Asianet Suvarna News Asianet Suvarna News

ಕೊರೋನಾ ಮರಣ ಪ್ರಮಾಣ ತಗ್ಗಿಸಿ; ಡಿಸಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ

 ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತಗಳಿಗೆ ಯಾವುದೇ ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Karnataka CM BS Yediyurappa Instructs officials to bring down mortality rate kvn
Author
Bengaluru, First Published Oct 9, 2020, 9:41 AM IST
  • Facebook
  • Twitter
  • Whatsapp

ಬೆಂಗಳೂರು(ಅ.09): ಕೋವಿಡ್‌ ರೋಗಿಗಳ ಮರಣ ಪ್ರಮಾಣವನ್ನು ಶೇ. 1 ರೊಳಗೆ ತರಲು ಒಂದು ವಾರದೊಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕರೋನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚಾಗಿರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಗುರುವಾರ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಸೋಂಕು ಹಬ್ಬುವಿಕೆ ತಡೆಯಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಸೋಂಕಿತರನ್ನು ಶೀಘ್ರ ಪತ್ತೆ ಮಾಡುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು.

ಸೋಂಕು ತಡೆ​ಯಿ​ರಿ:

ಅಲ್ಲದೆ, ಕೋವಿಡ್‌ ಸಾಂಕ್ರಾಮಿಕತೆಯನ್ನು ತಡೆಯಲು ಅನೇಕ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಜತೆಗೆ, ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲಾಡಳಿತಗಳಿಗೆ ಯಾವುದೇ ನೆರವು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ಈಗಾಗಲೇ ತಿಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಕ್ಲಿನಿಕಲ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಆ್ಯಂಟಿಜೆನ್‌ ಪರೀಕ್ಷೆ ಕಡಿಮೆ ಮಾಡಿ ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು.

ಕೆಲ ಜಿಲ್ಲೆ​ಗ​ಳಲ್ಲಿ ನಿಯಂತ್ರಣ:

ರಾಜ್ಯದ ಮೈಸೂರು, ದಕ್ಷಿಣ ಕನ್ನಡ, ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ವಿಶೇಷವಾಗಿ ಕೈಗೊಳ್ಳಬೇಕಿದೆ. ಉಳಿದ 5-6 ಜಿಲ್ಲೆಗಳಲ್ಲಿ ಸೋಂಕಿನ ಹಬ್ಬುವಿಕೆ ಮತ್ತು ಮರಣ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಕೋವಿಡ್‌ - 19 ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಿ ಸೋಂಕು ಪತ್ತೆ ಪರೀಕ್ಷೆ ನಡೆಸಬೇಕು. ಸೋಂಕು ಧೃಢವಾದರೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಂಕ್ರಾಮಿಕ ರೋಗ ತಡೆ ಹಾಗೂ ಸಾವಿನ ಪ್ರಮಾಣ ತಡೆಯಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಆಸ್ಪತ್ರೆಗಳಲ್ಲಿ ದಾಖಲಾದ 72 ಗಂಟೆಗಳೊಳಗೆ ಆಗಿರುವ ಮರಣಗಳ ಸಮಗ್ರ ವಿವರ ಸಂಗ್ರಹ ಮಾಡಬೇಕು. ರಾಜ್ಯದಲ್ಲಿ ಶೇ.50ರಷ್ಟು ಕೋವಿಡ್‌ ಸಂಬಂಧಿ ಮರಣಗಳು ರೋಗಿಯು ಅಸ್ಪತ್ರೆಗೆ ದಾಖಲಾದ ಮೊದಲ 72 ಗಂಟೆಗಳಲ್ಲಿ ಆಗಿವೆ. ಆದ್ದರಿಂದ ಆರಂಭದಲ್ಲೇ ಸೋಂಕು ಪತ್ತೆ ಹಚ್ಚುವುದು ಅತಿ ಮುಖ್ಯ. ಧಾರವಾಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಹೆಚ್ಚಿರುವ ಕಾರಣ ಅಲ್ಲಿಗೆ ಒಂದು ವಿಶೇಷ ತಂಡವನ್ನು ಕಳುಹಿಸಲಾಗುವುದು ಎಂದರು.

ಹುಬ್ಬಳ್ಳಿ: ಕೊರೋನಾ ಇರದಿದ್ರೂ ಕೋವಿಡ್ ವಾರ್ಡ್‌ಗೆ ಶಿಫ್ಟ್‌, ಹೃದಯಾಘಾತದಿಂದ ವೃದ್ಧ‌ ಸಾವು

ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುವುದು ಅರಿವಿನ ಒಂದು ಭಾಗವೇ ಹೊರತು ಸರ್ಕಾರ ಬೇರೆ ಉದ್ದೇಶ ಹೊಂದಿಲ್ಲ ಎಂಬುದನ್ನು ಜನತೆಗೆ ಮನಗಾಣಿಸಬೇಕು ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಮನೆ ಆರೈಕೆಯಲ್ಲಿರುವವರಿಗೆ ಕೋವಿಡ್‌ ಸೋಂಕಿತರಿಗೆ ಟೆಲಿ ಮಾನಿಟರಿಂಗ್‌ ಮುಖಾಂತರ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಬೇಕು ಹಾಗೂ ಆರೋಗ್ಯ ಕಿಟ್‌ ನೀಡಬೇಕು. ಪಾಸಿಟಿವ್‌ ಪ್ರಕರಣಗಳನ್ನು ಕಡಿಮೆ ಮಾಡಲು ಸಮೀಕ್ಷೆ ಮಾಡಿ ತಪಾಸಣೆ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ವರ್ಚುವಲ್‌ ದಸರಾ ಕಾರ್ಯಕ್ರಮಕ್ಕೆ ಒತ್ತು:

ಮೈಸೂರು ಜಿಲ್ಲೆಯಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು, ಮುಂದಿನ ಒಂದು ವಾರದೊಳಗೆ ಈ ಬಗ್ಗೆ ಪ್ರತ್ಯೇಕ ವರದಿಯನ್ನು ನೀಡಬೇಕು. ದಸರಾ ಕಾರ್ಯಕ್ರಮಗಳು ವರ್ಚುಯಲ್ ಆಗಿ ನಡೆಯಲಿ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದು ಅಲ್ಲಿನ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಸುಮಾರು 100 ನಿಮಿಷಗಳ ಕಾಲ ನಡೆದ ಈ ಸಂವಾದದಲ್ಲಿ ಕೋವಿಡ್‌ - 19 ಪ್ರಕರಣಗಳು ಹೆಚ್ಚಾಗಿರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿ ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್‌, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ಕಂದಾಯ ಸಚಿವ ಆರ್‌.ಅಶೋಕ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ , ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios