ಬೆಂಗಳೂರು[ಫೆ.19]: ನೂತನ ಸಚಿವರನ್ನು ಸದನಕ್ಕೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಎಲ್ಲಾ ಸಚಿವರೂ ಇಲ್ಲಿಂದ (ಕಾಂಗ್ರೆಸ್‌) ಹೋದವರೇ ಆಗಿರುವುದರಿಂದ ನಮಗೆ ಪ್ರತ್ಯೇಕವಾಗಿ ಪರಿಚಯಿಸಬೇಕಾಗಿಲ್ಲ. ಅವರನ್ನು ನಿಮಗೆ ಪರಿಚಯಿಸಿರುವುದೇ ನಾವು...

ತಮ್ಮ ಸಂಪುಟಕ್ಕೆ ನೂತನವಾಗಿ ಸೇರಿದ ಸಚಿವರನ್ನು ಪರಿಚಯ ಮಾಡಲು ಎದ್ದುನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಗಿ ಚುಚ್ಚಿದ ರೀತಿಯಿದು.

'ಯಡಿಯೂರಪ್ಪಗೆ ಮದುವೆ ಮಾಡಲಾಗಿದೆ, ಆದರೆ ಪ್ರಸ್ತ ಮಾಡಲು ಬಿಡ್ತಿಲ್ಲ'

ಮಂಗಳವಾರ ವಿಧಾನಸಭೆಯಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಸೂಚನೆಯಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಲು ಮುಂದಾದರು. ಈ ವೇಳೆ ಆನಂದ್‌ ಸಿಂಗ್‌, ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವರು ಸದಸ್ಯರು ಹಾಜರಿರಲಿಲ್ಲ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನೂತನ ಸಚಿವರೇ ಸದನದಲ್ಲಿ ಹಾಜರಿಲ್ಲ. ನೀವು ಯಾರಿಗೆ ಯಾರನ್ನು ಪರಿಚಯ ಮಾಡಿಕೊಡುತ್ತಿದ್ದೀರಿ ಎಂಬುದೇ ತಿಳಿಯುವುದಿಲ್ಲ. ಅವರಿಗೆ ಸದನಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲದಿದ್ದರೆ ನೀವು ಏಕೆ ಪರಿಚಯ ಮಾಡಿಕೊಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸರ್ಕಾರ ಬೀಳಿಸಿದ 17 ಶಾಸಕರ ಫೋಟೋಕ್ಕೆ ಪೂಜೆ ಮಾಡಬೇಕು!'

ಜತೆಗೆ, ಅವರೆಲ್ಲಾ ಇಲ್ಲಿಂದಲೇ ಹೋದವರು. ಅವರ ಪರಿಚಯವನ್ನು ಪ್ರತ್ಯೇಕವಾಗಿ ಮಾಡಿಕೊಡುವ ಅಗತ್ಯವಿಲ್ಲ. ನಾವೇ ಅವರನ್ನು ನಿಮಗೆ ಪರಿಚಯಿಸಿದ್ದೇವೆ ಎಂದಾಗ ಕೆಲಹೊತ್ತು ಸದನ ನಗೆಗಡಲಲ್ಲಿ ತೇಲಿತು.

ಬಳಿಕ ಬಿ.ಎಸ್‌. ಯಡಿಯೂರಪ್ಪ ಅವರು, ನೂತನ ಸಚಿವರಾದ ಬೈರತಿ ಬಸವರಾಜು, ಬಿ.ಸಿ. ಪಾಟೀಲ್‌, ಡಾ.ಕೆ. ಸುಧಾಕರ್‌, ಶಿವರಾಂ ಹೆಬ್ಬಾರ್‌ ಅವರನ್ನು ಸದನಕ್ಕೆ ಪರಿಚಯಿಸಿದರು.

'ಟ್ರಂಪ್‌ಗೆ ಆರ್ಥಿಕ ಕುಸಿತ ಕಾಣದಂತೆ ಯಾವ ಗೋಡೆ ಕಟ್ತೀರಿ?'