ಬೆಂಗಳೂರು :  ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮುಗಿದ ಬೆನ್ನಲ್ಲೇ ಮಂಗಳವಾರ ಹೊರಬೀಳಲಿರುವ ಫಲಿತಾಂಶದತ್ತ ಎಲ್ಲರ ದೃಷ್ಟಿನೆಟ್ಟಿದ್ದು, ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕುತೂಹಲ ಗರಿಗೆದರಿದೆ.

ಆದರೆ, ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಯಥಾಸ್ಥಿತಿ ಕಾದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ಮಂಗಳವಾರವೇ ಇದರ ಸತ್ಯಾಂಶ ಹೊರಬೀಳಲಿದೆ. ಇದರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಬಿ.ಶ್ರೀರಾಮುಲು, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ಸಾಮರ್ಥ್ಯವೂ ಒರೆಗೆ ಹಚ್ಚಿದಂತಾಗಲಿದೆ.

ದೀಪಾವಳಿ ಹಬ್ಬದ ದಿನದಂದೇ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳುವುದರಿಂದ ಈ ಫಲಿತಾಂಶ ಯಾವ ಪಕ್ಷಕ್ಕೆ ಬಂಪರ್‌ ಕೊಡುಗೆ ನೀಡಲಿದೆ, ಯಾರಿಗೆ ಠುಸ್‌ ಪಟಾಕಿಯಾಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಐದು ಕ್ಷೇತ್ರಗಳ ಪೈಕಿ ಸಾಕಷ್ಟುಕುತೂಹಲ ಮೂಡಿಸಿರುವ ಕ್ಷೇತ್ರ ಗಣಿನಾಡು ಬಳ್ಳಾರಿ.

ಉಪಚುನಾವಣೆ ನಡೆದಿರುವ ಐದು ಕ್ಷೇತ್ರಗಳಲ್ಲಿಯೂ ಹಿಂದೆ ಇದ್ದ ಪಕ್ಷಗಳ ಅಭ್ಯರ್ಥಿಗಳೇ ಜಯಭೇರಿ ಬಾರಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಅಂದರೆ, ಮಂಡ್ಯ ಲೋಕಸಭಾ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಬಹುದು ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಹಿಂದೆ ಈ ಕ್ಷೇತ್ರಗಳಲ್ಲಿ ಆಯಾ ಪಕ್ಷಗಳೇ ಜಯ ಗಳಿಸಿದ್ದವು. ಆ ಪಕ್ಷಗಳ ಸಂಸದರು, ಶಾಸಕರ ತೆರವಿನಿಂದ ಎದುರಾಗಿದ್ದ ಚುನಾವಣೆಯಲ್ಲೇ ಜನರು ಮತ್ತೆ ಅದೇ ಪಕ್ಷಕ್ಕೆ ಮನ್ನಣೆ ನೀಡುತ್ತಾರೆಯೇ ಎಂಬುದು ಕುತೂಹಲವಾಗಿದೆ.

ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್‌ ಪ್ರಾಬಲ್ಯವಿದೆ. ಕಾಂಗ್ರೆಸ್‌ ಅಭ್ಯರ್ಥಿಯೂ ಇಲ್ಲಿ ಕಣದಲ್ಲಿ ಇದ್ದಿದ್ದರೆ ಚಿತ್ರಣ ನಿರೀಕ್ಷಿಸುವುದು ಕಷ್ಟವಾಗುತ್ತಿತ್ತು. ಹೋರಾಟ ತೀವ್ರಗೊಳ್ಳುವುದು ನಿಶ್ಚಿತವಾಗಿತ್ತು. ಆದರೆ, ಇಲ್ಲಿ ಬಿಜೆಪಿಯ ಬಲವೂ ಕಡಮೆ. ಮೇಲಾಗಿ ರಾಮನಗರ ಕ್ಷೇತ್ರದಲ್ಲಿ ಮತದಾನಕ್ಕೂ ಎರಡು ದಿನ ಮೊದಲು ಬಿಜೆಪಿ ಅಭ್ಯರ್ಥಿಯಾಗಿದ್ದ ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿದ್ದರಿಂದ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿ ಅವರಿಗೆ ಫಲಿತಾಂಶ ಕೇಕ್‌ ವಾಕ್‌ ರೀತಿಯಾಗುತ್ತದೆ ಎನ್ನಲಾಗುತ್ತಿದೆ. ಮಂಡ್ಯದಲ್ಲೂ ಜೆಡಿಎಸ್‌ನ ಅಬ್ಬರ ಜೋರಾಗಿಯೇ ಇದೆ.

ಇನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತೀವ್ರ ಪೈಪೋಟಿಯಿದೆ. ಕಾಂಗ್ರೆಸ್‌ ಬೆಂಬಲದಿಂದಾಗಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರು ಬಿಜೆಪಿಯ ಬಿ.ವೈ.ರಾಘವೇಂದ್ರ ಅವರಿಗೆ ಬಲವಾದ ಪೆಟ್ಟು ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಇದು ಪ್ರತಿಷ್ಠೆಯ ಕಣವಾಗಿದ್ದರಿಂದ ಸುಲಭವಾಗಿ ಬಿಟ್ಟು ಕೊಡಲಿಕ್ಕಿಲ್ಲ ಎನ್ನಲಾಗುತ್ತಿದೆ.

ಗಣಿ ನಾಡು ಬಳ್ಳಾರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ವರ್ಸಸ್‌ ಬಿಜೆಪಿ ಮುಖಂಡ ಶ್ರೀರಾಮುಲು ಎನ್ನುವಂತಾಗಿದೆ. ಈ ಮೂವರು ಮುಖಂಡರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕ್ಷೇತ್ರದಲ್ಲಿ ನಡೆದಷ್ಟುಚುನಾವಣಾ ಅಬ್ಬರ ಇನ್ನುಳಿದ ಕ್ಷೇತ್ರಗಳಲ್ಲಿ ನಡೆದಿಲ್ಲ. ಕೊನೆಯ ಕ್ಷಣದಲ್ಲಿ ರಾಮುಲು ಅವರು ತಮ್ಮ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳುವಲ್ಲಿ ಸಫಲರಾಗುತ್ತಾರಾ ಎಂಬ ಕುತೂಹಲವಿದೆ.

ಹಾಲಿ ಶಾಸಕರ ಅಕಾಲಿಕ ನಿಧನದಿಂದ ಎದುರಾಗಿರುವ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅನುಕಂಪದ ಅಲೆ ಬೀಸುತ್ತಾ ಅಥವಾ ಇಲ್ಲವೇ ಎಂಬುದು ನೋಡಬೇಕಾಗಿದೆ. ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅವರ ಪುತ್ರನನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಬಿಜೆಪಿ ಕಳೆದ ಎರಡು ಬಾರಿ ಸೋತಿದ್ದ ಮಾಜಿ ಶಾಸಕ ಶ್ರೀಕಾಂತ್‌ ಕುಲಕರ್ಣಿ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಅನುಕಂಪದ ಅಲೆಯನ್ನು ತಲೆಕೆಳಗಾಗಿಸಿ ಬಿಜೆಪಿ ಜಯಭೇರಿ ಬಾರಿಸಬಹುದಾ ಎಂಬುದರ ಬಗ್ಗೆ ಕುತೂಹಲವಿದೆ.