Asianet Suvarna News Asianet Suvarna News

ಕಳೆದ ವರ್ಷಕ್ಕಿಂತ ದುಪ್ಪಟ್ಟು ತುಂಬಿದ ಕೆಆರ್‌ಎಸ್ ಜಲಾಶಯ; 18 ಸಾವಿರ ಕ್ಯೂಸೆಕ್ ಒಳಹರಿವು

ರಾಜ್ಯದಲ್ಲಿ ಕಳೆದ ವರ್ಷ ಕೆಆರ್‌ಎಸ್ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರಿನ ಪ್ರಮಾಣಕ್ಕಿಂತ ಈ ವರ್ಷ ದುಪ್ಪಟ್ಟು ನೀರು ಸಂಗ್ರಹವಾಗಿದೆ. ಜೊತೆಗೆ, ನೀರಿನ ಒಳಹರಿವಿನ ಪ್ರಮಾಣ 18 ಸಾವಿರ ಕ್ಯೂಸೆಕ್‌ಗಿಂತ ಅಧಿಕವಾಗಿದೆ.

Karnataka Cauvery basin reservoirs water level on june 30 2024 KRS Harangi and kabini sat
Author
First Published Jun 30, 2024, 4:25 PM IST

ಬೆಂಗಳೂರು (ಜೂ.30): ರಾಜ್ಯದಲ್ಲಿ ಕಳೆದ 2023ನೇ ಸಾಲಿನಲ್ಲಿ ಜೂನ್ ಅಂತ್ಯಕ್ಕೆ ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಆಣೆಕಟ್ಟು ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದಲ್ಲಿ ಭರ್ತಿಯಾದ ನೀರಿನ ಪ್ರಮಾಣಕ್ಕಿಂತ ದುಪ್ಪಟ್ಟು ನೀರು 2024ರ ಜೂನ್ ಅಂತ್ಯಕ್ಕೆ ಸಂಗ್ರಹಗೊಂಡಿದೆ. ಈ ಮೂಲಕ ರಾಜ್ಯಕ್ಕೆ ಉತ್ತಮ ಮುಂಗಾರು ಆರಂಭಗೊಂಡಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.]

ಕಳೆದ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿತ್ತು. ರಾಜ್ಯದ 200ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಸದರಿ ಸಾಲಿನಲ್ಲಿ ರಾಜ್ಯಕ್ಕೆ ಪೂರ್ವ ಮುಂಗಾರು ಸೇರಿದಂತೆ ಮುಂಗಾರು ಮಳೆಯೂ ಉತ್ತಮ ಆರಂಭವನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ನೀರು ಸಂಗ್ರಹಣೆಯಾಗಿದೆ. ಕಳೆದ ವರ್ಷ ಬರಗಾಲದ ಹಿನ್ನೆಲೆಯಲ್ಲಿ 2023ರ ಜೂ.30ರಂದು ಕೆಆರ್‌ಎಸ್ ಜಲಾಶಯದಲ್ಲಿ 9.80 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯದ ನೀರಿನ ಸಂಗ್ರಹ ಮಟ್ಟ ಜೂ.29ರಕ್ಕೆ 17.68 ಟಿಎಂಸಿಗೆ ಹೆಚ್ಚಳವಾಗಿದೆ.

ಮಂಡ್ಯ: ಭಾರೀ ಮಳೆಗೆ ಕೆಆರ್‌ಎಸ್ ಡ್ಯಾಂನಲ್ಲಿ ಒಂದೇ ದಿನ 3 ಅಡಿ ನೀರು ಏರಿಕೆ

ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ಹಾರಂಗಿ ಜಲಾಶಯದಲ್ಲಿ 3.79 ಟಿಎಂಸಿ, ಹೇಮಾವತಿ ಜಲಾಶಯದಲ್ಲಿ 12.76 ಟಿಎಂಸಿ, ಕೆಆರ್‌ಎಸ್ ಜಲಾಶಯದಲ್ಲಿ 17.68 ಟಿಎಂಸಿ ಹಾಗೂ ಕಬಿನಿ ಜಲಾಶಯದಲ್ಲಿ 14.31 ಟಿಎಂಸಿ ನೀರಿ ಸಂಗ್ರಹವಾಗಿದೆ. ಈ ಮೂಲಕ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ 48.54 ಟಿಎಂಸಿ ನೀರು ಸಂಗ್ರಹವಿದೆ. ಒಟ್ಟಾರೆ ಕಾವೇರಿ ಕಣಿವೆಯಲ್ಲಿನ ನಾಲ್ಕು ಜಲಾಶಯಗಳ ನೀರಿನ ಸಾಮರ್ಥ್ಯ 114.57 ಟಿಎಂಸಿ ಇದೆ. ಆದರೆ, ನಾಲ್ಕು ಜಲಾಶಯನಗಳ ನೀರಿನ ಸಂಗ್ರಹಣಾ ಸಾಮರ್ಥ್ಯದಲ್ಲಿ ಶೇ.50ರಷ್ಟು ನೀರು ಕೂಡ ಸಂಗ್ರಹ ಆಗಿಲ್ಲ. ಎಲ್ಲ ಜಲಾಶಯಗಳು ಭರ್ತಿಯಾದಲ್ಲಿ ಮಾತ್ರ ರೈತರ ಬೆಳೆಗಳಿಗೆ ಭರಪೂರ ನೀರು ಲಭ್ಯವಾಗಲಿದೆ.

ನೀರಿನ ಒಳಹರಿವಿನಲ್ಲಿ ಹೆಚ್ಚಳ: ರಾಜ್ಯದ ಮಲೆನಾಡು ಪ್ರದೇಶ, ಕೊಡಗು ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿರುವ ನಾಲ್ಕು ಜಲಾಶಯಗಳ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಒಟ್ಟಾರೆ ನಾಲ್ಕು ಜಲಾಶಯಗಳಿಗೆ 43,506 ಕ್ಯೂಸೆಕ್ ನೀರಿನ ಒಳಹರಿವು ಇದೆ. ಇದರಿಂದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಜನರ ಮೊಗದಲ್ಲಿ ಸಂತಸ ಹೆಚ್ಚಾಗಿದೆ. ಎಲ್ಲೆಡೆ ಕೃಷಿ ಕಾರ್ಯಗಳೂ ಕೂಡ ಚುರುಕುಗೊಂಡಿವೆ. ಇನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಗಳು ಕೂಡ ಬಹುತೇಕ ಮುಕ್ತಾಯ ಆಗುತ್ತಿದೆ. ಇನ್ನು ಕಾವೇರಿ ನೀರಿನ ಆಶ್ರಯದಲ್ಲಿ ಬೆಳೆಯುವ ಭತ್ತ, ಕಬ್ಬು ಸೇರಿ ಕೆಲವು ಪ್ರಮುಖ ಬೆಳೆಗಳನ್ನು ಬೆಳೆಯುವ ರೈತರು ಕಾಲುವೆಗೆ ನೀರು ಹರಿಸುವುದಕ್ಕಾಗಿ ಎದುರು ನೋಡುತ್ತಿದ್ದಾರೆ.

ಜೂ.29ರ ಅನುಸಾರ ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯಗಳ ನೀರಿನ ಮಟ್ಟ
1. ಕೆ.ಆರ್ ಎಸ್ ಜಲಾಶಯ 
ಗರಿಷ್ಠ ನೀರಿನ ಮಟ್ಟ -38.04 ಮೀಟರ್ 
ಇಂದಿನ ನೀರಿನ ಮಟ್ಟ- 17.68 ಟಿಎಂಸಿ  (ಕಳೆದ ವರ್ಷ 9.90 ಟಿಎಂಸಿ)
ಒಳಹರಿವು - 18,644 ಕ್ಯೂಸೆಕ್‌
ಹೊರಹರಿವು - 496 ಕ್ಯೂಸೆಕ್‌

2. ಹಾರಂಗಿ ಜಲಾಶಯ 
ಗರಿಷ್ಠ ನೀರಿನ ಮಟ್ಟ - 871.38 ಮೀಟರ್
ಇಂದಿನ ನೀರಿನ ಮಟ್ಟ - 3.79 ಟಿಎಂಸಿ  (ಕಳೆದ ವರ್ಷ 2.6 ಟಿಎಂಸಿ)
ಒಳಹರಿವು - 1,577 ಕ್ಯೂಸೆಕ್‌
ಹೊರಹರಿವು - 200 ಕ್ಯೂಸೆಕ್‌ 

ಕರ್ನಾಟಕದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ: ಕರಾವಳಿ ಜಿಲ್ಲೆಗಳಿಗೆ ಇಂದು ರೆಡ್ ಅಲರ್ಟ್

3. ಹೇಮಾವತಿ ಜಲಾಶಯ
​ಗರಿಷ್ಠ ನೀರಿನ ಮಟ್ಟ -890.58 ಮೀಟರ್ 
ಇಂದಿನ ನೀರಿನ ಮಟ್ಟ - 12.76 ಟಿಎಂಸಿ (ಕಳೆದ ವರ್ಷ 14.43 ಟಿಎಂಸಿ)
ಒಳಹರಿವು - 5,862 ಕ್ಯೂಸೆಕ್‌ 
ಹೊರಹರಿವು - 250 ಕ್ಯೂಸೆಕ್‌

4. ಕಬಿನಿ ಜಲಾಶಯ​
ಗರಿಷ್ಠ ನೀರಿನ ಮಟ್ಟ - 696.13 ಮೀಟರ್ 
ಇಂದಿನ ನೀರಿನ ಮಟ್ಟ - 14.31 ಟಿಎಂಸಿ (ಕಳೆದ ವರ್ಷ 4.36 ಟಿಎಂಸಿ)
ಒಳಹರಿವು - 17,873 ಕ್ಯೂಸೆಕ್‌ 
ಹೊರಹರಿವು - 2,000 ಕ್ಯೂಸೆಕ್‌ 

Latest Videos
Follow Us:
Download App:
  • android
  • ios