ಶಕ್ತಿ ಯೋಜನೆ ಎಫೆಕ್ಟ್; ಸಾರಿಗೆ ಇಲಾಖೆಗೆ ₹2000 ಕೋಟಿ ಸಾಲ ಪಡೆಯಲು ಒಪ್ಪಿಗೆ ಕೊಟ್ಟ ಸರ್ಕಾರ!
ಶಕ್ತಿ ಯೋಜನೆಯಿಂದ ನಗದೀಕರಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ 2,000 ಕೋಟಿ ರೂ. ಸಾಲ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರದಿಂದಲೂ ಅನುಮತಿಯನ್ನು ನೀಡಿದೆ.
ಬೆಂಗಳೂರು (ಡಿ.31): ಶಕ್ತಿ ಯೋಜನೆ ಪರಿಣಾಮದಿಂದಾಗ ಸಾಲದ ಸುಳಿಗೆ ಸಿಲುಕಿರುವ ಹಾಗೂ ನೌಕರರ ವೇತನ ಸೇರಿದಂತೆ ಇತರೆ ಪಾವತಿಗಳನ್ನು ಬಾಕಿ ಉಳಿಸಿಕೊಂಡ ಪರಿಣಾಮ ಸಾರಿಗೆ ಇಲಾಖೆಗೆ (ಕೆಎಸ್‌ಆರ್‌ಟಿಸಿ) ಸಾಲ ಪಡೆಯುವುದಕ್ಕೆ ಮುಂದಾಗಿದೆ. ಇದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದ್ದು, 2,000 ಕೋಟಿ ರೂ. ಸಾಲ ಪಡೆಯುವಂತೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.
ಹೌದು, ಶಕ್ತಿ ಯೋಜನೆ ಪರಿಣಾಮದಿಂದಾಗ ಸಾರಿಗೆ ಇಲಾಖೆಗೆ ಆದಾಯ ಹೆಚ್ಚಳವಾಗಿದ್ದರೂ ನಗದೀಕರಣ ಕಡಿಮೆಯಾಗಿದೆ. ಹೀಗಾಗಿ, ಸರ್ಕಾರ ಹಣ ಪಾವತಿ ವಿಳಂಬ ಆಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಸಾಲ ಮಾಡುವುದೊಂದೇ ದಾರಿಯಾಗಿದೆ. ಆರ್ಥಿಕ ಇಲಾಖೆಯಿಂದಲೂ ಸಾಲ ಪಡೆಯುವುದಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದ 4 ಸಾರಿಗೆ ನಿಗಮಗಳಿಗೆ (ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಬಿಎಂಟಿಸಿ) ಒಟ್ಟು 2,000 ಕೋಟಿ ಸಾಲ ಪಡೆಯಲು ಅನುಮತಿ ದೊರೆತಿದೆ. ಸಾರಿಗೆ ಇಲಾಖೆಯಿಂದ ಸಾಲ ಪಡೆಯಲು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಹಲವು ಅಂಶಗಳನ್ನ ಉಲ್ಲೇಖಿಸಿತ್ತು.
ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದೆ. ಆದರೆ, ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿರುತ್ತದೆ. ನಗದು ಹರಿವಿನಲ್ಲಿ ಕೊರತೆ ಉಂಟಾಗಿರುತ್ತದೆ. 4 ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗಧೀಕರಣ, ಇಂಧನ ಸರಬರಾಜುದಾರರ ಬಾಕಿ, ಅಪಘಾತ ಪರಿಹಾರ ಪ್ರಕರಣಗಳು, ನಿವೃತ್ತರಿಗೆ ಪರಿಷ್ಕೃತ ಉಪಧನ ಹಾಗೂ ಸಾಲವೂ ಸೇರಿದಂತೆ ನವೆಂಬರ್-2024 ಅಂತ್ಯಕ್ಕೆ ಒಟ್ಟು 6,330.25 ಕೋಟಿ ರೂ. ಬಾಕಿ ಇದೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿಗೆ ಆರ್ಥಿಕ ಸಂಕಷ್ಟ: ಸಾರಿಗೆ ನಿಗಮಗಳು ಮತ್ತಷ್ಟು ಸಾಲ ಮಾಡಲು ಒಪ್ಪಿಗೆ!
ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆ ಪಾವತಿ ಮಾಡಲು ಒಟ್ಟು 5,527.46 ಕೋಟಿ ರೂ.ಗಳ ಅವಶ್ಯಕತೆ ಇದೆ. ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ 2,901.53 ಕೋಟಿ ರೂ.. ಇಂಧನದ ಬಾಕಿ ಮೊತ್ತ 827.37 ಕೋಟಿ ರೂ. ಸೇರಿ ಒಟ್ಟು 3,728.90 ಕೋಟಿ ರೂ.ಗಳ ಸಾಲದ ಅವಶ್ಯಕತೆ ಇರುತ್ತದೆ. ಸದರಿ ಸಾಲದ ಮರುಪಾವತಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವು ಭರಿಸುವಂತೆ ಕೋರಿದೆ. ಸಾರಿಗೆ ಇಲಾಖೆ ಪ್ರಸ್ತಾವನೆಯನ್ನ ಆರ್ಥಿಕ ಇಲಾಖೆ ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ 2,000 ಕೋಟಿ ರೂ. ಸಾಲ ಪಡೆಯಲು ಆರ್ಥಿಕ ಇಲಾಖೆ ಅನುಮತಿ ಕೊಟ್ಟಿದೆ.
ಸಾರಿಗೆ ಸಂಸ್ಥೆಗಳ ವಿಭಾಗವಾರು ಸಾಲ ಪಡೆಯಲು ಅನುಮತಿ:
ಕ.ರಾ.ರ.ಸಾ.ನಿಗಮ (KSRTC) - 623.80 ಕೋಟಿ
ಬೆಂ.ಮ.ಸಾ.ಸಂಸ್ಥೆ (BMTC) - 589.20 ಕೋಟಿ
ವಾ.ಕ.ರ.ಸಾ.ಸಂಸ್ಥೆ (NWKRTC) - 646.00 ಕೋಟಿ
ಕ.ಕ.ರ.ಸಾ.ನಿಗಮ (KKRTC) - 141.00 ಕೋಟಿ ರೂ. ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ.
ಇದನ್ನೂ ಓದಿ: ಇದೆಂಥಾ ವಿಚಿತ್ರ: ಎಲೆಕ್ಟ್ರಿಕ್ ಕಾರನ್ನು ಎಳೆದೊಯ್ದು ಗ್ಯಾರೇಜ್‌ಗೆ ಬಿಟ್ಟ ಜೋಡೆತ್ತುಗಳು!
ಸಾಲ ಪಡೆಯಲು ಷರತ್ತು ಹಾಕಿದ ಆರ್ಥಿಕ ಇಲಾಖೆ
- ಸದರಿ ಸಾಲದ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಂದ ಮರುಪಾವತಿ ಮಾಡಬೇಕು.
- ಸದರಿ ಮೊತ್ತವನ್ನು ಆಧ್ಯತೆಯ ಮೇರೆಗೆ ಇಂಧನ ಬಾಕಿ ಪಾವತಿಸಲು ಬಳಸಿಕೊಳ್ಳಬೇಕು.
- 4 ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕ್ರೋಢೀಕೃತ ಟೆಂಡರ್‌ನ್ನು ಕರೆಯಬೇಕು.
- ಈ ಕುರಿತು ಬಳಕೆ ಪ್ರಮಾಣ ಪತ್ರ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.