ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಥೆನಾಲ್‌ ಮೇಲೆ 1 ರೂ. ಸೆಸ್‌ ವಿಧಿಸಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

ಬೆಂಗಳೂರು (ನ.12): ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗುವ ಉದ್ದೇಶದೊಂದಿಗೆ ಕರ್ನಾಟಕದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಮತ್ತು ಎಥೆನಾಲ್‌ ಉತ್ಪನ್ನಗಳ ಮೇಲೆ ಸೆಸ್‌ ವಿಧಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಕಾರ್ಮಿಕರ ಕಲ್ಯಾಣಕ್ಕಾಗಿ ಈ ಉತ್ಪನ್ನಗಳ ಮೇಲೆ ಸೆಸ್‌ ವಿಧಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೆಚ್ಚುವರಿ ಸೆಸ್ ಸಂಗ್ರಹಿಸಿ 1.30 ಕೋಟಿ ಕುಟುಂಬದ ಅಸಂಘಟಿತ ಕಾರ್ಮಿಕರಿಗೆ ನೆರವಾಗುವ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಸಚಿವ ಸಂತೋಷ್ ಲಾಡ್ ಸೆಸ್‌ ವಿಧಿಸುವಂತೆ ಮನವಿ ಮಾಡಿದ್ದಾರೆ. ಕೆಲ ಉತ್ಪನ್ನಗಳ ಮೇಲೆ 1 ರೂ. ಸೆಸ್ ವಿಧಿಸಿ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ ನಡೆದಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಉತ್ಪನ್ನಗಳ ಮೇಲೆ 1 ರೂಪಾಯಿ ಸೆಸ್ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ. ವಿಧೇಯಕ ತಂದು ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಮಾಡಲು ತಯಾರಿ ಮಾಡಲಾಗಿದೆ. ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರಕಿದರೆ ಕೋಟ್ಯಂತರ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಕೇವಲ 1 ರೂಪಾಯಿ ಹೆಚ್ಚಳದಿಂದ 62 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಶೈಕ್ಷಣಿಕ ಸಹಾಯಧನ ನೀಡಲು ಹೆಚ್ಚುವರಿ ಸೆಸ್ ಹಣ ಬಳಕೆ ಮಾಡಲಾಗುತ್ತದೆ. ಇದರೊಂದಿಗೆ ಅಸಂಘಟಿತ ಕಾರ್ಮಿಕರು ಮೃತಪಟ್ಟರೆ ಅಂತ್ಯಕ್ರಿಯೆಗೂ ಸರ್ಕಾರ ಹಣ ನೀಡಲಿದೆ. ಹೆಚ್ಚುವರಿ 1 ಸೆಸ್ ವಿಧಿಸುವುದರಿಂದ 2120 ಕೋಟಿ ರೂ. ಮೊತ್ತ ಸಂಗ್ರಹವಾಗಲಿದೆ. ಈ ಸೆಸ್ ಹಣದಲ್ಲಿ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ನೀಡುವ ಯೋಜನೆ ರೂಪಿಸಲಾಗುತ್ತದೆ.

ಇದರಲ್ಲಿ 1772 ಕೋಟಿ ಅಸಂಘಟಿತ ಕಾರ್ಮಿಕರ ಆರೋಗ್ಯ ಸೌಲಭ್ಯಕ್ಕಾಗಿಯೇ ವೆಚ್ಚ ಮಾಡುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ವಿಧೇಯಕದ ಡ್ರಾಫ್ಟ್ಅನ್ನು ಸಂತೋಷ್ ಲಾಡ್ ಸಿದ್ದಪಡಿಸಿದ್ದಾರೆ. ಲಾಡ್ ಪ್ರಯತ್ನಕ್ಕೆ ಕ್ಯಾಬಿನೆಟ್ ನಲ್ಲಿ ಅನುಮೋದನೆ ದೊರಕುವ ಸಾಧ್ಯತೆ ಇದ್ದು, ಗುರುವಾರದ ಕ್ಯಾಬಿನೆಟ್‌ನಲ್ಲಿ ವಿಧೇಯಕ ಚರ್ಚೆ ಆಗುವ ಸಾಧ್ಯತೆ ಇದೆ.

ಅಪಘಾತ ಪರಿಹಾರ ಯೋಜನೆ

ಅಪಘಾತ ಪರಿಹಾರ ಯೋಜನೆ ಅಡಿಯಲ್ಲಿ ಅಪಘಾತದಿಂದ ನಿಧನರಾದ/ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಕಾರ್ಮಿಕರ ಸಂಖ್ಯೆಯ ಅನುಸಾರ ಇಬ್ಬರು ಮಕ್ಕಳೆಂದು ಪರಿಗಣನೆ ಮಾಡಿದಲ್ಲಿ ಸುಮಾರು 6 ಸಾವಿರ ಅರ್ಜಿಗಳು ಸ್ವೀಕೃತವಾಗಬಹುದು ಎಂದು ಅಂದಾಜಿಸಲಾಗಿದೆ. 1ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ವಾರ್ಷಿಕ 6 ಸಾವಿರ ಅರ್ಜಿಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಇದಕ್ಕೆ 6.39 ಕೋಟಿ ರೂಪಾಯಿ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.