ಪ್ರತಿ ಮನೆಗೂ ನೀರು ಪೂರೈಸಲು ವಿಶ್ವಬ್ಯಾಂಕ್ ಸಾಲ ಜಲಜೀವನ ಮಿಷನ್‌ಗೆ ರಾಜ್ಯದ ಪಾಲು ಪಾವತಿಗೆ ಸಾಲಕ್ಕೆ ಸಂಪುಟ ಸಭೆ ನಿರ್ಧಾರ 9152 ಕೋಟಿ ವೆಚ್ಚದ ಯೋಜನೆಗೆ ರಾಜ್ಯದ ಪಾಲು 45% ನಗರ ಸ್ಥಳೀಯ ಸಂಸ್ಥೆಗಳ 3885 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆಗೂ ಅಸ್ತು
ಬೆಂಗಳೂರು (ಜ.07): ಗ್ರಾಮೀಣ ಭಾಗದ (Rural india ) ಮನೆಗಳಿಗೆ ನಳ ನೀರು ಸಂಪರ್ಕ ಒದಗಿಸುವ ಜಲ ಜೀವನ ಮಿಷನ್ (Jal jeevan Mission) ಯೋಜನೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ (Govt of Karnataka) ಪಾಲು ಪಾವತಿಸುವ ಸಂಬಂಧ ವಿಶ್ವಬ್ಯಾಂಕ್‌ನಿಂದ ಸಾಲ ಪಡೆಯಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಎಲ್ಲಾ ಹಳ್ಳಿಗಳ ಮನೆಗಳಿಗೆ ನಳ ನೀರು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ (Govt) ಕಾರ್ಯೋನ್ಮುಖವಾಗಿದೆ. ಜಲ ಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ತಲಾ ಶೇ. 45ರಷ್ಟುಮತ್ತು ಪಂಚಾಯತ್‌ಗಳು ಶೇ.10ರಷ್ಟುಹಣವನ್ನು ಒದಗಿಸಬೇಕಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ (JC Madhuswamy), ಒಟ್ಟು 9152 ಕೋಟಿ ರು. ಮೊತ್ತದ ಯೋಜನೆಯಾಗಿದ್ದು, ಈ ಯೋಜನೆ ಅನುಷ್ಠಾನದಿಂದ ಗ್ರಾಮೀಣ ಭಾಗದ ಮನೆಗಳಿಗೆ ನಳ ನೀರು ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಪೌರಸಂಸ್ಥೆ ಅಭಿವೃದ್ಧಿಗೆ 3885 ಕೋಟಿ ರು.:
ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು 3885 ಕೋಟಿ ರು. ಮೊತ್ತದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ (Karnataka Cabinet) ಸಭೆ ಒಪ್ಪಿಗೆ ನೀಡಿದೆ. 2022-23ರಿಂದ 24-25ನೇ ಸಾಲಿನ ಕ್ರಿಯಾ ಯೋಜನೆಯನ್ನು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಮೂಲಸೌಲಭ್ಯಗಳ ಕೊರತೆ ನೀಗಿಸಲು ರೂಪಿಸಲಾಗಿದೆ. ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯಿಂದ 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆಯ ನಗರಸಭೆಗಳಿಗೆ ತಲಾ 40 ಕೋಟಿ ರು.ನಂತೆ ಒಟ್ಟು 920 ಕೋಟಿ ರು. ನಿಗದಿ ಮಾಡಲಾಗಿದೆ. ಉಳಿದ 38 ನಗರಸಭೆಗಳಿಗೆ ತಲಾ 30 ಕೋಟಿ ರು.ನಂತೆ 1140 ಕೋಟಿ ರು. ಹಂಚಿಕೆ ಮಾಡಲಾಗಿದೆ. 124 ಪುರಸಭೆಗಳಿಗೆ ತಲಾ 10 ಕೋಟಿ ರು.ನಂತೆ 1240 ಕೋಟಿ ರು. ಮತ್ತು 117 ಪಟ್ಟಣ ಪಂಚಾಯಿತಿಗಳಿಗೆ ತಲಾ 5 ಕೋಟಿ ರು.ನಂತೆ 585 ಕೋಟಿ ರು. ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಚುಂಚನಗಿರಿ ಮಠಕ್ಕೆ 22 ಎಕರೆ ಮಂಜೂರು
ರಾಜ್ಯದ ವಿವಿಧೆಡೆ ವಿವಿಧ ಉದ್ದೇಶಗಳಿಗಾಗಿ ಆದಿಚುಂಚನಗಿರಿ (Adichunchanagiri) ಮಠ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ಮೈಸೂರಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 16.5 ಕೋಟಿ ರು. ಹೆಚ್ಚುವರಿ ಹಣ (Money) ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಹಿರಿಸಾವೆ ಬಳಿ ಶಾಲೆ, ವಿದ್ಯಾರ್ಥಿನಿಲಯ, ಧ್ಯಾನಮಂದಿರ, ಅನಾಥಾಶ್ರಮ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠಕ್ಕೆ 22 ಎಕರೆ ಭೂಮಿ ನೀಡಲು ಅನುಮೋದನೆ ನೀಡಲಾಗಿದೆ.
ಆಯುಷ್ ಇಲಾಖೆಯಲ್ಲಿ ಹುದ್ದೆಗಳಿಗೆ ನೇರ ನೇಮಕ
ಆಯುಷ್ ಇಲಾಖೆಯಲ್ಲಿ (Ayush Department) ಖಾಲಿ ಇರುವ ಶುಶ್ರೂಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಖಾಲಿ ಇರುವ 177 ಹುದ್ದೆಗಳ ಪೈಕಿ 80 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಂದು ವರ್ಷಗಳ ಕಾಲ ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡಿದ್ದರೆ 2 ಅಂಕಗಳ ಗ್ರೇಸ್‌ನಂತೆ 10 ವರ್ಷ ಕೆಲಸ ಮಾಡಿರುವವರಿಗೆ 20 ಅಂಕಗಳವರೆಗೆ ಗ್ರೇಸ್ ನೀಡಿ ನೇಮಕಕ್ಕೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ, ವಯೋಮಿತಿಯಲ್ಲಿಯೂ ಸಡಿಲಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿಯ 19.73 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಕೋಲಾರ ಜಿಲ್ಲೆ (Kolar) ಮುಳಬಾಗಿಲು ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ 16.80 ಕೋಟಿ ರು. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಉಡುಪಿ (Udupi) ಜಿಲ್ಲೆ ಕಾಪು ತಾಲೂಕಿನ ಜನಾರ್ದನ ದೇವಾಲಯಕ್ಕೆ ಸೇರಿದ ಪಡು ಗ್ರಾಮದ ಸರ್ವೆ ನಂ 37/10ರಲ್ಲಿನ 0.10 ಎಕರೆ ಜಾಗವನ್ನು ಕಾಪು ಬಂಟರ ಸಂಘಕ್ಕೆ ಗುತ್ತಿಗೆ ಆಧಾರದ ಮೇಲೆ ಮಂಜೂರು ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಮೈಸೂರಿನ ಹುಣಸೂರು ತಾಲೂಕು ಮೂಕನಹಳ್ಳಿ ಗ್ರಾಮದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ತಾಲೂಕು ಒಕ್ಕಲಿಗರ ಸಂಘಕ್ಕೆ ಮಂಜೂರು ಮಾಡಿರುವ ಎರಡು ಎಕರೆ ಜಮೀನನ್ನು ಶೈಕ್ಷಣಿಕ ಜಾಗ ಎಂದು ತಿದ್ದುಪಡಿ ಮಾಡಿ ನೀಡಲಾಗಿದೆ. ಮೈಸೂರಿನ ಜೆ.ಪಿ.ನಗರ 12ನೇ ಹಂತದ ಸಿ ಬ್ಲಾಕ್‌ನಲ್ಲಿ 4732.80 ಚ.ಮೀ. ವಿಸ್ತೀರ್ಣದ ಮೈಸೂರು ನಗರಾಭಿವೃದ್ಧಿ ಸೌಲಭ್ಯ ನಿವೇಶನವನ್ನು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಸಮಿತಿ ಟ್ರಸ್ಟ್‌ಗೆ ದೇವಾಲಯ ನಿರ್ಮಾಣಕ್ಕಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಮೇಲೆ ಹಂಚಿಕೆ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.
ಈ ಯೋಜನೆಯಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಿದ ಒಟ್ಟು ಮೊತ್ತದಲ್ಲಿ ಶೇ.24.10ರಷ್ಟುಹಣವನ್ನು ಪರಿಶಿಷ್ಟಜಾತಿ/ಗಿರಿಜನ ಉಪಯೋಜನೆಗಳಿಗೆ ಸೇರಿದ ಜನ ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಶೇ.5ರಷ್ಟುಅನುದಾನವನ್ನು ಅಂಗವಿಕಲ ಕಲ್ಯಾಣಕ್ಕಾಗಿ ಮತ್ತು ಶೇ.7.25ರಷ್ಟುಅನುದಾನವನ್ನು ಇತರೆ ಬಡಜನರ ಕಲ್ಯಾಣಕ್ಕಾಗಿ ಮತ್ತು ಮೂಲಸೌಕರ್ಯ ಒದಗಿಸಲು ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
