Asianet Suvarna News Asianet Suvarna News

ರಾಜ್ಯ ಸಂಪುಟ ವಿಸ್ತರಣೆಗೆ 2 ಲೆಕ್ಕಾಚಾರ : ನೂತನ ಸಚಿವ ಪಟ್ಟ ಯಾರಿಗೆ..?

ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇದೀಗ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ  ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ನ ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ.

Karnataka Cabinet Expansion Who Will Get PortFolio
Author
Bengaluru, First Published Oct 5, 2018, 7:56 AM IST

ಬೆಂಗಳೂರು :  ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ನ ನಾಯಕರು ವಿಭಿನ್ನ ನಿಲುವು ತಳೆದಿದ್ದಾರೆ. ಉಪ ಚುನಾವಣೆ ಘೋಷಣೆಯಾದರೆ ವಿಸ್ತರಣೆಯನ್ನು ಮುಂದೂಡುವ ಮೂಡ್‌ನಲ್ಲಿ ಹೈಕಮಾಂಡ್‌ನ ನಾಯಕರಿದ್ದರೆ, ವಿಸ್ತರಣೆಗೆ ಇದಕ್ಕಿಂತ ಸಕಾಲ ಮುಂದೆ ದೊರೆಯುವುದಿಲ್ಲ. ಹೀಗಾಗಿ, ಈಗಲೇ ವಿಸ್ತರಣೆ ಮಾಡುವುದು ಸೂಕ್ತ ಎಂಬ ನಿಲುವು ರಾಜ್ಯ ನಾಯಕರದ್ದು.

ಕನ್ನಡಪ್ರಭದೊಂದಿಗೆ ಮಾತನಾಡಿದ ರಾಜ್ಯದ ಪ್ರಭಾವಿ ನಾಯಕರೊಬ್ಬರು, ಸಚಿವ ಸಂಪುಟ ವಿಸ್ತರಣೆಗೆ ಇದು ಸಕಾಲ. ವಿಸ್ತರಣೆಯಿಂದ ಯಾವುದೇ ಅಪಾಯ ಎದುರಾದರೂ ಲೋಕಸಭೆ ಚುನಾವಣೆ ದೂರವಿರುವುದರಿಂದ ಅದನ್ನು ನಿಭಾಯಿಸಬಹುದು.

ಆದರೆ, ಜೆಡಿಎಸ್‌ ವರಿಷ್ಠರು ದೆಹಲಿಯಲ್ಲಿ ಕಾಂಗ್ರೆಸ್‌ ನಾಯಕರನ್ನು ಶುಕ್ರವಾರ ಭೇಟಿ ಮಾಡಲಿದ್ದು, ಇದಾದ ನಂತರ ಹೈಕಮಾಂಡ್‌ನ ನಾಯಕರು ಉಪ ಚುನಾವಣೆ ವೇಳಾಪಟ್ಟಿಘೋಷಣೆಯಾದರೆ ಸಂಪುಟ ವಿಸ್ತರಣೆಯ ರಿಸ್ಕ್‌ ಬೇಡ. ಏಕೆಂದರೆ, ವಿಸ್ತರಣೆ ಮಾಡಿ ಗೊಂದಲ ನಿರ್ಮಾಣವಾದರೆ ಅದು ಉಪ ಚುನಾವಣೆ ಮೇಲೂ ಪ್ರಭಾವ ಬೀರಬಹುದು. ಉಪ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಟ್ರೆಂಡ್‌ ಸೆಟ್‌ ಮಾಡುವುದರಿಂದ ಇಂತಹ ಅಪಾಯ ಮೈಮೇಲೆ ಹಾಕಿಕೊಳ್ಳುವುದು ಬೇಡ ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗುತ್ತಿದೆ.

ಆದರೆ, ರಾಜ್ಯ ನಾಯಕರು ಇದನ್ನು ನಿರಾಕರಿಸುತ್ತಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಉನ್ನತ ಸ್ಥಾನದಲ್ಲಿರುವ ನಾಯಕರ ಪ್ರಕಾರ, ಮೈತ್ರಿ ಕೂಟದಲ್ಲಿ ಸಂಪುಟ ವಿಸ್ತರಣೆಗೆ ಇದಕ್ಕಿಂತ ಸೂಕ್ತ ಕಾಲ ದೊರೆಯುವುದಿಲ್ಲ. ಪ್ರಸ್ತುತ ಸ್ಥಾನಮಾನ ದೊರಕಿಲ್ಲ ಎಂದು ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಶಾಸಕರ ಸಂಖ್ಯೆ 30ರ ಗಡಿ ದಾಟುವುದಿಲ್ಲ. ಈ ಪೈಕಿ ನಿಗಮ ಮಂಡಳಿಗೆ 20 ಹಾಗೂ ಆರು ಸಚಿವ ಸ್ಥಾನಗಳನ್ನು ತುಂಬಿಕೊಂಡರೆ ಅಸಮಾಧಾನ ಹೊಂದಿರುವವರ ಸಂಖ್ಯೆ ಬೆರಳೆಣಿಕೆಯಷ್ಟಿರುತ್ತದೆ.

ಲೋಕಸಭೆ ಚುನಾವಣೆ ಇನ್ನೂ ತುಸು ದೂರವಿರುವುದರಿಂದ ಈ ಸಣ್ಣ ಗುಂಪನ್ನು ಸಮಾಧಾನಪಡಿಸಲು ಕಷ್ಟವಾಗುವುದಿಲ್ಲ. ಇದರ ಬದಲಾಗಿ, ಸಂಪುಟ ವಿಸ್ತರಣೆ ವಿಳಂಬ ಮಾಡಿದರೆ ಅಸಮಾಧಾನಿಗಳ ಗುಂಪು ಚುನಾವಣೆ ಹತ್ತಿರ ಬಂದಂತೆಲ್ಲ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಮಾಡುವುದಕ್ಕಿಂತ ಅದನ್ನು ಮುಂದೂಡುವುದೇ ಹೆಚ್ಚು ಅಪಾಯಕಾರಿ ಎಂದು ಅವರು ಹೇಳುತ್ತಾರೆ.

ಶುಕ್ರವಾರ ಸಿದ್ದು- ದಿನೇಶ್‌ ಸಭೆ:  ಇದಕ್ಕೆ ಪೂರಕವಾಗಿ ಗುರುವಾರವಷ್ಟೇ ವಿದೇಶದಿಂದ ನಗರಕ್ಕೆ ಹಿಂತಿರುಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಶುಕ್ರವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸಮಯ ನಿಗದಿ ಪಡಿಸಿಕೊಂಡಿದ್ದು, ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲು ದೆಹಲಿ ಯಾತ್ರೆ ಯಾವಾಗ ಎಂಬುದನ್ನು ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.

ವಾಸ್ತವವಾಗಿ ಗುರುವಾರ ಸಂಜೆಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ದಿನೇಶ್‌ ಗುಂಡೂರಾವ್‌ ಬಯಸಿದ್ದರು. ಆದರೆ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದಿನೇಶ್‌ ಹಾಗೂ ಸಿದ್ದರಾಮಯ್ಯ ಅವರ ಸಭೆ ಶುಕ್ರವಾರಕ್ಕೆ ನಿಗದಿಯಾಗಿದೆ.

ಕಾಂಗ್ರೆಸ್‌ ಮೂಲಗಳ ಪ್ರಕಾರ ಈ ಬಾರಿ ಎಲ್ಲಾ ಆರು ಸ್ಥಾನಗಳನ್ನು ತುಂಬುವ ನಿಲುವನ್ನು ರಾಜ್ಯ ನಾಯಕರು ಹೊಂದಿದ್ದಾರೆ. ಒಂದು ಸ್ಥಾನವನ್ನು ಖಾಲಿ ಉಳಿಸಿಕೊಂಡರೂ ಅದಕ್ಕಾಗಿ ಪ್ರಯತ್ನ ಮಾಡುವವರು ಆಗಾಗ ಮಾಧ್ಯಮಗಳ ಮೂಲಕ ಬಂಡಾಯದ ಹೇಳಿಕೆಗಳನ್ನು ನೀಡಿ ಗೊಂದಲ ನಿರ್ಮಾಣ ಮಾಡಬಹುದು. ಇದಕ್ಕೆ ಆಸ್ಪದ ನೀಡಬಾರದು. ಏನೇ ಬಂಡಾಯ, ಗೊಂದಲ, ಪ್ರತಿಭಟನೆಗಳು ಇದ್ದರೂ ಅದು ಈಗಲೇ ನಡೆಯಲಿ. ಲೋಕಸಭೆ ಚುನಾವಣೆ ಇನ್ನೂ ತುಸು ದೂರವಿರುವುದರಿಂದ ಅದನ್ನು ನಿಭಾಯಿಸುವುದು ಈಗ ಸಾಧ್ಯವಿದೆ. ತಡವಾದರೆ ಪರಿಸ್ಥಿತಿ ಕೈ ಮೀರಬಹುದು ಎಂಬ ಚಿಂತನೆ ರಾಜ್ಯ ನಾಯಕರಿಗೆ ಇದೆ ಎನ್ನಲಾಗುತ್ತಿದೆ.

4 ಸಚಿವ ಸ್ಥಾನ ಉತ್ತರ ಕರ್ನಾಟಕಕ್ಕೆ:  ಕಾಂಗ್ರೆಸ್‌ ಪಾಲಿನ ಆರು ಸಚಿವ ಸ್ಥಾನಗಳನ್ನು ತುಂಬಿಕೊಳ್ಳುವ ನಿರ್ಧಾರವನ್ನು ಪಕ್ಷ ಕೈಗೊಂಡರೆ ಆಗ ಕನಿಷ್ಠ ನಾಲ್ಕು ಸ್ಥಾನ ಉತ್ತರ ಕರ್ನಾಟಕದ ಶಾಸಕರಿಗೆ ದೊರೆಯುತ್ತದೆ ಎಂದು ಉನ್ನತ ಮೂಲಗಳು ಹೇಳುತ್ತವೆ.

ಲಿಂಗಾಯತ, ಕುರುಬ, ಪರಿಶಿಷ್ಟಪಂಗಡ, ಪರಿಶಿಷ್ಟಜಾತಿ ಎಡಗೈ ಸಮುದಾಯಕ್ಕೆ ಪ್ರಥಮ ಆದ್ಯತೆ ನೀಡುವ ಉದ್ದೇಶವಿದೆ. ಇದಾದ ನಂತರ ಅಲ್ಪಸಂಖ್ಯಾತ, ಒಕ್ಕಲಿಗರನ್ನು ಪರಿಗಣಿಸಬಹುದು ಎನ್ನಲಾಗುತ್ತಿದೆ.

ಈ ಮೂಲಗಳ ಪ್ರಕಾರ ಲಿಂಗಾಯತರಲ್ಲಿ ಎಂ.ಬಿ.ಪಾಟೀಲ, ಬಿ.ಕೆ. ಸಂಗಮೇಶ್‌, ಬಿ.ಸಿ. ಪಾಟೀಲ್‌, ಶರಣ ಬಸಪ್ಪ ದರ್ಶನಾಪುರ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ವಾಸ್ತವವಾಗಿ ಲಿಂಗಾಯತರಿಗೆ ಎರಡು ಸ್ಥಾನಗಳನ್ನು ನೀಡಬೇಕು ಎಂಬ ಒತ್ತಾಯವಿದೆ. ಆದರೆ, ಸದ್ಯಕ್ಕೆ ಒಂದೇ ಸ್ಥಾನವನ್ನು ನೀಡುವ ಕುರಿತು ರಾಜ್ಯ ನಾಯಕತ್ವ ಒಲವು ಹೊಂದಿದೆ. ಅದರಲ್ಲೂ ವಿಶೇಷವಾಗಿ ಮಧ್ಯ ಕರ್ನಾಟಕದ ಭಾಗದ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂಬ ಚಿಂತನೆಯಿದೆ ಎನ್ನಲಾಗುತ್ತಿದೆ.

ಏಕೆಂದರೆ, ಹೈದರಾಬಾದ್‌ ಕರ್ನಾಟಕ ಭಾಗದ ಶಿವಾನಂದಪಾಟೀಲ್‌ ಅವರು ಸಂಪುಟದ ಸದಸ್ಯರಾಗಿದ್ದು, ಆ ಭಾಗದ ಲಿಂಗಾಯತರಿಗೆ ಪ್ರಾತಿನಿಧ್ಯ ದೊರಕಿದೆ. ಹೀಗಾಗಿ ಮಧ್ಯ ಕರ್ನಾಟಕದ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂಬುದು ವಾದ. ಈ ವಾದಕ್ಕೆ ಮನ್ನಣೆ ದೊರಕಿದರೆ ಆಗ ಬಿ.ಕೆ. ಸಂಗಮೇಶ್‌ ಹಾಗೂ ಬಿ.ಸಿ. ಪಾಟೀಲ್‌ ಅವರಿಬ್ಬರ ಪೈಕಿ ಒಬ್ಬರಿಗೆ ಅವಕಾಶ ದೊರೆಯಬಹುದು. ಒಂದು ವೇಳೆ ಒತ್ತಡ ತೀವ್ರಗೊಂಡು ಇಬ್ಬರು ಲಿಂಗಾಯತರಿಗೆ ಅವಕಾಶ ನೀಡಬೇಕು ಎಂದಾದಲ್ಲಿ ಆಗ ಎಂ.ಬಿ. ಪಾಟೀಲ್‌ ಅವರ ಹೆಸರು ಪರಿಗಣನೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್‌ನಲ್ಲಿ ಪ್ರಭಾವಿಯಾಗಿರುವ ಎಂ.ಬಿ. ಪಾಟೀಲ್‌ ನಡೆಸುತ್ತಿರುವ ಲಾಬಿ ಕೆಲಸ ಮಾಡಿದರೆ ಆಗ ಈ ಲೆಕ್ಕಾಚಾರ ಉಲ್ಟಾಆಗಲೂಬಹುದು. ಈ ನಡುವೆ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಲಿಂಗಾಯತ ಕೋಟಾದಿಂದ ಪ್ರಯತ್ನ ನಡೆಸಿದ್ದಾರೆ.

ಇನ್ನು ಪರಿಶಿಷ್ಟಪಂಗಡದ ಪೈಕಿ ಬಳ್ಳಾರಿಯ ತುಕಾರಾಂ ಹಾಗೂ ನಾಗೇಂದ್ರ ಹೆಸರು ಪರಿಗಣನೆಯಲ್ಲಿದೆ. ಈ ಇಬ್ಬರ ಪೈಕಿ ತುಕಾರಾಂ ಅವರಿಗೆ ಹೆಚ್ಚಿನ ಅವಕಾಶವಿದೆ ಎನ್ನಲಾಗುತ್ತಿದೆ. ಪರಿಶಿಷ್ಟಜಾತಿ ಎಡಗೈ ಸಮುದಾಯದವರ ಪೈಕಿ ಸಂಸದ ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್‌ ಹಾಗೂ ವಿಧಾನಪರಿಷತ್‌ ಸದಸ್ಯ ಧರ್ಮಸೇನ ಅವರ ಹೆಸರು ಪರಿಗಣನೆಯಲ್ಲಿದೆ. ಈ ಪೈಕಿ ಧರ್ಮಸೇನ ಅವರಿಗೆ ಒಂದು ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅಲ್ಪಸಂಖ್ಯಾತರ ಪೈಕಿ ನಜೀರ್‌ ಅಹಮ್ಮದ್‌ ಹಾಗೂ ರಹೀಂ ಖಾನ್‌ ಹೆಸರು ಪರಿಗಣನೆಯಲ್ಲಿದೆ. ಇವರಲ್ಲದೆ, ಒಕ್ಕಲಿಗರೂ ಒಂದು ಸ್ಥಾನ ನೀಡಬೇಕು ಎಂಬ ಬೇಡಿಕೆಯಿದೆ. ಸಂಪುಟದಲ್ಲಿ ಒಕ್ಕಲಿಗ ಸಚಿವರ ಸಂಖ್ಯೆ ಹೆಚ್ಚಿದ್ದರೂ ಕಾಂಗ್ರೆಸ್‌ನಿಂದ ಸಚಿವರಾಗಿರುವವರು ಇಬ್ಬರು (ಶಿವಕುಮಾರ್‌, ಕೃಷ್ಣ ಬೈರೇಗೌಡ). ಹೀಗಾಗಿ ಇನ್ನೊಂದು ಸ್ಥಾನ ನೀಡಬೇಕು ಎಂಬ ಒತ್ತಡವಿದೆ. ಇಬ್ಬರು ಲಿಂಗಾಯತರಿಗೆ ಅವಕಾಶ ನೀಡಬೇಕು ಎಂಬ ಆಗ್ರಹಕ್ಕೆ ಹೈಕಮಾಂಡ್‌ ತಲೆದೂಗಿದರೆ ಆಗ ಒಕ್ಕಲಿಗರಿಗೆ ಅವಕಾಶವಿಲ್ಲ. ಒಂದೇ ಲಿಂಗಾಯತರಿಗೆ ನೀಡುವುದಾದರೆ ಆಗ ಒಕ್ಕಲಿಗರಿಗೂ ಒಂದು ಅವಕಾಶ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಈ ಸಾಧ್ಯತೆಯ ಬೆನ್ನೇರಿ ಎಂ.ಕೃಷ್ಣಪ್ಪ ಹಾಗೂ ರಾಮಲಿಂಗಾರೆಡ್ಡಿ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ಪುತ್ರ ಪ್ರಿಯಕೃಷ್ಣ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಬೇಕಾದರೆ ತಮ್ಮನ್ನು ಸಚಿವರನ್ನಾಗಿ ಮಾಡಬೇಕು. ಸಚಿವನಾಗಿದ್ದರೆ ಆಗ ಪುತ್ರನನ್ನು ಗೆಲ್ಲಿಸಿಕೊಳ್ಳುವುದು ಸುಲಭ ಎಂಬ ವಾದ ಕೃಷ್ಣಪ್ಪ ಅವರದ್ದು. ಇನ್ನು ಹಿರಿತನದ ಆಧಾರದ ಮೇಲೆ ರಾಮಲಿಂಗಾರೆಡ್ಡಿ ಪ್ರಯತ್ನಿಸುತ್ತಿದ್ದು, ಪ್ರಿಯಕೃಷ್ಣ ಗೆಲ್ಲಬೇಕು ಎಂದರೆ ರಾಮಲಿಂಗಾರೆಡ್ಡಿ ಅವರು ಪಾತ್ರ ನಿರ್ವಹಿಸಬೇಕು. ಹೀಗಾಗಿ, ಒಕ್ಕಲಿಗರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತರೆ ಆಗ ಕೃಷ್ಣಪ್ಪ ಹಾಗೂ ರಾಮಲಿಂಗಾರೆಡ್ಡಿ ನಡುವೆ ಒಪ್ಪಂದವೇರ್ಪಡಬೇಕಾಗುತ್ತದೆ ಎಂದು ಮೂಲಗಳು ಹೇಳುತ್ತವೆ.


ಯಾವ ಜಾತಿಗೆ ಯಾರು?

  • ಲಿಂಗಾಯತರು - ಎಂ.ಬಿ.ಪಾಟೀಲ, ಬಿ.ಕೆ. ಸಂಗಮೇಶ್‌, ಬಿ.ಸಿ. ಪಾಟೀಲ್‌, ಶರಣ ಬಸಪ್ಪ ದರ್ಶನಾಪುರ, ಲಕ್ಷ್ಮೇ ಹೆಬ್ಬಾಳ್ಕರ್‌
  • ಪರಿಶಿಷ್ಟಪಂಗಡ- ತುಕಾರಾಂ, ನಾಗೇಂದ್ರ
  • ಪರಿಶಿಷ್ಟಜಾತಿ ಎಡಗೈ- ಧರ್ಮಸೇನ, ರೂಪಾ ಶಶಿಧರ್‌
  • ಅಲ್ಪಸಂಖ್ಯಾತರು- ರಹೀಂ ಖಾನ್‌, ನಜೀರ್‌ ಅಹ್ಮದ್‌
  • ಒಕ್ಕಲಿಗರು (ರೆಡ್ಡಿ)- ಎಂ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ

ಎಸ್‌.ಗಿರೀಶ್‌ ಬಾಬು

Follow Us:
Download App:
  • android
  • ios