠರಿಗೆ ಗಡಿಭಾಗದಲ್ಲಿರುವ ಚೆಕ್‌ ಪೋಸ್ಟ್‌ಗಳು, ಹೆದ್ದಾರಿಗಳಲ್ಲಿ ತಪಾಸಣೆ ಬಿಗಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ಹಲವಾರು ನಿರ್ದೇಶನ, ಸೂಚನೆಗಳನ್ನು ನೀಡಲಾಗಿದೆ. ವಿಶೇಷವಾಗಿ ರಾಜ್ಯಗಳ ಹಾಗೂ ಗಡಿ ರಾಜ್ಯಗಳ ಪೊಲೀಸ್‌ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇರುವಂತೆ ಡಿಜಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಮುಖ್ಯಮಂತ್ರಿಯವರಿಗೆ ಮಾಹಿತಿ:

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಗೆ ಆಗಮಿಸಿದ ಸಚಿವ ಬಸವರಾಜ ಬೊಮ್ಮಾಯಿ, ಡ್ರಗ್ಸ್‌ ದಂಧೆ ಪ್ರಕರಣದ ಸಂಬಂಧ ಈವರೆಗೆ ನಡೆದಿರುವ ವಿಚಾರಣೆ, ಲಭ್ಯವಾಗಿರುವ ಮಾಹಿತಿ, ಪೊಲೀಸರು ಕೈಗೊಂಡಿರುವ ಕ್ರಮಗಳು, ಈವರೆಗೆ ಬಂಧಿತರಾಗಿರುವ ವ್ಯಕ್ತಿಗಳು, ಅವರ ಹಿನ್ನೆಲೆ, ಮಾದಕ ವಸ್ತುಗಳ ಜಾಲ ಸೇರಿದಂತೆ ಹಲವಾರು ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಾಗಿರಲಿ, ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರೆಂದು ತಿಳಿದುಬಂದಿದೆ.

ಡ್ರಗ್ಸ್‌ ದಂಧೆ ಹತ್ತಿಕ್ಕಲು ಪ್ರಬಲ ಕಾಯ್ದೆ ತನ್ನಿ

ಡ್ರಗ್‌ ಮಾಫಿಯಾ ಎಲ್ಲಾ ಕಾಲದಲ್ಲಿಯೂ ಇತ್ತು. ಈಗ ಹೆಚ್ಚಾಗಿ ಬಯಲಿಗೆ ಬರುತ್ತಿದೆ. ಹೀಗಾಗಿ ಡ್ರಗ್ಸ್‌ ಮಟ್ಟಹಾಕಲು ಬಿಜೆಪಿ ಸರ್ಕಾರ ಪ್ರಬಲ ಕಾನೂನನ್ನು ರೂಪಿಸಲಿ. ವಿಪಕ್ಷವಾಗಿ ಕಾಂಗ್ರೆಸ್‌ ಸಂಪೂರ್ಣ ಸಹಕಾರ ನೀಡಲಿದೆ. - ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ


 

Follow Us:
Download App:
  • android
  • ios