Asianet Suvarna News Asianet Suvarna News

ಸರ್ಕಾರಿ ಬಂಗಲೆಗೆ ತೆರಳಲು ಬೊಮ್ಮಾಯಿ ಕುಟುಂಬ ನಿರಾಸಕ್ತಿ

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಸಿಸುವ ಆರ್‌.ಟಿ. ನಗರ ನಿವಾಸಕ್ಕೆ ಸಾರ್ವಜನಿಕರ ಭೇಟಿಯಿಂದಾಗಿ ಜನದಟ್ಟಣೆ 
  • ತಾತ್ಕಾಲಿಕವಾಗಿ ಕುಮಾರಕೃಪ ಅತಿಥಿಗೃಹದಿಂದ ಕಾರ್ಯನಿರ್ವಹಿಸಲು ಚಿಂತನೆ
  • ಸರ್ಕಾರಿ ಬಂಗಲೆಯತ್ತ ಸಿಎಂ ಕುಟುಂಬ ನಿರಾಸಕ್ತಿ
Karnataka CM Basavaraj bommai family not interested over govt bungalow snr
Author
Bengaluru, First Published Aug 2, 2021, 7:08 AM IST
  • Facebook
  • Twitter
  • Whatsapp

 ಬೆಂಗಳೂರು (ಜು.02):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ವಾಸಿಸುವ ಆರ್‌.ಟಿ. ನಗರ ನಿವಾಸಕ್ಕೆ ಸಾರ್ವಜನಿಕರ ಭೇಟಿಯಿಂದಾಗಿ ಜನದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕುಮಾರಕೃಪ ಅತಿಥಿಗೃಹದಿಂದ ಕಾರ್ಯನಿರ್ವಹಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರ ಸಂಪರ್ಕ, ಅಹವಾಲು ಸ್ವೀಕಾರದಂತಹ ಕಾರ್ಯಗಳಿಗೆ ಕುಮಾರಕೃಪ ಅತಿಥಿ ಗೃಹವನ್ನು ತಾತ್ಕಾಲಿಕ ಉಪಯೋಗಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅಧಿಕೃತ ಸಭೆ, ನಿಯೋಗ ಭೇಟಿ, ಜನಸ್ಪಂದನದಂತಹ ಕಾರ್ಯಗಳನ್ನು ಗೃಹ ಕಚೇರಿ ಕೃಷ್ಣಾದಿಂದ ನಿರ್ವಹಿಸಲಿದ್ದಾರೆ. ಸೋಮವಾರದಿಂದಲೇ ಕುಮಾರಕೃಪ ಅತಿಥಿಗೃಹದಲ್ಲಿ ಮುಖ್ಯಮಂತ್ರಿಗಳ ಸಭೆ ಹಾಗೂ ಸಾರ್ವಜನಿಕರ ಭೇಟಿಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಧ್ಯಾ ಸುರಕ್ಷಾ, ದಿವ್ಯಾಂಗ,ವಿಧವಾ ವೇತನ ಹೆಚ್ಚಳ: ಅಧಿಕೃತ ಆದೇಶ ಹೊರಡಿಸಿದ ಸಿಎಂ

ಮುಖ್ಯಮಂತ್ರಿಯಾದ ಬಳಿಕ ಆರ್‌.ಟಿ.ನಗರ ನಿವಾಸದ ಬಳಿ ಹೆಚ್ಚೆಚ್ಚು ಜನರು ಭೇಟಿ ನೀಡುತ್ತಿರುವುದರಿಂದ ರಸ್ತೆಯಲ್ಲಿ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ, ಜನದಟ್ಟಣೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಹೀಗಾಗಿ ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಗೃಹ ಕಚೇರಿ ಕೃಷ್ಣಾಗೆ ಹೊಂದಿಕೊಂಡಿರುವ ಕಾವೇರಿ ನಿವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇನ್ನೂ ತೆರವು ಮಾಡಿಲ್ಲ. ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕವೂ ಮನೆ ತೆರವುಗೊಳಿಸಲು ಕೆಲ ಕಾಲಾವಕಾಶ ಇರುತ್ತದೆ. ಇನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕವೂ ಸಚಿವ ಕೆ.ಜೆ. ಜಾಜ್‌ರ್‍ ಹೆಸರಿನಲ್ಲಿ ಕಾವೇರಿ ನಿವಾಸದಲ್ಲೇ ಮುಂದುವರೆದಿದ್ದರು. ಯಡಿಯೂರಪ್ಪ ಅವರು ಆ ರೀತಿ ಕಾವೇರಿಯಲ್ಲೇ ಮುಂದುವರೆಯುವ ಸಾಧ್ಯತೆಗಳು ಕಡಿಮೆ ಇದ್ದರೂ ಯಾವುದೇ ಸ್ಪಷ್ಟತೆ ದೊರೆತಿಲ್ಲ.

ಇನ್ನು ಸಂಪೂರ್ಣ ಕುಟುಂಬವನ್ನು ಸರ್ಕಾರಿ ಅಧಿಕೃತ ನಿವಾಸಕ್ಕೆ ಸ್ಥಳಾಂತರಿಸಲು ಕುಟುಂಬ ಸದಸ್ಯರು ಒಪ್ಪುತ್ತಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ನಿವಾಸದ ಸುತ್ತಲಿನ ರಸ್ತೆಗಳಿಗೆ ಡಾಂಬರು ಭಾಗ್ಯ

ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಗುಂಡಿಗಳಿಂದ ತುಂಬಿದ್ದ ಆರ್‌.ಟಿ. ನಗರದಲ್ಲಿ ಇರುವ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಜಯಮಹಲ್‌ ರಸ್ತೆಯಿಂದ ಮುಖ್ಯಮಂತ್ರಿಗಳ ನಿವಾಸದವರೆಗೂ ರಾತ್ರೋರಾತ್ರಿ ಡಾಂಬರು ಹಾಕಲಾಗಿದೆ. ಇನ್ನು ಬಳ್ಳಾರಿ ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

Follow Us:
Download App:
  • android
  • ios