ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ  ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ ಬೆಳಿಗ್ಗೆ 100ಕ್ಕೂ ಅಧಿಕ ಟ್ವೀಟ್ಸ್‌  ಪ್ರಕಟವಾಗಿವೆ. 

ಬೆಂಗಳೂರು (ಮಾ. 26): ದೇಶದ ಪ್ರಭಾವಿ ವ್ಯಕ್ತಿಯ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai) ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ ಬೆಳಿಗ್ಗೆ 100ಕ್ಕೂ ಅಧಿಕ ಟ್ವೀಟ್ಸ್‌ ಮಾಡಲಾಗಿದ್ದು ಅಕೌಂಟ್‌ ಹ್ಯಾಕ್‌ ಆಗಿರುವ ಸಾಧ್ಯತೆ ಇದೆ. ಬಸವರಾಜ್‌ ಬೊಮ್ಮಾಯಿ ಅಧಿಕೃತ ಟ್ವೀಟರ್‌ @CMofKarnataka ಖಾತೆಯಲ್ಲಿ ಅನೇಕ ಟ್ವೀಟರ್‌ ಪ್ರೊಫೈಲ್‌ಗಳನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಮಾಡಲಾಗಿದ್ದು ಈ ಬಗ್ಗೆ ಟ್ವೀಟರ್‌ ಬಳಕೆದಾರರೊಬ್ಬರು ಸ್ಕ್ರೀನ್‌ಶಾಟ್ಸ್ ಹಂಚಿಕೊಂಡಿದ್ದಾರೆ.‌ 

ಈ ಬಗ್ಗೆ ಮುಖ್ಯಮಂತ್ರಿ ಟ್ವೀಟರ್‌ ಖಾತೆಯಿಂದ ಈವರೆಗೂ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.ಇತ್ತೀಚಿಗೆ ಪ್ರಭಾವಿ ವ್ಯಕ್ತಿಗಳ ಟ್ವೀಟರ್‌ ಖಾತೆ ಹ್ಯಾಕ್‌ ಮಾಡಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ತಿಂಗಳು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು.

ಹ್ಯಾಕರ್‌ಗಳು ಉಕ್ರೇನ್‌ ಬಿಕ್ಕಟ್ಟು ಹಾಗೂ ಕ್ರಿಪ್ಟೋಕರೆನ್ಸಿಬಗ್ಗೆ ಹಲವಾರು ಟ್ವೀಟ್‌ಗಳನ್ನು ಮಾಡಿದ್ದರು. ನಡ್ಡಾ ಟ್ವೀಟರ್‌ ಖಾತೆ ಬಳಸಿ ಉಕ್ರೇನಿಗೆ ಸಹಾಯ ಮಾಡಲು ದೇಣಿಗೆಗಾಗಿ ಮನವಿ ಮಾಡಿ,, ಕ್ರಿಪ್ಟೋಕರೆನ್ಸಿಯ ಮೂಲಕ ನೀಡಿದ ದೇಣಿಗೆಯನ್ನೂ ಸ್ವೀಕರಿಸಲಾಗುವುದು ಎಂದು ಬರೆಯಲಾಗಿತ್ತು. ಇನ್ನೂ ಇತ್ತೀಚೆಗೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟ ಹ್ಯಾಕ್‌ ಆಗಿರುವ ಬಗ್ಗೆ ಕೂಡ ವರದಿಯಾಗಿತ್ತು. ಈ ಕುರಿತು ಬೆಳಗಾವಿಯ ಸೈಬರ್ ಕ್ರೈಂ, ಸಿಇಎನ್ ಪೋಲೀಸ್ ಠಾಣೆಗೆ ದೂರು ನೀಡಿಲಾಗಿತ್ತು. 

Scroll to load tweet…

ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ( Narendra Modi) ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಿ ಬಿಟ್‌ಕಾಯಿನ್‌ (Bitcoin) ಸಂಬಂಧಿತ ಹಲವು ಟ್ವೀಟ್‌ಗಳನ್ನು ಮಾಡಲಾಗಿತ್ತು. ನಂತರ ಖಾತೆಯಿಂದ ಅವುಗಳನ್ನು ತೆಗೆದುಹಾಕಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಅಧಿಕೃತ ಟ್ವಿಟರ್ ಹ್ಯಾಂಡಲ್, ಕೇಂದ್ರ ಮಾಹಿತಿ ಮತ್ತು ಪ್ರಸಾರ (I&B) ಸಚಿವಾಲಯದ ಟ್ವಿಟರ್ ಖಾತೆ ಸೇರಿದಂತೆ ಇತ್ತೀಚೆಗೆ ಕೆಲವು ಪ್ರಭಾವಿ ವ್ಯಕ್ತಿಗಳು, ಸರ್ಕಾರಿ ಇಲಾಖೆಗಳ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿತ್ತು.

ಇದನ್ನೂ ಓದಿBJP ಅಧ್ಯಕ್ಷ ಜೆ.ಪಿ ನಡ್ಡಾ ಟ್ವೀಟರ್‌ ಹ್ಯಾಕ್‌: ಉಕ್ರೇನ್‌ ಬಿಕ್ಕಟ್ಟು-ಕ್ರಿಪ್ಟೋಕರೆನ್ಸಿ ಬಗ್ಗೆ ಟ್ವೀಟ್‌