ಸರ್ಕಾರ ಬೀಳಿಸಿದ 17 ಶಾಸಕರ ಫೋಟೋಕ್ಕೆ ಪೂಜೆ ಮಾಡಬೇಕು!| ಲೆಹರ್‌ ಸಿಂಗ್‌ ಹೇಳಿಕೆಯಿಂದ ಮೇಲ್ಮನೆಯಲ್ಲಿ ಕುತೂಹಲಕರ ಚರ್ಚೆ| ಆಪರೇಷನ್‌ ಮಾಡಿದ್ದನ್ನು ಹೇಳಿಕೊಳ್ಳಲು ನಾಚಿಕೆಯಿಲ್ಲವೇ?: ವಿಪಕ್ಷ

ಬೆಂಗಳೂರು[ಫೆ.19]: ಒಂದೂವರೆ ವರ್ಷದ ಅಪವಿತ್ರ ಸರ್ಕಾರ ಬೀಳಲು ಕಾರಣರಾದ ಎಲ್ಲಾ 17 ಶಾಸಕರ ಫೋಟೋ ಇಟ್ಟು ಹೂವಿನ ಹಾರ ಹಾಕಿ ಪೂಜೆ ಮಾಡಬೇಕು ಎಂಬ ಬಿಜೆಪಿ ಸದಸ್ಯ ಲೆಹರ್‌ಸಿಂಗ್‌ ನೀಡಿದ ಹೇಳಿಕೆ ಸದನದಲ್ಲಿ ಕುತೂಹಲಕರ ಚರ್ಚೆಗೆ ನಾಂದಿ ಹಾಡಿತು.

ಭೋಜನ ವಿರಾಮದ ನಂತರ ಪರಿಷತ್‌ ಕಲಾಪ ಸಮಾವೇಶಗೊಂಡ ವೇಳೆ ಮಾತನಾಡಿದ ಲೆಹರ್‌ಸಿಂಗ್‌ ಅವರು, ಹಿಂದಿನ ಅಪವಿತ್ರ ಸರ್ಕಾರ ಬೀಳಲು 17 ಶಾಸಕರ ರಾಜೀನಾಮೆ ಕಾರಣ. ಆದ್ದರಿಂದ ಅವರ ಫೋಟೋ ಇಟ್ಟು ಪೂಜೆ ಮಾಡಿ ಅಭಿನಂದಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ಸರ್ಕಾರದಿಂದ ಯಾವುದೇ ಸಾಧನೆಯಾಗಿಲ್ಲ. ಶಾಸಕರ ಮೇಲೆ ಆಪರೇಷನ್‌ ನಡೆಸಿ, ರಾಜೀನಾಮೆ ಕೊಡುವಂತೆ ಮಾಡಿ ಅಕ್ರಮವಾಗಿ ಅಧಿಕಾರಕ್ಕೆ ಬಂದದ್ದನ್ನು ಹೊಗಳಲು ನಾಚಿಕೆ ಆಗುವುದಿಲ್ಲವೇ ಎಂದು ಕಿಡಿಕಾರಿದರು.

ಈ ವೇಳೆ ಮಾತನಾಡಿದ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಅವರು, ಜೀವಂತವಿದ್ದವರ ಫೋಟೋಗೆ ಹೂಹಾರ ಹಾಕಿ ಪೂಜೆ ಮಾಡಿದರೆ ನಮ್ಮಲ್ಲಿ ಬೇರೆಯೇ ಅರ್ಥ ಬರುತ್ತದೆ ಎಂದು ಲೇವಡಿ ಮಾಡಿದರು.

ರಾಜ್ಯಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಸಿದ್ದುಕೈಗೆ ಸಿಕ್ಕಿತು ಹೊಸ ಅಸ್ತ್ರ!

ಇದಕ್ಕೆ ಕ್ಯಾರೆ ಎನ್ನದ ಲೆಹರ್‌ಸಿಂಗ್‌, ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಇನ್ನು ಮುಂದೆ ಪ್ರತಿಪಕ್ಷದಲ್ಲಿ ಕೂರುವುದನ್ನು ರೂಢಿಸಿಕೊಳ್ಳಬೇಕು. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರ ಸರ್ಕಾರ ಭದ್ರವಾಗಿ ಇರಲಿದೆ. ಆ ನಂತರವೂ ಕೂಡ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದರು.

ಈ ನಡುವೆ ಲೆಹರ್‌ಸಿಂಗ್‌ ಅವರು ವಿವಿಧ ಉಪ ವಿಷಯಗಳನ್ನು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್‌ಚಂದ್ರಶೆಟ್ಟಿಅವರು, ನೀವು ಬೇಗ ಮಾತು ಮುಗಿಸಿ. ಆಮೇಲೆ ಚಿತ್ರದುರ್ಗಕ್ಕೆ ಹೋಗಬೇಕಲ್ಲ ಅಂದು. ಅದಕ್ಕೆ ಸಿಂಗ್‌ ಪ್ರತಿಕ್ರಿಯೆ ನೀಡಿ, ಇಲ್ಲಾ ಸಂಜೆ ಹೋಗುತ್ತೇನೆ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ರಾಜ್ಯಪಾಲರ ಭಾಷಣದ ಬಗ್ಗೆ ಹೆಚ್ಚು ಗಂಭೀರ ಪ್ರಸ್ತಾಪ ಮಾಡದ ಲೆಹರ್‌ಸಿಂಗ್‌ ಅವರು, ಮಾತಿನ ಭರದಲ್ಲಿ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಹೇಗೆ ಗೆಲುವು ಪಡೆಯಿತು, ಅದಕ್ಕೆ ಕೇಜ್ರಿವಾಲ್‌ ಬಳಸಿದ ತಂತ್ರಗಾರಿಕೆ ಏನು ಎಂಬುದನ್ನು ಪ್ರಸ್ತಾಪಿಸಿದರು. ಸಾಮಾನ್ಯ ಜನರಿಗೆ ಉತ್ತಮ ಆಸ್ಪತ್ರೆ ಸೌಲಭ್ಯ, ರಸ್ತೆಗಳನ್ನು ನೀಡಿ ಗಲ್ಲಿಗಳನ್ನು ಸ್ವಚ್ಛ ಮಾಡಿದ್ದಾರೆ. ಇಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ, ಜನಸಾಮಾನ್ಯರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಮುಂದಾಗುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಚಾಟಿ ಬೀಸಲು ಆರಂಭಿಸಿದರು.

ಪೊಲೀಸ್‌ ಕಮಿಷನರ್‌ಗೆ ವಿಧಾನಸಭೆಯಲ್ಲಿ ತಡೆ!

ಕೂಡಲೇ ಪಕ್ಕದಲ್ಲಿ ಕುಳಿತಿದ್ದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು, ತಾವು ಏನು ಮಾತಾಡುತ್ತಿದ್ದೀರಾ ಎಂದು ಎಚ್ಚರಿಸಿದರು. ಪ್ರತಿಪಕ್ಷದ ಸದಸ್ಯರು ಕೂಡ ನಗುತ್ತಲೇ ಸರ್ಕಾರ ನಿಮ್ಮದೇ. ಏನು ಮಾಡುತ್ತಿದ್ದೀರಾ ಎಂದು ನೀವೇ ಕೇಳಿ ಎಂದು ಕಿಚಾಯಿಸಿದರು. ಪ್ರವಾಹ ಪೀಡಿತ ಪ್ರದೇಶದ ಪುನರ್ವಸತಿಗೆ ರಾಜ್ಯ ಸರ್ಕಾರ ಮೂರು ಸಾವಿರ ಕೋಟಿ ರು. ಖರ್ಚು ಮಾಡಿರುವುದು ಸ್ವಾಗತಾರ್ಹ ಎಂದು ಲೆಹರ್‌ ಸಿಂಗ್‌ ಶ್ಲಾಘಿಸಿದರು.