ಬೆಂಗಳೂರು[ಜ.26]: ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಎರಡು ಮಹತ್ವದ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

1. ಕೈಗಾರಿಕೆ ಸ್ಥಾಪಿಸಲು ಅಗತ್ಯವಾದ ವಿವಿಧ ಪರವಾನಗಿ ಮಂಜೂರಾತಿ ವಿಳಂಬ ನಿವಾರಣೆಗೆ ವ್ಯವಸ್ಥೆಯೊಂದನ್ನು ರೂಪಿಸುವುದು.

2. ಅಗತ್ಯ ಭೂ ಮಂಜೂರಾತಿ ವಿಳಂಬವಾದಾಗ ಅನುಮತಿ ನೀಡಲಾಗಿದೆ (ಡೀಮ್‌್ಡ ಅನುಮತಿ) ಎಂದು ಪರಿಗಣಿಸುವ ಅವಧಿಯನ್ನು 60 ದಿನದಿಂದ 30 ದಿನಕ್ಕೆ ಕಡಿತಗೊಳಿಸುವುದು.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ ವೇಳೆ ಹೂಡಿಕೆದಾರರು ಮಾಡಿದ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಘೋಷಣೆ ಮಾಡಿದ್ದು, ಇದಕ್ಕೆ ಅನುವಾಗುವಂತೆ ಭೂ ಖರೀದಿ ಹಾಗೂ ಭೂ ಪರಿವರ್ತನೆ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಜತೆಗೆ ಕೈಗಾರಿಕೆ ಮಂಜೂರಾತಿಗೆ ಸಂಬಂಧಿಸಿದ ನಿಯಮಾವಳಿಯನ್ನು ಸರಳೀಕರಣಗೊಳಿಸಲಾಗುವುದು ಎಂದು ತಿಳಿಸಿದರು.

'ಬಿಎಸ್‌ವೈಯನ್ನು ಹತಾಶರನ್ನಾಗಿಸಲು ಮೋದಿ, ಶಾ ಸಂಚು!'

ಈ ಮೊದಲು ಕೈಗಾರಿಕೆಗಾಗಿ ಜಮೀನು ಪಡೆಯಲು ಅರ್ಜಿ ನೀಡಿದ ಸಲ್ಲಿಸಿದ 60 ದಿನದೊಳಗೆ ಅಗತ್ಯ ಅನುಮತಿ ನೀಡಬೇಕಿತ್ತು. ಇಲ್ಲದಿದ್ದ ಪಕ್ಷದಲ್ಲಿ ಅನುಮತಿ ನೀಡಲಾಗಿದೆ (ಡೀಮ್‌್ಡ ಅನುಮತಿ) ಎಂದು ಪರಿಗಣಿಸಲು ಅವಕಶ ನೀಡಿತ್ತು. ಈಗ ಈ ಅವಧಿಯನ್ನು 30 ದಿನಕ್ಕೆ ಕಡಿತಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ದಾವೋಸ್‌ನಿಂದ ಹಿಂತಿರುಗಿದ ಬಳಿಕ ಶನಿವಾರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೂಡಿಕೆದಾರರಿಗೆ ಯಾವುದೇ ಸಮಸ್ಯೆಯಾಗದಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಕೈಗಾರಿಕೆ ಉದ್ದೇಶಕ್ಕಾಗಿ ಜಮೀನು ಖರೀದಿಸಲು ಕರ್ನಾಟಕ ಕೈಗಾರಿಕಾ ಅಧಿನಿಯಮ 2002ರಡಿಯಲ್ಲಿನ ರಾಜ್ಯದ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ, ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯಲ್ಲಿ ಅನುಮೋದನೆ ಪಡೆದ ಬಳಿಕ ಕಲಂ 109 (1)(1) ಅನ್ವಯ ಅನುಮತಿ ನೀಡಲು 60 ದಿನದ ಬದಲು 30 ದಿನದಲ್ಲಿ ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸಿದ 30 ದಿನದಲ್ಲಿ ಇತ್ಯರ್ಥಗೊಳಿಸದಿದ್ದರೆ ‘ಡೀಮ್‌್ಡ ಅನುಮತಿ’ ಎಂದು ಪರಿಗಣಿಸಿ ಅನುಮೋದನೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಭೂ ಪರಿವರ್ತನೆ ಸರಳೀಕರಣ:

ಕೃಷಿ ಭೂಮಿ ಹೊಂದಿರುವ ಮಾಲೀಕರು ತಮ್ಮ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಇಚ್ಛಿಸಿದ್ದರೆ ಭೂ ಪರಿವರ್ತನೆಯನ್ನು ಆನ್‌ಲೈನ್‌ ಮೂಲಕ ಸರಳೀಕರಣ ಮಾಡಲಾಗುತ್ತದೆ. ಕೈಗಾರಿಕೆ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಕೋರಿ ಅರ್ಜಿ ಸಲ್ಲಿಸಿದ ಬಳಿಕ ಒಪ್ಪಿಗೆ ನೀಡಿಕೆ ಸಮಿತಿಯು 60 ದಿನದಲ್ಲಿ ನೀಡುತ್ತಿದ್ದ ಅನುಮತಿಯನ್ನು 30 ದಿನಕ್ಕೆ ಕಡಿತಗೊಳಿಸಲಾಗಿದೆ. ಅಲ್ಲದೇ ಅರ್ಜಿಯನ್ನು ಇತ್ಯರ್ಥಪಡಿಸದಿದ್ದರೆ ಡೀಮ್‌್ಡ ಪರಿವರ್ತನೆ ಎಂದು ಆದೇಶ ಹೊರಡಿಸಲು ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಭೂ ಮಾಲಿಕರಿಂದ ಯಾವುದೇ ಕಾರಣಕ್ಕೂ ಭೂಮಿಯನ್ನು ಬಲವಂತವಾಗಿ ಪಡೆದುಕೊಳ್ಳುವುದಿಲ್ಲ. ಅವರೇ ಮುಂದಾಗಿ ಭೂ ಪರಿವರ್ತನೆಗೆ ಕೋರಿದರೆ ಮಾತ್ರ ಮುಂದಿನ ಪ್ರಕ್ರಿಯೆಯನ್ನು ಕಾನೂನಾತ್ಮಕವಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಭೂ ಖರೀದಿ ಮತ್ತು ಭೂ ಪರಿವರ್ತನೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳು ಇರುವ ಕಾರಣ ಅದನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಯಾವುದನ್ನು ಆಡಳಿತಾತ್ಮಕವಾಗಿ ಮಾಡಬೇಕೋ ಅದನ್ನು ಶೀಘ್ರದಲ್ಲಿಯೇ ಮಾಡುತ್ತೇವೆ. ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿಯ ಕಾಯ್ದೆಯನ್ನು ಮಂಡಿಸಿ ಅಂಗೀಕರಿಸಲಾಗುವುದು ಎಂದರು.

ಸಮಾವೇಶದಲ್ಲಿ ಕೈಗಾರಿಕೋದ್ಯಮಿಗಳು ಭೂಮಿ ಖರೀದಿ ಮಾಡಿದ ತರುವಾಯ ನಡೆಯುವ ಪ್ರಕ್ರಿಯೆಗಳು ಬಹಳಷ್ಟುವಿಳಂಬವಾಗುತ್ತಿದೆ ಎಂಬ ಅಹವಾಲುಗಳನ್ನು ತೋಡಿಕೊಂಡರು. ಉದ್ಯಮಿಗಳಿಗೆ ಯಾವುದೇ ಅಡ್ಡಿ ಆತಂಕ ಇರಬಾರದು ಎಂಬ ಕಾರಣಕ್ಕಾಗಿ ಸರಳೀಕರಣಗೊಳಿಸಲು ಈ ಎರಡು ತೀರ್ಮಾನ ಕೈಗೊಳ್ಳಲಾಗುತ್ತದೆ. ಕಾನೂನು ಬದಲಾವಣೆಯ ಭರವಸೆ ನೀಡಲಾಗಿದೆ. ರಾಜ್ಯದಲ್ಲಿ ಕೌಶಲ್ಯ ಹೊಂದಿರುವ ಹೆಚ್ಚು ಮಾನವ ಸಂಪನ್ಮೂಲ ಹೊಂದಿದ್ದು, ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನ ಸಂಶೋಧನೆ ಸಂಸ್ಥೆಗಳನ್ನು ಕೈಗಾರಿಕೆಗಳೊಂದಿಗೆ ಸಮನ್ವಯ ಮಾಡಲಾಗುವುದು. ಈ ಅಂಶವನ್ನು ಹೊಸ ಕೈಗಾರಿಕೆ ನೀತಿಯಲ್ಲಿ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.

ಸಿಎಂಗೆ ವಚನಭ್ರಷ್ಟ ಕಳಂಕ ಅಂಟಿಸಲು ಸೋತವರ ಪ್ರಯತ್ನ?

ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ, ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಇತರರು ಉಪಸ್ಥಿತರಿದ್ದರು.