ರಾಜ್ಯದಲ್ಲಿ ಬಜೆಟ್ ಅಧಿವೇಶನ ಫೆಬ್ರುವರಿ 6 ರಿಂದ ಆರಂಭವಾಗಲಿದ್ದು, ಇದೇ ವೇಳೆ ಕಾಂಗ್ರೆಸ್ ಅತೃಪ್ತರ ನಡೆಗಳು ಇನ್ನಷ್ಟು ನಿಗೂಢವಾಗಿವೆ. ಇದೇ ವೇಳೆ ಬಿಜೆಪಿಯಲ್ಲಿ ಅತೃಪ್ತರ ರಾಜೀನಾಮೆ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡಿದೆ.
ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ಸಿನ ಅತೃಪ್ತ ಶಾಸಕರ ನಿಗೂಢ ನಡೆಯ ಮಧ್ಯೆಯೇ ಬುಧವಾರದಿಂದ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಕಳೆದ ಹಲವು ದಿನಗಳಿಂದ ಕೇಳಿಬರುತ್ತಿರುವ ಸರ್ಕಾರದ ಅಸ್ಥಿರತೆಯ ವದಂತಿಗಳಿಗೆ ಈ ಅಧಿವೇಶನದಲ್ಲಿ ತೆರೆ ಬೀಳುವ ಸಾಧ್ಯತೆಯಿದೆ.
ತಮ್ಮ ಸರ್ಕಾರದ ಭದ್ರತೆಗೆ ಯಾವುದೇ ತೊಂದರೆಯಿಲ್ಲ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖರ ಅಚಲ ವಿಶ್ವಾಸದ ನಡುವೆಯೂ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಕಂಡುಬರುತ್ತಿದೆ. ಹೀಗಾಗಿ, ಬಜೆಟ್ ಅಧಿವೇಶನ ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಆಡಳಿತಾರೂಢ ಪಕ್ಷಗಳ ಪ್ರಕಾರ ಕೇವಲ ನಾಲ್ಕು ಜನ ಅತೃಪ್ತ ಶಾಸಕರು ಮಾತ್ರ ಸಂಪರ್ಕದಿಂದ ದೂರ ಉಳಿದಿದ್ದಾರೆ. ಆದರೆ, ಬಿಜೆಪಿ ಪ್ರಕಾರ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಲಿದೆ. ಅವರು ಅಧಿವೇಶನದ ಮೊದಲ ದಿನವೇ ರಾಜೀನಾಮೆ ನೀಡಿದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುವುದು ಕಷ್ಟವಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಸದ್ಯದ ಮಾಹಿತಿ ಅನುಸಾರ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಅತೃಪ್ತ ಶಾಸಕರು ಮಾತ್ರ ಸರ್ಕಾರಕ್ಕೆ ಕಂಟಕ ತರುವ ಪ್ರಯತ್ನ ಮಾಡಬಹುದು. ಆದರೆ, ಈ ಅತೃಪ್ತರ ಸಂಖ್ಯೆ ಹೆಚ್ಚಾಗದೇ ಇದ್ದಲ್ಲಿ ಸಮ್ಮಿಶ್ರ ಸರ್ಕಾರ ನಿಟ್ಟುಸಿರು ಬಿಡಲಿದೆ. ಒಂದು ವೇಳೆ ಅತೃಪ್ತರ ಸಂಖ್ಯೆ ಹೆಚ್ಚಿದಲ್ಲಿ ಮಾತ್ರ ಸರ್ಕಾರಕ್ಕೆ ಸಂಕಷ್ಟಉಂಟಾಗುವ ಸಂಭವೂ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಇದ್ಯಾವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿಗಳು ಸೋಮವಾರವೂ ಬಜೆಟ್ ಸಿದ್ಧತೆಯಲ್ಲಿ ನಿರತರಾಗಿದ್ದರು. ಸಂಬಂಧಪಟ್ಟಅಧಿಕಾರಿಗಳೊಂದಿಗೆ ಸತತ ಸಭೆ ನಡೆಸಿ ಬಜೆಟ್‌ಗೆ ಅಂತಿಮ ಸ್ವರೂಪ ನೀಡುವ ಪ್ರಯತ್ನ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಬುಧವಾರ ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮರುದಿನ ಗುರುವಾರ ಯಾವುದೇ ಕಲಾಪ ಇರುವುದಿಲ್ಲ. ಅದರ ಮರುದಿನ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಈ ತಿಂಗಳ 15ರವರೆಗೆ ವಿಧಾನಮಂಡಲದ ಕಾರ್ಯ ಕಲಾಪ ನಡೆಯಲಿದೆ.
ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ಏನೇ ನಡೆದರೂ ಈ ಅಧಿವೇಶನ ಮುಗಿಯುವುದರೊಳಗಾಗಿ ನಡೆಯಬಹುದು. ಅದಾದ ನಂತರ ಯಾವುದೇ ಪ್ರಯತ್ನ ಮಾಡುವ ಸಾಧ್ಯತೆ ತೀರಾ ಕಡಿಮೆ. ನಂತರ ಲೋಕಸಭಾ ಚುನಾವಣೆಯ ಸಿದ್ಧತೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನಿರತವಾಗಲಿವೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 5, 2019, 8:26 AM IST